ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದ್ದು, ಫೆಬ್ರವರಿ 8ರಂದು ಚುನಾವಣಾ ಫಲಿತಾಂಶವು ಪ್ರಕಟವಾಗಲಿದೆ. ಈಗಾಗಲೇ ಎಎಪಿ, ಬಿಜೆಪಿ, ಕಾಂಗ್ರೆಸ್ ತಮ್ಮ ಭವಿಷ್ಯದ ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಸುಮಾರು 15 ವರ್ಷ ಕಾಂಗ್ರೆಸ್, 10 ವರ್ಷ ಎಎಪಿ ರಾಷ್ಟ್ರ ರಾಜಧಾನಿ ಗದ್ದುಗೆ ಪಡೆದ ಕಾರಣ ಈ ಬಾರಿ ನಮಗೆ ಸಿಎಂ ಕುರ್ಚಿ ಸಿಗಬಹುದು ಎಂಬುದು ಬಿಜೆಪಿ ನಿರೀಕ್ಷೆ. ಆದರೆ ಈ ಸಾಧನೆ ಮಾಡಲು ಕೇಸರಿಪಡೆಗೆ ಪ್ರಬಲ ನಾಯಕತ್ವವೇ ಇಲ್ಲ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎದುರು ಸ್ಪರ್ಧೆಗೆ ಪರ್ವೇಶ್ ವರ್ಮಾ ಅವರನ್ನು ಬಿಜೆಪಿ ಕಣಕ್ಕಿಳಿಸಿದರೂ ಬಿಜೆಪಿಯ ಸಿಎಂ ಅಭ್ಯರ್ಥಿ ಮುಖ ಅವರದ್ದಲ್ಲ.
ದೆಹಲಿಯಲ್ಲಿ ಚುನಾವಣೆ ಕಣದಲ್ಲಿ ಪ್ರಮುಖವಾಗಿ ಬಿಜೆಪಿ, ಎಎಪಿ, ಕಾಂಗ್ರೆಸ್ ಇದೆ. ಈ ಪೈಕಿ ಆಡಳಿತಾರೂಢ ಎಎಪಿ ಈಗಾಗಲೇ 70 ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ ಇನ್ನೂ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡಿಲ್ಲ. ದೆಹಲಿ ಬಿಜೆಪಿ ಮತ್ತು ಎಎಪಿ ಎರಡೂ ಪಕ್ಷಕ್ಕೂ ಪ್ರತಿಷ್ಠೆಯ ಕಣವಾಗಿರುವುದು ಹೌದು. ಆದರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಕಾಂಗ್ರೆಸ್ ಅಧಿಕಾರ ಬಾಚಿಕೊಳ್ಳುವಷ್ಟಾದರೂ ಸಿದ್ಧತೆ ಮಾಡಿಕೊಳ್ಳಬೇಕಿದ್ದ ಕಾಂಗ್ರೆಸ್ ಗಾಢ ನಿದ್ರೆಯಲ್ಲಿರುವಂತೆ ಕಾಣಿಸುತ್ತಿದೆ.
ಇದನ್ನು ಓದಿದ್ದೀರಾ? ಫೆಬ್ರವರಿ 5 ರಂದು ದೆಹಲಿ ವಿಧಾನಸಭೆ ಚುನಾವಣೆ: ಹೊಸ ದಾಖಲೆ ನಿರ್ಮಿಸಿದ ರಾಜೀವ್ ಕುಮಾರ್
ದೆಹಲಿಯಲ್ಲಿ ಅಭಿವೃದ್ದಿಯಿಂದ ಹಿಡಿದು ಭ್ರಷ್ಟಾಚಾರ ಆರೋಪದವರೆಗೂ ಎಎಪಿ ಹಲವು ಸುಳಿಯಲ್ಲಿ ಸಿಲುಕಿದೆ. ಈ ಸುಳಿಯನ್ನು ಕಗ್ಗಂಟು ಮಾಡಿ ಆಮ್ ಆದ್ಮಿ ಪಕ್ಷ ಹೊರಕ್ಕೂ ಹೋಗಲಾಗದೆ, ಒಳಗೂ ಇರಲಾರದೆ ತಡಕಾಡುವಂತೆ ಮಾಡುವ ಸಾಹಸಕ್ಕೆ ಬಿಜೆಪಿ ಇಳಿದಿದೆ. ಕೇಂದ್ರದಲ್ಲಿರುವ ಬಿಜೆಪಿ ಇಡಿ, ಸಿಬಿಐ, ಆದಾಯ ತೆರಿಗೆಯಂತಹ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಂಡು ವಿಪಕ್ಷಗಳ ಮೇಲೆ ಪ್ರಯೋಗಿಸಿದೆ. ಬಿಜೆಪಿಯ ದಾಳಗಳನ್ನು ಮೀರಿ ಮತ್ತೆ ಅಧಿಕಾರಕ್ಕೇರಲು ಎಎಪಿ ಭಾರೀ ಕಸರತ್ತು ನಡೆಸುತ್ತಿದೆ. ಆದರೆ, ಕಾಂಗ್ರೆಸ್ನ ಅಬ್ಬರ ಎಲ್ಲಿಯೂ ಕಾಣಸಿಗುತ್ತಿಲ್ಲ. ಬಿಜೆಪಿ-ಎಎಪಿ ನಡುವಿನ ಹೋರಾಟದಲ್ಲಿ ಕಾಂಗ್ರೆಸ್ ನಗಣ್ಯವಾದಂತೆ ಕಾಣಿಸುತ್ತಿದೆ.
ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ
ಲೋಕಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಇಂಡಿಯಾ ಒಕ್ಕೂಟದ ಭಾಗವಾಗಿ ಮಿತ್ರ ಪಕ್ಷಗಳಾಗಿ ಸ್ಪರ್ಧಿಸಿದ್ದವು. ದೆಹಲಿಯಲ್ಲಿ ಉಭಯ ಪಕ್ಷಗಳು ಸೇರಿ ಶೇಕಡಾ 43.1ರಷ್ಟು ಮತಗಳನ್ನು ಬಾಚಿಕೊಂಡಿದ್ದವು. ಎರಡೂ ಪಕ್ಷಗಳು ಪರಸ್ಪರ ಮತ ಬ್ಯಾಂಕ್ ಅನ್ನು ಹೊಂದಿದ್ದರೂ ಕೂಡಾ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳಿದಿವೆ. ಇದರಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆಗಳೆ ಹೆಚ್ಚು ಎಂದು ಹೇಳುತ್ತಿದ್ದಾರೆ ರಾಜಕೀಯ ತಜ್ಞರು.
ಏನೇ ಆದರೂ 2013ರಿಂದ ಎಎಪಿ ದೆಹಲಿಯನ್ನು ಭದ್ರವಾಗಿ ಹಿಡಿದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಮತಪಾಲನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಆದರೆ, ಎಎಪಿ ದೆಹಲಿ ಗದ್ದುಗೆ ಹಿಡಿಯುವ ಮುನ್ನ ದೆಹಲಿಯನ್ನು ಆಳುತ್ತಿದ್ದ ಕಾಂಗ್ರೆಸ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ನ ಮತ ಪ್ರಮಾಣ ಇಳಿಯುತ್ತಲೇ ಸಾಗುತ್ತಿದೆ. ಇತ್ತ, ಕಾಂಗ್ರೆಸ್ನಿಂದ ದೂರವಾಗುತ್ತಿರುವ ಮತದಾರರನ್ನು ಬಿಜೆಪಿ ತನ್ನ ಬುಟ್ಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಮೇಲ್ವರ್ಗ, ಶ್ರೀಮಂತರ, ಉದ್ಯಮಿಗಳ ಪಕ್ಷವಾಗಿ ಉಳಿದುಕೊಂಡು, ಪ್ರಬಲ ವರ್ಗದ ಮತ ಬ್ಯಾಂಕ್ಅನ್ನು ಭದ್ರಪಡಿಸಿಕೊಂಡಿದೆ. ದಲಿತ, ಬಡ, ಅಲ್ಪಸಂಖ್ಯಾತರ ಮತಗಳನ್ನು ಪಡೆಯುವಲ್ಲಿ ಎಎಪಿ ಯಶಸ್ವಿಯಾಗಿದೆ.
