“ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆ ಉಳಿಸಲು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ 2.75 ಟಿಎಂಸಿ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದ ಅವರು, “ತಕ್ಷಣದಿಂದಲೇ ನೀರು ಬಿಡುಗಡೆ ಮಾಡಲಾಗುವುದು. 75 ಕಿ.ಮೀ. ನೀರು ಹರಿಯಬೇಕಿದೆ. ಎರಡು ಮೂರು ದಿನದಲ್ಲಿ ನೀರು ತಲುಪಬಹುದು” ಎಂದು ಮಾಹಿತಿ ನೀಡಿದರು.
“ನಿನ್ನೆ ರಾತ್ರಿ ಕಲಬುರ್ಗಿ, ರಾಯಚೂರು, ಬಾಗಲಕೋಟೆ, ಯಾದಗಿರಿ ಭಾಗದ ಜಿಲ್ಲಾ ಮಂತ್ರಿಗಳು, ಎಲ್ಲ ಪಕ್ಷದ ಶಾಸಕರು, ರೈತ ಮುಖಂಡರ ಜೊತೆ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಜನಪ್ರತಿನಿಧಿಗಳು ವಾಸ್ತವ ಪರಿಸ್ಥಿತಿ ವಿವರಿಸಿ, ನೀರು ಬಿಡಲು ಒತ್ತಾಯಿಸಿದ್ದರು. ರಾಜ್ಯದ ಇತಿಹಾಸದಲ್ಲೇ ಈ ಬಾರಿ ಅತ್ಯಂತ ದೊಡ್ಡ ಪ್ರಮಾಣದ ಬರಗಾಲ ಎದುರಾಗಿದೆ. ಅತಿ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ” ಎಂದು ತಿಳಿಸಿದರು.
“ಬರ ಪರಿಸ್ಥಿತಿಯಲ್ಲಿ ಬೆಳೆ ಹಾಕಬೇಡಿ ಎಂದು ಮನವಿ ಮಾಡಿದ್ದರೂ ಕೆಲವು ರೈತರು ಭತ್ತದ ಬದಲು ಮೆಣಸಿನಕಾಯಿ ಬೆಳೆ ಹಾಕಿಕೊಂಡಿದ್ದಾರೆ. ಈ ಬೆಳೆ ನಾಶವಾದರೆ 2 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗುವ ಸಾಧ್ಯತೆ ಇದೆ. ರೈತರ ರಕ್ಷಣೆ ಉದ್ದೇಶದಿಂದ ಬೆಳೆಗಳಿಗೆ ಅಂತಿಮ ಬಾರಿಗೆ 2.75 ಟಿಎಂಸಿ ನೀರು ಬಿಡಲು ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ಡಿಕೆ ಶಿವಕುಮಾರ್ ತಿಳಿಸಿದರು.
“ಪ್ರತಿಭಟನಾ ನಿರತ ರೈತರು, ಶಾಸಕರುಗಳ ಮನವಿಗೆ ಸ್ಪಂದಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಮೆಣಸಿನಕಾಯಿ ಬೆಳೆಗಳಿಗೆ ಮಾತ್ರ ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಜವಾಬ್ದಾರಿಯನ್ನು ಆ ಭಾಗದ ರೈತರಿಗೆ ವಹಿಸಿ ನೀರು ಬಿಡುತ್ತಿದ್ದೇವೆ. ಈ ಹಿಂದೆ ಮಂಡ್ಯ ರೈತರ ರಕ್ಷಣೆ ಮಾಡಿದ್ದೆವು. ಈ ಮಧ್ಯೆ ಭದ್ರಾ ನೀರಿನ ವಿಚಾರದಲ್ಲಿ ಸಮಸ್ಯೆ ಎದುರಿಸಿದಾಗಲೂ ಕೂಡ ನಾವು ಸಮಸ್ಯೆ ನಿವಾರಣೆ ಮಾಡಿದ್ದೆವು. ಈಗ ಕೃಷ್ಣಾ ಮೇಲ್ದಂಡೆ ವ್ಯಾಪ್ತಿ ರೈತರ ರಕ್ಷಣೆ ಮಾಡಲಾಗುತ್ತಿದೆ. ಇದಾದ ನಂತರ ಕೃಷಿ ಉದ್ದೇಶಕ್ಕೆ ನೀರು ಬಿಡುವುದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಜೊತೆ ಸಹಕಾರ ನೀಡಬೇಕು” ಎಂದು ಉಪಮುಖ್ಯಮಂತ್ರಿ ಮನವಿ ಮಾಡಿದರು.
