ದೆಹಲಿ ಅಬಕಾರಿ ನೀತಿ ಹಗರಣದ ಆಪಾದನೆ ಹೊತ್ತು ಬಂಧಿತರಾಗಿ ಜೈಲು ಸೇರಿದ್ದ ಅರವಿಂದ ಕೇಜ್ರಿವಾಲ್ ಜಾಮೀನು ಪಡೆದು ಹೊರಬಂದಿದ್ದಾರೆ. ಜಾಮೀನು ಪಡೆದ ಮೇಲೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾವು ಅಧಿಕಾರ ದಾಹಿಯಲ್ಲ. ಹುದ್ದೆಗೆ, ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ ಎಂದೂ ಕೇಜ್ರಿವಾಲ್ ಹೇಳಿದ್ದಾರೆ. ಜೈಲು ಸೇರಿದ ಬಳಿಕ, ಬಿದ್ದುಹೋಗಿರುವ ತಮ್ಮ ಇಮೇಜ್‌ಅನ್ನು ಮತ್ತೆ ಕಟ್ಟಿಕೊಳ್ಳಲು ಜನರ ಮುಂದೆ ಹೋಗಲು ನಿರ್ಧರಿಸಿದ್ದಾರೆ.
2013ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಎಎಪಿ ಗೆದ್ದು, ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದರು. ಆಗ, ಅವರಲ್ಲಿ ಕೆಲವು ಹಠಾತ್ ನಿರ್ಧಾರ ಪ್ರವೃತ್ತಿಗಳಿದ್ದವು. ಈಗ ಅದು ಕಡಿಮೆಯಾಗಿದೆ. 2013ರಲ್ಲಿ ಕೇಜ್ರಿವಾಲ್ ಒಳಗೊಂಡು ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನವು ದೆಹಲಿಯಲ್ಲಿ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿತು. ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಕಾಂಗ್ರೆಸ್ಸನ್ನು ಮಣಿಸಿತು. ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕೇಜ್ರಿವಾಲ್, ದೆಹಲಿ ವಿಧಾನಸಭೆಯಲ್ಲಿ ‘ಜನಲೋಕಪಾಲ್ ಮಸೂದೆ’ಯನ್ನು ಮಂಡಿಸಿದರು. ಆದರೆ, ಅದು ಅಂಗೀಕಾರವಾಗಲಿಲ್ಲ. ಇದರಿಂದ ವಿಚಲಿತರಾಗಿದ್ದ ಕೇಜ್ರಿವಾಲ್ 48 ದಿನಗಳ ಆಡಳಿತ ನಡೆಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿಧಾನಸಭೆಯಲ್ಲಿ ಹೆಚ್ಚಿನ ಬಲಕ್ಕಾಗಿ ಹೊಸ ಜನಾದೇಶ ಕೋರಿದರು. 2015ರಲ್ಲಿ ನಡೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು, ಮತ್ತೆ ಮುಖ್ಯಮಂತ್ರಿಯಾದರು.
ಇಂತಹ ಪ್ರಹಸನ ನಡೆದು, ಒಂದು ದಶಕದ (10 ವರ್ಷ) ನಂತರವೂ, ಎರಡು ಅವಧಿಯ ಸರ್ಕಾರ ನಡೆಸಿದ ಬಳಿಕವೂ, ಕೇಜ್ರಿವಾಲ್ ಅವರ ಆದರ್ಶವಾದ ಮತ್ತು ಸಿದ್ಧಾಂತದಲ್ಲಿ ಕೆಲವು ಏರು-ಪೇರುಗಳು ಕಾಣಸಿಗುತ್ತಿವೆ. ಯಾವುದೇ ಕಾರಣಕ್ಕೂ ಮೋದಿ-ಬಿಜೆಪಿಗೆ ಹೆಚ್ಚಿನ ಅವಕಾಶ ನೀಡಬಾರದೆಂಬ ಕಾರಣಕ್ಕೆ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಕ್ಕೂ ಸ್ವಾಗತಿಸಿದ್ದ, ಅಯೋಧ್ಯೆಯ ರಾಮಮಂದಿರಕ್ಕೆ ಉಚಿತ ಪ್ರಯಾಣದ ವ್ಯವಸ್ಥೆಯನ್ನೂ ಕಲ್ಪಿಸಿದ್ದ ಕೇಜ್ರಿವಾಲ್, ಈಗ ತಮ್ಮ ಸಿದ್ಧಾಂತಗಳಲ್ಲಿ ಮತ್ತಷ್ಟು ಗಟ್ಟಿ ನಿಲುವುಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಆದರೂ, ಅವರ ನಿಲುವುಗಳಲ್ಲಿ ಪೂರ್ಣ ಸ್ಪಷ್ಟತೆ ಕಾಣುತ್ತಿಲ್ಲ.
