ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಪ್ರಕರಣ ಸಂಬಂಧ ಜುಲೈ 27ರಂದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮನ್ಸ್ ಜಾರಿ ಮಾಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್ ಅವರು ಮೇ 9 ರಂದು ಕಾಂಗ್ರೆಸ್‌ನ ಈ ಮೂವರು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ದೂರಿನಲ್ಲಿ, 2023ರ ಮೇ 5ರಂದು ಪತ್ರಿಕೆಗಳಲ್ಲಿ ಪ್ರಕಟವಾದ ಕಾಂಗ್ರೆಸ್ ಜಾಹೀರಾತಿನಲ್ಲಿ ಬಿಜೆಪಿ ಸರ್ಕಾರವು 40% ಭ್ರಷ್ಟಾಚಾರದಲ್ಲಿ ತೊಡಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ₹ 1.5 ಲಕ್ಷ ಕೋಟಿ ಲೂಟಿ ಮಾಡಿದೆಯೆಂದು ದೂರಿದ್ದಾರೆ. ಆ ಆರೋಪಗಳು ‘ಆಧಾರರಹಿತ’ ಮತ್ತು ‘ಮಾನಹಾನಿಕರ’ ಎಂದು ಕೇಶವ ಪ್ರಸಾದ್ ಹೇಳಿದ್ದಾರೆ.
ಪ್ರಕರಣದ ಕುರಿತು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದು, “ಬಿಜೆಪಿ ಹತಾಶೆಯಿಂದ ವರ್ತಿಸುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಬಿಜೆಪಿ ಚುನಾವಣೆಯಲ್ಲಿ ಸೋತಿದೆ. ಬಿಜೆಪಿಗರನ್ನು ಜನರು ತಿರಸ್ಕರಿಸಿದ್ದಾರೆ. ಅವರು ಈಗ ಹತಾಶರಾಗಿದ್ದಾರೆ. ಭ್ರಷ್ಟಾಚಾರ ಆರೋಪಗಳ ಬಗ್ಗೆ ಪ್ರಧಾನಿ ತನಿಖೆಗೆ ಆದೇಶಿಸಲಿಲ್ಲ. ಬೊಮ್ಮಾಯಿ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ. ನಾವು ಬಿಜೆಪಿಯ ದುರಾಡಳಿತವನ್ನು ಜನರ ಮುಂದಿಟ್ಟೆವು. ಆದರೆ, ಈಗ ಬಿಜೆಪಿಗರು ದೂರು ದಾಖಲಿಸುವ ಪ್ರಹಸನ ನಡೆಸುತ್ತಿದ್ದಾರೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ಸಲೀಂ ಅಹ್ಮದ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉಚಿತ ಅಕ್ಕಿ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ
ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದ ನಂತರ, ಬಿಜೆಪಿ ವಿರುದ್ಧ ಕಾಂಗ್ರೆಸ್ ಪೇ-ಸಿಎಂ ಅಭಿಯಾನ ನಡೆಸಿತ್ತು. ಭ್ರಷ್ಟಾಚಾರದ ಆರೋಪಗಳನ್ನು ಚುನಾವಣಾ ವಿಷಯವನ್ನಾಗಿಸಿತ್ತು. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಿತು.
ಅಂದಹಾಗೆ, ಈ ಮಧ್ಯೆ, ಮೋದಿ ಉಪನಾಮದ ಕುರಿತು ಟೀಕೆ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪನ್ನು ಪ್ರಶ್ನಿಸಿ ರಾಹುಲ್‌ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿದೆ.