- ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿ ಅಭಿಮತ
- ‘2000ನೇ ಇಸವಿಯಲ್ಲಿ ಶೇ.34 ರಷ್ಟಿದ್ದ ಮಹಿಳಾ ಪ್ರಮಾಣ ಈಗ ಶೇ.22ಕ್ಕೆ ಕುಸಿದಿದೆ’
ದೇಶದ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಶನಿವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿ ಮತನಾಡಿದ ಅವರು, “ಮಹಿಳೆಯರು ದೇಶದ ಶಕ್ತಿ. ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಕಡೆಗಣಿಸಲು ಸಾಧ್ಯವೇ ಇಲ್ಲ. ಇಂದಿನ ಘಟಿಕೋತ್ಸವದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಪದವಿ ಪ್ರಮಾಣ ಪತ್ರ ಸ್ವೀಕರಿಸುತ್ತಿರುವುದು ನನಗೆ ವೈಯಕ್ತಿಕವಾಗಿ ಹೆಚ್ಚು ಸಂತಸ ತಂದಿದೆ” ಎಂದರು.
“ವರ್ಷದಿಂದ ವರ್ಷಕ್ಕೆ ದೇಶದ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುಸಿಯುತ್ತಿದೆ. ದೇಶದ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ 2000ನೇ ಇಸವಿಯಲ್ಲಿ ಶೇ.34 ರಷ್ಟಿತ್ತು. ಇದೇ ಸರಾಸರಿ ಮುಂದುವರೆದಿದ್ದರೆ ಇಂದು ಕನಿಷ್ಠ ಶೇ.50 ರಷ್ಟು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಪುರುಷರಿಗೆ ಸಮಾನ ಸಂಖ್ಯೆಯಲ್ಲಿ ಉದ್ಯೋಗದಲ್ಲಿರಬೇಕಿತ್ತು. ಆದರೆ, ಇಂದಿನ ಅಂಕಿಸಂಖ್ಯೆಗಳನ್ನು ಗಮನಿಸಿದರೆ ಆಘಾತವಾಗುತ್ತದೆ. ಏಕೆಂದರೆ ಈ ಪ್ರಮಾಣ ಶೇ.22ಕ್ಕೆ ಇಳಿದಿದೆ” ಎಂದರು.
“ಬಾಂಗ್ಲಾದೇಶದಲ್ಲಿ ಈ ಪ್ರಮಾಣ ಶೇ.38ರಷ್ಟಿದ್ದು ನಮಗಿಂತ ಮುಂದಿದ್ದಾರೆ. ಸಮ ಸಮಾಜ ನಿರ್ಮಿಸಲು ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಾಣಬೇಕು. ಪದವಿ ಪಡೆದು ನಾಳೆಯಿಂದ ಎಲ್ಲರೂ ಹೊಸ ಬದುಕಿಗೆ ಕಾಲಿಡಲಿದ್ದೀರಿ. ವಿವಿಧ ಕ್ಷೇತ್ರ-ವಿವಿಧ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಆದರೆ, ನೀವು ಯಾವ ಕೆಲಸದಲ್ಲಿದ್ದೀರಿ ಎಂಬುದು ಮುಖ್ಯವಲ್ಲ, ಯಾವ ಕೆಲಸದಲ್ಲಿದ್ದರೂ ಅದರಲ್ಲಿ ನೀವೇ ಬೆಸ್ಟ್ ಎನ್ನುವಂತಿರಬೇಕು” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾನೂನಿನ ಅಗತ್ಯವಿದೆ
ಶ್ರೀಮತಿಯನ್ನು ನೆನೆಸಿಕೊಂಡ ಸಚಿವರು
ತಮ್ಮ ಶ್ರೀಮತಿ ಮೀನಾಕ್ಷಿ ಶೇಷಾದ್ರಿ ಅವರನ್ನು ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಂಡ ಸಚಿವ ಕೃಷ್ಣಭೈರೇಗೌಡ ಅವರು, “ನಾನು ಒಂದು ಇಲಾಖೆಯ ಸಚಿವನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದೇನೆ. ಆದರೆ, ನನ್ನ ಶ್ರೀಮತಿಯವರು ಐಟಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು, ಆ ಕೆಲಸದ ಜೊತೆಗೆ ನಮ್ಮ ಕ್ಷೇತ್ರದ ಕೆಲಸದಲ್ಲೂ ನನಗೆ ಸಹಾಯ ಮಾಡುತ್ತಾರೆ. ಅಲ್ಲದೆ, ಮನೆ ನಿರ್ವಹಿಸಿಕೊಂಡು ಸಮಾಜಮುಖಿ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಅವರು ನನಗಿಂತ ನಾಲ್ಕುಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ. ಯಾವ ಕೆಲಸದಲ್ಲಿ ತೊಡಗಿದರೂ ಶೇ.100 ರಷ್ಟು ಪರಿಶ್ರಮವಹಿಸಲು ಪ್ರಯತ್ನಿಸುತ್ತಾರೆ. ಈ ಶಕ್ತಿ ಎಲ್ಲ ಮಹಿಳೆಯರಲ್ಲೂ ಇದೆ” ಎಂದರು.
ಕಾರ್ಯಕ್ರಮದಲ್ಲಿ ಕ್ರೈಸ್ಟ್ ಯೂನಿವರ್ಸಿಟಿ ಉಪ ಕುಲಪತಿ ಜೋಸೆಫ್ ಸಿಸಿ ಹಾಗೂ ಕುಲ ಸಚಿವ ಡಾ.ಅನಿಲ್ ಜೋಸೆಫ್ ಪಿಂಟೋ ಸೇರಿದಂತೆ ಇತರರು ಉಪಸ್ಥಿತರಿದ್ದರು.