ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರ ಣಕ್ಕೆ ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸುವ ಬಗ್ಗೆ ಸಂಸತ್ತಿನ ಅಧಿವೇಶನದ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ಬೆಂಬಲದ ಭರವಸೆ ನೀಡದಿದ್ದರೆ ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆಯಿಂದ ಹೊರನಡೆಯುವುದಾಗಿ ಎಎಪಿ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಪಾಟ್ನಾಗೆ ತೆರಳುವ ಮುನ್ನ ಸುಗ್ರೀವಾಜ್ಞೆ ವಿಚಾರ ಮತ್ತು ಎಎಪಿಯ ಎಚ್ಚರಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, “ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ತಮ್ಮ ಪಕ್ಷ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಹಾಗೂ ಇದು ಸಂಸತ್ತಿಗೆ ಸಂಬಂಧಿಸಿದ ವಿಷಯವಾಗಿರುವಾಗ ಆ ಕುರಿತು ಬೇರೆಡೆ ಏಕೆ ಮಾತನಾಡುತ್ತಿದ್ದಾರೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
“ಇದನ್ನು ವಿರೋಧಿಸುವುದು ಅಥವಾ ಅದನ್ನು ಪ್ರಸ್ತಾಪಿಸುವುದು ಹೊರಗೆ ನಡೆಯುವುದಿಲ್ಲ, ಅದು ಸಂಸತ್ತಿನಲ್ಲಿ ನಡೆಯುತ್ತದೆ. ಸಂಸತ್ತು ಅಧಿವೇಶನ ಆರಂಭವಾಗುವ ಮೊದಲು, ಎಲ್ಲ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾದ ವಿಷಯಗಳ ಬಗ್ಗೆ ನಿರ್ಧರಿಸುತ್ತಾರೆ. ಎಎಪಿ ಅವರು ಅದನ್ನು ತಿಳಿದಿದ್ದಾರೆ ಮತ್ತು ಅವರ ನಾಯಕರು ಸಹ ನಮ್ಮ ಸರ್ವಪಕ್ಷ ಸಭೆಗಳಿಗೆ ಆಗಮಿಸುತ್ತಾರೆ. ಅದರ ಬಗ್ಗೆ ಹೊರಗೆ ಏಕೆ ಪ್ರಚಾರವಾಗುತ್ತಿದೆ ಎಂದು ನನಗೆ ತಿಳಿದಿಲ್ಲ’’ ಎಂದು ಖರ್ಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಮಣಿಸಲು ಪಾಟ್ನಾದಲ್ಲಿ ಇಂದು ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ; 18 ಪಕ್ಷಗಳು ಭಾಗಿ
“ಸುಮಾರು 18 ರಿಂದ 20 ಪಕ್ಷಗಳು ಯಾವುದನ್ನು ವಿರೋಧಿಸಬೇಕು ಮತ್ತು ಯಾವುದನ್ನು ಸ್ವೀಕರಿಸಬೇಕು ಎಂಬುದರ ಕುರಿತು ಒಟ್ಟಾಗಿ ನಿರ್ಧರಿಸುತ್ತವೆ. ಹಾಗಾಗಿ ಈಗ ಏನನ್ನೂ ಹೇಳುವ ಬದಲು ಸಂಸತ್ತು ಪ್ರಾರಂಭವಾಗುವ ಮೊದಲು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಎಐಸಿಸಿ ಅಧ್ಯಕ್ಷರು ಹೇಳಿದರು.