ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ ನಡೆದಿದೆ. ವ್ಯಕ್ತಿಯೋರ್ವ ರೇಖಾ ಅವರ ಕೆನ್ನೆಗೆ ಬಾರಿಸಿ ಕೂದಲು ಎಳೆದಿದ್ದಾನೆ. ಸದ್ಯ ದೆಹಲಿ ಸಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
30ರ ಹರೆಯದ ವ್ಯಕ್ತಿಯೊಬ್ಬ ‘Jansunwai'(ಜನರ ಕುಂದುಕೊರತೆ ಆಲಿಸುವ ಸಭೆ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಿಎಂ ಬಳಿಗೆ ಬಂದು ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕ ಸಭೆಯಲ್ಲಿ ದೂರುದಾರನಂತೆ ಸಭೆಗೆ ಬಂದು ಸಿಎಂ ಮೇಲೆ ದಾಳಿ ನಡೆಸಿದ್ದಾನೆ. ಸಿಎಂ ಭದ್ರತಾ ಸಿಬ್ಬಂದಿ ತಕ್ಷಣ ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ
ಸದ್ಯ ರೇಖಾ ಗುಪ್ತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೆಹಲಿ ಪೊಲೀಸ್ ಉನ್ನತ ಅಧಿಕಾರಿಗಳು ಸಿಎಂ ನಿವಾಸಕ್ಕೆ ಧಾವಿಸಿದ್ದಾರೆ. ಭದ್ರತೆಯನ್ನು ಇನ್ನಷ್ಟೂ ಹೆಚ್ಚಿಸಲಾಗುತ್ತಿದೆ ಎನ್ನಲಾಗಿದೆ. ಹಲ್ಲೆ ನಡೆಸಿದಾತನನ್ನು ಗುಜರಾತ್‌ನ ರಾಜ್‌ಕೋಟ್ ನಿವಾಸಿ 41 ವರ್ಷದ ರಾಜೇಶ್ ಬಾಯ್ ಖಿಮ್ಜಿ ಬಾಯ್ ಸಕಾರಿಯಾ ಎಂದು ಗುರುತಿಸಲಾಗಿದೆ.
ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು, ಮುಖ್ಯಮಂತ್ರಿ ಪ್ರತಿ ವಾರ ತಮ್ಮ ನಿವಾಸದಲ್ಲಿ Jansunwai ಎಂಬ ಸಾರ್ವಜನಿಕ ಸಭೆಯನ್ನು ನಡೆಸುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ನಾಯಕ ಹರೀಶ್ ಖುರಾನಾ, “ಸಭೆಯಲ್ಲಿ ಹಾಜರಿದ್ದ ಒಬ್ಬ ವ್ಯಕ್ತಿ ಮುಖ್ಯಮಂತ್ರಿಯ ಮೇಲೆ ದಾಳಿ ನಡೆಸಿದ್ದಾನೆ. ಪ್ರಸ್ತುತ ವೈದ್ಯರು ಮುಖ್ಯಮಂತ್ರಿಯನ್ನು ಪರೀಕ್ಷಿಸುತ್ತಿದ್ದಾರೆ. ನಾವು ದಾಳಿಯನ್ನು ಖಂಡಿಸುತ್ತೇವೆ. ಈ ದಾಳಿ ರಾಜಕೀಯ ಪ್ರೇರಿತವಾಗಿದೆಯೇ ಎಂದು ತನಿಖೆ ಮಾಡಬೇಕು” ಎಂದು ಹೇಳಿದ್ದಾರೆ.
