ದೇಶದ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಎಎಪಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ 27 ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸುತ್ತದೆಯೇ ಎಂಬುದು 11 ಗಂಟೆ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಬಿಗಿ ಭದ್ರತೆಯ ನಡುವೆ 19 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದೆ. ಎಎಪಿ 12, ಬಿಜೆಪಿ 14 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರವಾಲ್ ಹಿನ್ನಡೆ ಅನುಭವಿಸಿದ್ದಾರೆ.
ದೆಹಲಿಯ ಎಲ್ಲ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5 ರಂದು ಮತದಾನ ನಡೆದಿತ್ತು. ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಶೇ.60.54ರಷ್ಟು ಮತಗಳು ಚಲಾವಣೆಯಾಗಿದೆ. 2020 ಕ್ಕೆ ಹೋಲಿಸಿದರೆ ಶೇ 2.5 ರಷ್ಟು ಕಡಿಮೆಯಾಗಿದೆ.
ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲು ವಿಫಲವಾಗಿದ್ದ ಬಿಜೆಪಿ ಈ ಬಾರಿ ಸರಳ ಬಹುಮತದ ಗಡಿ ದಾಟಿ ಅಧಿಕಾರಕ್ಕೇರಲಿದ್ದರೆ, ಆಡಳಿತಾರೂಢ ಎಎಪಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎರಡು ಚುನಾವಣೋತ್ತರ ಸಮೀಕ್ಷೆಗಳು ಮಾತ್ರ ಆಮ್ ಆದ್ಮ ಪಕ್ಷ (ಎಎಪಿ) ವಿಜಯಶಾಲಿಯಾಗಿ, ಮತ್ತೆ ಅಧಿಕಾರದ ಗದ್ದುಗೆ ಮರಳಲಿದೆ ಎಂದಿವೆ.