ಇದನ್ನು ಓದಿದ್ದೀರಾ? ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟ
ಎಎಪಿಗೆ ನಾಲ್ಕನೇ ವಿಧಾನಸಭಾ ಚುನಾವಣೆ; ಪ್ರತಿಷ್ಠೆ ಪ್ರಶ್ನೆ
2012ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಸ್ಥಾಪನೆಯಾದ ಬಳಿಕ ಇದು ದೆಹಲಿಯಲ್ಲಿ ಎಎಪಿ ಸ್ಪರ್ಧಿಸುತ್ತಿರುವ ನಾಲ್ಕನೇ ವಿಧಾನಸಭೆ ಚುನಾವಣೆ. ಎಎಪಿ ಮೊದಲು ಚುನಾವಣಾ ಕಣಕ್ಕೆ ಇಳಿದಿದ್ದು 2013ರಲ್ಲಿ. 15 ವರ್ಷದಿಂದ ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಳಿಕ ಕಾಂಗ್ರೆಸ್ ಬೆಂಬಲದಲ್ಲೇ 2014ರಲ್ಲಿ ಕೇಜ್ರಿವಾಲ್ ಸಿಎಂ ಆದರು, 49 ದಿನಗಳ ಆಡಳಿತ ನಡೆಸಿ ರಾಜೀನಾಮೆ ನೀಡಿದರು. ಅದಾದ ಬಳಿಕ 2015ರಲ್ಲಿ ಎಎಪಿ ಸರಳ ಬಹುಮತ ಪಡೆದು ಅಧಿಕಾರಕ್ಕೇರಿತು. 2020ರಲ್ಲಿ ಭರ್ಜರಿ ಜಯ ಸಾಧಿಸಿ ಕೇಜ್ರಿವಾಲ್ 3ನೇ ಬಾರಿಗೆ ಮುಖ್ಯಮಂತ್ರಿಯಾದರು. ನಿರಂತರವಾಗಿ 15 ವರ್ಷ ದೆಹಲಿಯನ್ನು ಆಳಿದ್ದ ಕಾಂಗ್ರೆಸ್ನ ಕೋಟೆಯನ್ನು ಎಎಪಿ ಸಂಪೂರ್ಣವಾಗಿ ಕೆಡವಿತು. ಈಗ ಎಎಪಿ 10 ವರ್ಷದಲ್ಲಿ ಕಟ್ಟಿದ ಸುಭದ್ರ ರಾಜಕೀಯ ಕೋಟೆಯನ್ನು ಉರುಳಿಸಲು ಬಿಜೆಪಿ ಹವಣಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಒಟ್ಟು 7 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿಗೆ ವಿಧಾನಸಭಾ ಚುನಾವಣೆ ಭಾರೀ ಸವಾಲಾಗಿದೆ. ಜನಪರ ಯೋಜನೆಗಳೊಂದಿಗೆ ಎಎಪಿ ಜನರನ್ನು ಗೆಲ್ಲುತ್ತಿದ್ದ, ವಿಧಾನಸಭೆಯಲ್ಲಿ 4ನೇ ಬಾರಿಗೆ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.
ಬಿಜೆಪಿಗೆ ಪ್ರತಿಷ್ಠೆಯ ಕಣ ದೆಹಲಿ
ದೆಹಲಿ 15 ವರ್ಷ ಕಾಂಗ್ರೆಸ್ ‘ಕೈ’ಯಲ್ಲಿತ್ತು. ಆನಂತರ, 10 ವರ್ಷಗಳಿಂದ ಎಎಪಿ ತೆಕ್ಕೆಯಲ್ಲಿದೆ. 1998ರಲ್ಲಿ ಸುಷ್ಮಾ ಸ್ವರಾಜ್ ಅವರು 52 ದಿನಗಳ ಅಲ್ಪಾವಧಿಯ ಮುಖ್ಯಮಂತ್ರಿಯಾಗಿದ್ದರು. ಆ ನಂತರ, ಕಳೆದ 27 ವರ್ಷಗಳಿಂದ ಬಿಜೆಪಿಗೆ ದೆಹಲಿಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರಕ್ಕೇರಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಈ ಬಾರಿ ದೆಹಲಿಯನ್ನು ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. 1998ರಿಂದ ಈವರೆಗೆ ದೆಹಲಿಯಲ್ಲಿ ಬಿಜೆಪಿಯ ಮತ ಪ್ರಮಾಣ ಕೊಂಚ ಕೊಂಚವೇ ಹೆಚ್ಚಾಗುತ್ತಿದ್ದರೂ ಕೂಡಾ 2020ರ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತ್ತು. 2020ರಲ್ಲಿ ಒಟ್ಟು 70 ಕ್ಷೇತ್ರಗಳ ಪೈಕಿ ಕೇವಲ 8 ಕ್ಷೇತ್ರಗಳನ್ನು ಗೆದ್ದು, ನೇಮಕಾವಸ್ತೆಗಷ್ಟೇ ವಿಪಕ್ಷವೆಂಬ ಹಣೆಪಟ್ಟಿ ಕಟ್ಟಿಕೊಂಡು ವಿಧಾನಸಭೆಯಲ್ಲಿ ಕುಳಿತಿತ್ತು. 2014ರಿಂದ ಕೇಂದ್ರದಲ್ಲಿ ಪ್ರಧಾನಿ ನರೆಂದ್ರ ಮೋದಿ ಸರ್ಕಾರ ಇದ್ದರೂ ಕೂಡಾ ರಾಷ್ಟ್ರ ರಾಜಧಾನಿ ಬಿಜೆಪಿಯ ಬಾಹುವಲ್ಲಿಲ್ಲ.