ಕೇಜ್ರಿವಾಲ್ ಮತ್ತೊಮ್ಮೆ ದೆಹಲಿ ಮುಖ್ಯಮಂತ್ರಿ ಆಗಲು ಹೊಸ ಜನಾದೇಶ ಬಯಸಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್ ವಿಧಿಸಿರುವ ನಿರ್ಬಂಧಗಳಿಂದ ಮುಕ್ತರಾಗಲು ಎದುರು ನೋಡುತ್ತಿದ್ದಾರೆ. ಆರು ತಿಂಗಳು ಜೈಲಿನಲ್ಲಿದ್ದು, ತಾವು ಕಳೆದುಕೊಂಡಿರುವ ಇಮೇಜ್‌ಅನ್ನು ಮರಳಿ ಕಟ್ಟಿಕೊಳ್ಳಲು, ದೆಹಲಿಯಲ್ಲಿ ಯಾರೊಂದಿಗೆ ತಾವಿರಬೇಕೆಂದು ಸಂಪೂರ್ಣವಾಗಿ ನಿರ್ಧರಿಸಿಲ್ಲದ ಜನರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಅದಕ್ಕಾಗಿ, ಅವರಿಗೆ ಹೊಸ ಜನಾದೇಶದ ಅಗತ್ಯವಿದೆ.
”ನನಗೆ ಕಾನೂನು ನ್ಯಾಯಾಲಯಗಳಿಂದ ನ್ಯಾಯ ಸಿಕ್ಕಿದೆ… ಈಗ ನನಗೆ ಜನತಾ ನ್ಯಾಯಾಲಯದಿಂದ ನ್ಯಾಯ ಸಿಗಬೇಕಿದೆ. ನಾನು ದೆಹಲಿಯ ಜನರಿಂದ ನ್ಯಾಯ ಕೇಳಲು ಬಯಸುತ್ತೇನೆ. ಕೇಜ್ರಿವಾಲ್ ನಿರಪರಾಧಿಯೇ ಅಥವಾ ಅಪರಾಧಿಯೇ? ನಾನು ಸರಿಯಾಗಿ ಕೆಲಸ ಮಾಡಿದ್ದರೆ, ನನಗೆ ದೆಹಲಿ ಜನರು ಮತ ನೀಡುತ್ತಾರೆ” ಎನ್ನುತ್ತಿದ್ದಾರೆ.
ಆದರೆ, ಅವರು 10 ವರ್ಷಗಳ ಹಿಂದೆ ಎನ್‌ಜಿಒ ಮುಖ್ಯಸ್ಥನಾಗಿ ಜನರನ್ನು ತಲುಪಿದ್ದ ರೀತಿಯಲ್ಲಿಯೇ ಮತ್ತೆ ಜನರ ಬಳಿ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಅದು ಈಗ ಸಮಂಜಸವಲ್ಲ. ಅಂದಿಗೂ-ಇಂದಿಗೂ ನಾನಾ ಬದಲಾವಣೆಗಳಾಗಿವೆ. ಅಂದು ಅಧಿಕಾರದಲ್ಲಿ ಇಲ್ಲದಿದ್ದ ಕೇಜ್ರಿವಾಲ್, ಇಂದು ಮುಖ್ಯಮಂತ್ರಿಯಾಗಿ 10 ವರ್ಷಗಳ ಅಧಿಕಾರ ನಡೆಸಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಹೀಗಾಗಿ, ಜನಾದೇಶ ಏನಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ.
ಹಾಗೆ ನೋಡಿದರೆ, ಲೋಕಸಭಾ ಚುನಾವಣೆಯ ಸಮಯದಲ್ಲಿಯೇ ಅವರನ್ನು ಇಡಿ ಬಂಧಿಸಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಚಿನಿಂದಲೇ ಕೇಜ್ರಿವಾಲ್ ಜೈಲಿಗೆ ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಆ ಬಗ್ಗೆ ಚರ್ಚೆ, ಆಕ್ರೋಶ, ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದೇ ಸಮಯದಲ್ಲಿ, ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿ, ಚುನಾವಣೆಯಲ್ಲಿ ಪ್ರಚಾರ ಮಾಡಲು ಅವಕಾಶ ನೀಡಿತು. ಮಧ್ಯಂತರ ಜಾಮೀನು ಪಡೆದು ಹೊರ ಬಂದ ಕೇಜ್ರಿವಾಲ್ ಅಬ್ಬರದ ಪ್ರಚಾರ ನಡೆಸಿದ್ದರು. ಮೋದಿ ವಿರುದ್ಧ ತಮ್ಮೆಲ್ಲ ವಾಕ್ಚಾತುರ್ಯವನ್ನು ಬಳಸಿದರು. ಆದರೂ, ದೆಹಲಿಯ ಏಳೂ ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಾಲಾದವು.