ಸದ್ಯ ಎಷ್ಟು ನೀರು ಸಂಗ್ರಹವಿದೆ ಎಂದು ಪತ್ರಕರ್ತರು ಕೇಳಿದಾಗ, “ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟು ಸೇರಿ 47 ಟಿಎಂಸಿ ನೀರು ಲಭ್ಯ ಇದೆ. ಕುಡಿಯುವ ನೀರಿಗೆ 37 ಟಿಎಂಸಿ ನೀರು, ಇತರೆ ಉದ್ದೇಶಕ್ಕೆ 3 ಟಿಎಂಸಿ ನೀರು ಬೇಕು. ನೀರು ಹರಿಸುವ ವೇಳೆ 1.5 ಟಿಎಂಸಿ ನೀರು ನಷ್ಟವಾಗುತ್ತದೆ. ಈ ಭಾಗದವರ ಒತ್ತಡಕ್ಕೆ ಈಗ 2.75 ಟಿಎಂಸಿ ನೀರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ. ಇನ್ನೂ ಆರು ತಿಂಗಳು ನೀರು ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಈ ಬಾರಿ ಕೊನೆಯದಾಗಿ ನಾವು ರೈತರ ಜಮೀನಿಗೆ ನೀರು ಹರಿಸುತ್ತಿದ್ದೇವೆ” ಎಂದು ತಿಳಿಸಿದರು.
“ಎಲ್ಲ ಪಕ್ಷದ ಶಾಸಕರು ಹಾಗೂ ಸಚಿವರುಗಳು ನನ್ನ ಮೇಲೆ ಹೆಚ್ಚು ಒತ್ತಡ ಹಾಕಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಈ ತೀರ್ಮಾನ ಕೈಗೊಂಡಿದ್ದೇವೆ” ಎಂದು ತಿಳಿಸಿದರು.
“ನೀರು ಬಳಕೆ ಮೇಲ್ವಿಚಾರಣೆಗೆ ಪೊಲೀಸರನ್ನು ಬಳಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಈ ಜವಾಬ್ದಾರಿಯನ್ನು ಜನಪ್ರತಿನಿಧಿ ಹಾಗೂ ರೈತ ಸಂಘಟನೆಗಳಿಗೇ ನೀಡುತ್ತೇನೆ. ನೀವೇ ಪೋಲೀಸರಾಗಿ ಈ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಅಧಿಕಾರಿಗಳಿಗೂ ನಾವು ಸೂಚನೆ ನೀಡಿದ್ದೇವೆ. ಆದರೆ ಅಧಿಕಾರಿಗಳು ರೈತರ ಜೊತೆ ಜಗಳ ಮಾಡಲು ಆಗುವುದಿಲ್ಲ. ಆ ರೀತಿ ಆದರೆ ಮಾಧ್ಯಮಗಳು ಅದನ್ನೇ ದೊಡ್ಡ ವಿಷಯ ಮಾಡುತ್ತವೆ. ಮಾಧ್ಯಮಗಳು ಕೂಡ ರೈತರ ಜವಾಬ್ದಾರಿ ಬಗ್ಗೆ ಆದ್ಯತೆ ನೀಡಬೇಕು” ಎಂದು ತಿಳಿಸಿದರು.