ಬಿಜೆಪಿಯ ಪ್ರಚಾರ: ಎಡವುವುದೆಲ್ಲಿ?
ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣ, ಶೀಶ್ ಮಹಲ್, ವಾಯುಮಾಲಿನ್ಯ, ನೀರಿನ ಸಮಸ್ಯೆ ಮೊದಲಾದವುಗಳನ್ನು ಮುಂದಿಟ್ಟುಕೊಂಡು ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ. ಆದರೆ ಅರವಿಂದ್ ಕೇಜ್ರಿವಾಲ್ ವಿರುದ್ಧವಾಗಿ ಪ್ರಬಲ ಮುಖ್ಯಮಂತ್ರಿ ಪ್ರತಿಸ್ಪರ್ಧಿಯನ್ನು ಬಿಜೆಪಿ ಹೊಂದಿಲ್ಲ. ಹಾಗೆಯೇ ಎಎಪಿಯ ಗ್ಯಾರಂಟಿಗಳಿಗೆ ಪ್ರತಿಯಾಗಿ ಯಾವುದೇ ಭರವಸೆಗಳನ್ನು ಬಿಜೆಪಿ ಈವರೆಗೂ ನೀಡಿಲ್ಲ. ವಿಧಾನಸಭಾ ಚುನಾವಣೆಗಳಲ್ಲಿ ಸ್ಥಳೀಯ ವಿಚಾರಗಳೇ ಚರ್ಚೆಯಾಗುತ್ತವೆ. ಆ ವಿಚಾರಗಳ ಆಧಾರದ ಮೇಲೆಯೇ ಮತದಾರರು ಮತ ಚಲಾಯಿಸುತ್ತಾರೆ. ಆದರೆ, ಬಿಜೆಪಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹವಾ ಕೂಡ ಕೆಲಸ ಮಾಡುತ್ತಿಲ್ಲ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು: ಅರವಿಂದ್ ಕೇಜ್ರಿವಾಲ್
ಕಾಂಗ್ರೆಸ್ ಗ್ಯಾರಂಟಿ
ಬಿಜೆಪಿ ಮತ್ತು ಎಎಪಿ ನಡುವೆ ನೇರಾ ಹಣಾಹಣಿ ನಡೆಯುವಂತೆ ಪ್ರಚಾರಗಳು ಬಿರುಸಾಗಿ ಸಾಗುತ್ತಿರುವ ನಡುವೆ ಕಾಂಗ್ರೆಸ್ ಮತ್ತೆ ಕೊಂಚ ಉತ್ತಮ ಪ್ರದರ್ಶನ ತೋರುವ ಭರವಸೆಯಲ್ಲಿದೆ. 2015ರಲ್ಲಿ 8 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೂ, 2020ರಲ್ಲಿ ಒಂದು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಲೋಕಸಭೆ ಚುನಾವಣೆ ಬಳಿಕ ಈಗ ದೆಹಲಿಯಲ್ಲಿಯೂ ಕೆಲವು ಕ್ಷೇತ್ರಗಳಲ್ಲಿ ಜಯಗಳಿಸುವ ಭರವಸೆ ಕಾಂಗ್ರೆಸ್ನದ್ದು.
ಏನೇ ಇರಲಿ, ಈಗಾಗಲೇ ದೆಹಲಿಯಲ್ಲಿ ಎಎಪಿ ಉತ್ತಮ ಶಾಲಾ-ಕಾಲೇಜು ನಿರ್ಮಾಣ, ಉತ್ತಮ ಆರೋಗ್ಯ ವ್ಯವಸ್ಥೆ ಮೊದಲಾದವುಗಳಿಂದ ಜನಮನ ಗೆದ್ದಿದೆ. ಇಂತಹ ಹಲವು ಯೋಜನೆಗಳನ್ನು ತನ್ನ 2025ರ ದೆಹಲಿ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಎಎಪಿ ಘೋಷಿಸಿದೆ. ಆದರೆ ಭ್ರಷ್ಟಾಚಾರ ಆರೋಪ, ವಾಯುಮಾಲಿನ್ಯ ಮೊದಲಾದವು ಅರವಿಂದ್ ಕೇಜ್ರಿವಾಲ್ ಮತ್ತೆ ಕೂರಲಿರುವ ಸಿಎಂ ಕುರ್ಚಿಯನ್ನು ಅಲುಗಿಸಲೂಬಹುದು.