ಹೀಗಾಗಿ, ಕೇಜ್ರಿವಾಲ್‌ರನ್ನು ಮೋದಿ ಸರ್ಕಾರ ಜೈಲಿನಲ್ಲಿಟ್ಟಿತು ಎಂಬ ಕಾರಣಕ್ಕೆ, ದೆಹಲಿ ಜನರು ಎಎಪಿಗೆ ಮತ್ತೆ ಅಧಿಕಾರ ಕೊಡುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾಗಬಹುದು. ಹೀಗಾಗಿಯೇ, ದೆಹಲಿ ಜನರನ್ನು ಸೆಳೆಯಲು ಕೇಜ್ರಿವಾಲ್ ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಅವರು, ತಮ್ಮ ಪತ್ನಿ ಸುನೀತಾ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವುದನ್ನು ಕೈಬಿಟ್ಟರು. ಒಂದು ವೇಳೆ ಸುನೀತಾ ಅವರು ಮುಖ್ಯಮಂತ್ರಿಯಾದರೆ, ಕುಟುಂಬ ರಾಜಕಾರಣವನ್ನು ಪ್ರತಿಬಿಂಬಿಸಬಹುದು. ಇದು, ದೆಹಲಿಯ ಬಹುಸಂಖ್ಯೆಯ ಜನರನ್ನು ಕೆರಳಿಸಬಹುದು ಎಂಬುದನ್ನು ಅರಿತೇ ಅವರು ಆ ನಿರ್ಧಾರ ಮಾಡಿದರು. ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ದೆಹಲಿ ಸರ್ಕಾರಿ ಶಾಲೆಗಳ ಉನ್ನತೀಕರಣದ ಹಿಂದಿನ ಪ್ರೇರಕ ಶಕ್ತಿಯೆಂದೇ ಗುರುತಿಸಲಾದ, ಆಕ್ಸ್‌ಫರ್ಡ್ ಪದವೀಧರೆ ಆತಿಶಿ ಅವರನ್ನು ಆಯ್ಕೆ ಮಾಡಿದರು. ಅವರ ಆಯ್ಕೆಯು ರಾಷ್ಟ್ರ ರಾಜಧಾನಿಯ 67 ಲಕ್ಷ ಮಹಿಳಾ ಮತದಾರರನ್ನು ಪಕ್ಷದತ್ತ ಸೆಳೆಯುತ್ತದೆ ಎಂಬುದು ಕೇಜ್ರಿವಾಲ್ ಲೆಕ್ಕಾಚಾರ.
ಜೊತೆಗೆ, ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಜಾರಿಗೊಳಿಸಿ, ಮಹಿಳೆಯರಿಗೆ ಮಾಸಿಕ 1,000 ರೂ. ನೆರವು ನೀಡುವುದು ಸೇರಿದಂತೆ ಕೆಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅವರ ಆದ್ಯತೆಯಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
2025ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಆದಾಗ್ಯೂ, ಮಹಾರಾಷ್ಟ್ರದೊಂದಿಗೆ ದೆಹಲಿಗೂ ಇದೇ ವರ್ಷದ ನವೆಂಬರ್‌ನಲ್ಲಿಯೇ ಚುನಾವಣೆ ನಡೆಸಲು ಚುನಾವಣಾ ಆಯೋಗವನ್ನು ಕೇಜ್ರಿವಾಲ್ ಕೇಳಿದ್ದಾರೆ.
ತಮ್ಮ ರಾಜೀನಾಮೆ, ಮಹಿಳಾ ಮುಖ್ಯಮಂತ್ರಿ ನೇಮಕ, ಆತಿಶಿ ಅವರೇ ಪರಿಪೂರ್ಣ ಮುಖ್ಯಮಂತ್ರಿಯಾಗಿದ್ದು, ಅವರ ಆಡಳಿತ, ಕಾರ್ಯನಿರ್ವಹಣೆಯಲ್ಲಿ ತಮ್ಮ ಅಥವಾ ಇತರರ ಯಾವುದೇ ಹಸ್ತಕ್ಷೇಪವಿಲ್ಲ ಎಂಬ ಸಂದೇಶವು ಕೇಜ್ರಿವಾಲ್ ಅವರನ್ನು ದೆಹಲಿಯು ನಾಲ್ಕನೇ ಬಾರಿಗೆ (2013, 2015, ಮತ್ತು 2020ರ ನಂತರ) ಆಯ್ಕೆ ಮಾಡಲು ಮತದಾರರನ್ನು ಮನವೊಲಿಸುವುದೇ ಎಂಬ ಚರ್ಚೆ ಮುನ್ನಲೆಯಲ್ಲಿದೆ. ಇದಕ್ಕೆ ಕಾಲವೇ ಉತ್ತರಿಸಲಿದೆ.