31 ಸಂಸದರ ತಂಡ ರಾಜ್ಯಕ್ಕೆ ಭೇಟಿ
ಈ ರೀತಿಯ ಸಮಸ್ಯೆಗಳು ಎದುರಾದಾಗ ಅನುಕೂಲ ಆಗುವ ನದಿ ಜೋಡಣೆ ವಿಚಾರ ಪ್ರಸ್ತಾಪದ ಬಗ್ಗೆ ಕೇಳಿದಾಗ, “ಇದು ಕೇಂದ್ರ ಸರ್ಕಾರದ ಯೋಜನೆ. ಇದೊಂದು ದೊಡ್ಡ ಯೋಜನೆಯಾಗಿದೆ. ಈ ಬಗ್ಗೆ ನಾಳೆ, ನಾಡಿದ್ದು ಕೇಂದ್ರದ 31 ಸಂಸದರ ತಂಡ ಕಾವೇರಿ ವೀಕ್ಷಣೆಗೆ ಬರುತ್ತಿದೆ. ನಮ್ಮ ನೀರಾವರಿ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.
“ಫೆಬ್ರವರಿಯಲ್ಲಿ ಬಜೆಟ್ ಮಂಡನೆಯಾಗಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಅನುದಾನದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಿ. ನಾವು ನಮ್ಮ ಪ್ರಸ್ತಾವನೆ ನೀಡುತ್ತೇವೆ” ಎಂದು ತಿಳಿಸಿದರು.
ದೇವರು, ಧರ್ಮ ವಿಚಾರದಲ್ಲಿ ರಾಜಕೀಯ ಅಗತ್ಯವಿಲ್ಲ
ರಾಮಮಂದಿರ ಉದ್ಘಾಟನೆಗೆ ತೆರಳುತ್ತೀರಾ ಎಂದು ಕೇಳಿದಾಗ, “ನನಗೆ ಹಾಗೂ ನಮ್ಮ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿಲ್ಲ. ನಮ್ಮ ಅಧ್ಯಕ್ಷರಿಗೆ ಆಹ್ವಾನ ಬಂದಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಪಕ್ಷ ಈ ವಿಚಾರದಲ್ಲಿ ತೀರ್ಮಾನ ಮಾಡುತ್ತದೆ. ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಆರ್ ಎಸ್ ಎಸ್ ಹಾಗೂ ಬಿಜೆಪಿಯವರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯಲ್ಲೆ ಮಂತ್ರಾಕ್ಷತೆ ಮಾಡಿ ಹಂಚುತ್ತಿದ್ದಾರೆ. ಅದೇ ನಮಗೆ ಸಂತೋಷ” ಎಂದು ತಿಳಿಸಿದರು.
ಬೊಮ್ಮಾಯಿ ಅವರಿಗೆ ಮರೆವು ಶುರುವಾಗಿದೆ
ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಏನಿಲ್ಲ. ಇದು ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರ ಹೇಳಿಕೆಯ ಬಗ್ಗೆ ಉತ್ತರಿಸಿದ ಡಿಕೆ ಶಿವಕುಮಾರ್, “ಆಹಾರ ಭದ್ರತಾ ಕಾಯ್ದೆ ತಂದಿದ್ದು ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ. ಈ ವಿಚಾರವನ್ನು ಬೊಮ್ಮಾಯಿ ಅವರು ಮರೆತಿದ್ದಾರೆ. ನಾವು 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ನನ್ನ ಸ್ನೇಹಿತನಿಗೆ ಮರೆವು ಶುರುವಾಗಿರಬೇಕು” ಎಂದು ತಿರುಗೇಟು ನೀಡಿದರು.
ನೈಸ್ ವಿಚಾರದಲ್ಲಿ ಸರ್ಕಾರ ಜಯಚಂದ್ರ ಅವರ ಬಾಯಿ ಕಟ್ಟಿಹಾಕಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಈ ಬಗ್ಗೆ ಬೇರೆ ಸಮಯದಲ್ಲಿ ಚರ್ಚೆ ಮಾಡೋಣ. ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ಎಂದು ಹೇಳಿದ್ದೆ. ಅಲ್ಲಿ ಯಾಕೆ ಚರ್ಚೆಗೆ ಬರಲಿಲ್ಲ?” ಎಂದು ಪ್ರಶ್ನಿಸಿದರು.