ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನಕ್ಕೊಳಗಾಗಿದ್ದಾರೆ. ಅವರ ಬಂಧನ ಬಳಿಕ, ಜೈಲಿನಲ್ಲಿದ್ದುಕೊಂಡು ಮುಖ್ಯಮಂತ್ರಿಯಾಗಿ ಕೆಲಸ ಮಾಡಬಹುದೇ ಎಂಬ ಬರ್ಚೆ ನಡೆಯುತ್ತಿದೆ. ಇಂತಹ ಹೊತ್ತಿನಲ್ಲನೇ, ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ತಮ್ಮ ಮೊದಲ ಆದೇಶವನ್ನು ಹೊರಡಿಸಿದ್ದಾರೆ. ದೆಹಲಿಯ ನೀರು ಸರಬರಾಜು ಸಂಬಂಧ ದೆಹಲಿ ಸಚಿವೆ ಅತಿಶಿ ಅವರಿಗೆ ಪತ್ರದ ಮೂಲಕ ಆದೇಶ ಹರಿಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿರುವ ಅತಿಶಿ, ಮುಖ್ಯಮಂತ್ರಿ ನೀಡಿರುವ ಟಿಪ್ಪಣಿಯನ್ನು ಓದಿ ಕಣ್ಣೀರು ಹಾಕಿದ್ದಾರೆ. “ಅರವಿಂದ್ ಕೇಜ್ರಿವಾಲ್ ಅವರು ನನಗೆ ಪತ್ರದ ಮೂಲಕ ನಿರ್ದೇಶನ ಕಳುಹಿಸಿದ್ದಾರೆ. ಅದನ್ನು ಓದಿದ ನಂತರ ನಾನು ಕಣ್ಣೀರು ಹಾಕಿದೆ. ಜೈಲಿನಲ್ಲಿರುವ ಆ ವ್ಯಕ್ತಿ, ದೆಹಲಿ ನಿವಾಸಿಗಳ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿದ್ದಾರೆ. ಇದನ್ನು ಕೇಜ್ರಿವಾಲ್ ಮಾತ್ರ ಮಾಡಲು ಸಾಧ್ಯ. ಏಕೆಂದರೆ, ಅವರು ತಮ್ಮನ್ನು ದೆಹಲಿಯ 2 ಕೋಟಿ ಜನರ ಕುಟುಂಬದ ಸದಸ್ಯನೆಂದು ಭಾವಿಸಿದ್ದಾರೆ” ಎಂದು ಅತಿಶಿ ಹೇಳಿದರು.
“ಅರವಿಂದ್ ಕೇಜ್ರಿವಾಲ್ ತಮ್ಮ ಆದೇಶದಲ್ಲಿ, ‘ದೆಹಲಿಯ ಕೆಲವು ಪ್ರದೇಶಗಳು ನೀರು ಸರಬರಾಜು ಮತ್ತು ಒಳಚರಂಡಿ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ಚಿಂತಿಸುತ್ತಿದ್ದೇನೆ. ನಾನು ಜೈಲಿನಲ್ಲಿರುವುದರಿಂದ ಜನರು ಯಾವುದೇ ಸಮಸ್ಯೆ ಎದುರಿಸಬಾರದು. ಬೇಸಿಗೆ ಬಂದಿದೆ, ಆದ್ದರಿಂದ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ಸಾಕಷ್ಟು ನೀರು ಒದಗಿಸಿ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿ. ಜನರು ತಮ್ಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಪಡೆಯಬೇಕು. ಅಗತ್ಯವಿದ್ದರೆ ಲೆಫ್ಟಿನೆಂಟ್ ಗವರ್ನರ್ ಅವರು ನಿಮಗೆ ಸಹಾಯ ಮಾಡುತ್ತಾರೆ’ ಎಂದಿದ್ದಾರೆ. ಇಂದಿಗೂ ಕೇಜ್ರಿವಾಲ್ ಜನರ ಬಗ್ಗೆ ಯೋಚಿಸುತ್ತಿದ್ದಾರೆ” ಎಂದು ಅತಿಶಿ ವಿವರಿಸಿದ್ದಾರೆ.
“ನಾನು ಬಿಜೆಪಿಗೆ ಹೇಳ ಬಯಸುವುದೇನೆಂದರೆ, – ನೀವು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ಜೈಲಿಗೆ ಹಾಕಬಹುದು. ಆದರೆ, ದೆಹಲಿಯ ಜನರ ಮೇಲಿನ ಅವರ ಪ್ರೀತಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ನೀವು ಜೈಲಿನಲ್ಲಿಡಲು ಸಾಧ್ಯವಿಲ್ಲ. ಕೇಜ್ರಿವಾಲ್ ಜೈಲಿನಲ್ಲಿರಬಹುದು. ಆದರೆ, ಕೆಲಸ ನಿಲ್ಲುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ?: ಚುನಾವಣಾ ಬಾಂಡ್ | ಬ್ಯಾಂಕ್ ಮೂಲಕ ಲಂಚ ನೀಡಬಹುದೆಂದು ಖಚಿತಪಡಿಸಿದೆ: ಕಾಂಗ್ರೆಸ್
ದೆಹಲಿ ಅಬಕಾರಿ ನೀತಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ರಾತ್ರಿ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದೆ ಶುಕ್ರವಾರ ಕೇಜ್ರಿವಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದೆ. ತಮ್ಮ ಬಂಧನ ಮತ್ತು ಜಾಮೀನು ನಿರಾಕರಣೆಯನ್ನು ಪ್ರಶ್ನಿಸಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದೇ ಪ್ರಕರಣದಲ್ಲಿ ಎಎಪಿಯ ನಾಯಕ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಹಾಗೂ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರನ್ನು ಇಡಿ ಬಂಧಿಸಿದೆ.