ಗಮನಾರ್ಹವಾಗಿ, ಕೇಜ್ರಿವಾಲ್ ನಡೆಯ ಬಗ್ಗೆ ದೆಹಲಿ ಬಿಜೆಪಿಗೆ ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಕೇಜ್ರಿವಾಲ್ ಬುದ್ಧಿವಂತಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಮಾತನಾಡುತ್ತಿದ್ದಾರೆ. ಅವರ ರಾಜೀನಾಮೆ ಮತ್ತು ಆತಿಶಿ ಆಯ್ಕೆಯ ಬಗ್ಗೆ ಬಿಜೆಪಿಗೆ ಯಾವುದೇ ಸುಳಿವೂ ಇರಲಿಲ್ಲ. ಇಂತಹ ನಡೆ ಬಿಜೆಪಿಯ ನಿದ್ರೆಗೆಡಿಸಿದೆ. ದೆಹಲಿ ಬಿಜೆಪಿಯ ಒಂದು ವರ್ಗ ಕೇಜ್ರಿವಾಲ್ ನಿರ್ಧಾರಗಳು, ಆಲೋಚನೆಗಳ ಬಗ್ಗೆ ಚಿಂತಿತವಾಗಿದೆ.
ಈ ವರದಿ ಓದಿದ್ದೀರಾ?: ಕೇಜ್ರಿವಾಲ್ ‘ನಾನು ಪ್ರಾಮಾಣಿಕ’ ಎನ್ನುತ್ತಿರುವುದೇಕೆ?
“ಇಲ್ಲಿಯವರೆಗೆ, ನಾವು ಕೇಜ್ರಿವಾಲ್ ವಿರುದ್ಧ ಯುದ್ಧಗಳನ್ನು ನಡೆಸಿದ್ದೇವೆ. ಆದರೆ, ಕೇಜ್ರಿವಾಲ್ ಅವರೊಂದಿಗೆ ಯುದ್ಧದಲ್ಲಿ ಲೆಫ್ಟಿನೆಂಟ್-ಜನರಲ್ ವಿ.ಕೆ ಸಕ್ಸೇನಾ ಹೋರಾಡುತ್ತಿದ್ದರು. ಆದಾಗ್ಯೂ, ಚುನಾವಣಾ ರಾಜಕೀಯದಲ್ಲಿ ಸಕ್ಸೇನಾ ಪಾತ್ರ ಇರಲಾರದು. ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನು ಎದುರಿಸಲು ನಮಗೆ ಯಾವುದೇ ಜನಪ್ರಿಯ ಮುಖವಿಲ್ಲ. ಕಳೆದ ದಶಕದಲ್ಲಿ ಎಎಪಿಯನ್ನು ಎದುರಿಸಲು ನಾವು ಮೂವರು ಬಿಜೆಪಿ ಮುಖ್ಯಸ್ಥರನ್ನು ಬದಲಾಯಿಸಿದ್ದೇವೆ” ಎಂದು ಬಿಜೆಪಿ ಶಾಸಕರೊಬ್ಬರು ಅಸಮಾಧಾನದ ಮಾತನಾಡಿರುವುದಾಗಿ ವರದಿಯಾಗಿದೆ.
ಆದಾಗ್ಯೂ, ಬಿಜೆಪಿ ಹೈಕಮಾಂಡ್ ದೆಹಲಿಯಲ್ಲಿ ಪಕ್ಷವು ಮಂಕಾಗಿದೆ ಎಂಬ ಮಾತನ್ನು ತಳ್ಳಿ ಹಾಕುತ್ತಿದೆ. ”2022ರಲ್ಲಿ ನಡೆದ ದೆಹಲಿ ಪಾಲಿಕೆ ಚುನಾವಣೆಯಲ್ಲಿಯೂ ಬಿಜೆಪಿ ಸಾಧನೆಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಬಿಜೆಪಿ 20 ಸ್ಥಾನವನ್ನೂ ಗೆಲ್ಲುವುದಿಲ್ಲವೆಂದು ಕೇಜ್ರಿವಾಲ್ ಹೇಳುತ್ತಿದ್ದರು. ಆದರೆ, ನಾವು 104 ಸ್ಥಾನಗಳನ್ನು ಗೆದ್ದಿದ್ದೇವೆ. ಎಎಪಿ 134 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿಯೂ ಇಂತಹ ಫಲಿತಾಂಶ ದೊರೆಯಲಿದೆ” ಎಂದು ಆರ್‌ಎಸ್‌ಎಸ್ ಮುಖಂಡರೊಬ್ಬರು ಹೇಳಿದ್ದಾರೆ.