ದೆಹಲಿ ವಿಧಾನಸಭೆಗೆ ಬುಧವಾರ (ಫೆ.5) ಮತದಾನ ನಡೆಯಲಿದೆ. ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯಿದ್ದರೂ, ಚುನಾವಣಾ ಕಣದಲ್ಲಿ ಎಎಪಿ-ಬಿಜೆಪಿ ನಡುವಿನ ಹೋರಾಟ ಎಂಬಂತೆಯೇ ಭಾಸವಾಗುತ್ತಿದೆ. ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ತೋರುತ್ತಿದೆ. ಎಎಪಿ ವಿರುದ್ಧ ಬಿಜೆಪಿ ನಾನಾ ರೀತಿಯ ಭ್ರಷ್ಟಾಚಾರ ಆರೋಪಗಳನ್ನು ಮಾಡಿರುವ ಹೊರತಾಗಿಯೂ, ಎಎಪಿಗೆ ಭಾರೀ ಪೆಟ್ಟು ಬೀಳುವುದಿಲ್ಲ. ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವ ಸಾಧ್ಯತೆಗಳೇ ಹೆಚ್ಚಿವೆ ಎಂಬುದು ಕಂಡುಬರುತ್ತಿದೆ.
ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರ ಎಎಪಿ ನಾಯಕರು ಜೈಲುವಾಸ ಅನುಭವಿಸಿ ಬಂದಿದ್ದಾರೆ. ಆಪಾದಿತ ಅಬಕಾರಿ ಹಗರಣ ಮತ್ತು ಸಾರ್ವಜನಿಕ ಹಣದಲ್ಲಿ ಕೇಜ್ರಿವಾಲ್ ‘ಶೀಶ್ ಮಹಲ್’ ನಿರ್ಮಿಸಿಕೊಂಡಿದ್ದಾರೆ ಎಂಬ ಬಿಜೆಪಿಯ ಆರೋಪಗಳು ದೆಹಲಿಯ ನೆಲದಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. ಈ ಎಲ್ಲ ವಿವಾದಗಳು ಅಥವಾ ಆರೋಪಗಳು ಕೇವಲ ‘ರಾಜಕೀಯ’ ಪ್ರೇರಿತವೆಂದು ದೆಹಲಿ ಎಲ್ಲ ಭಾಗಗಳ ಮತದಾರರು/ಸಾರ್ವಜನಿಕರು ಹೇಳುತ್ತಿದ್ದಾರೆ.
ಅಬಕಾರಿ ನೀತಿ ಹಗರಣ ಮತ್ತು ‘ಶೀಶ್ ಮಹಲ್’ ವಿವಾದಗಳಿಗಿಂತ ಹೆಚ್ಚು ಸದ್ದು ಮಾಡುತ್ತಿರುವುದು ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ತಳ ಸಮುದಾಯದ ಜನರ ಸಮಸ್ಯೆಗಳು. ಆದಾಗ್ಯೂ, ಕಳೆದ 10 ವರ್ಷಗಳಲ್ಲಿ ಎಎಪಿ ಸರ್ಕಾರವು ಒದಗಿಸಿರುವ ಹಲವಾರು ಸೌಲಭ್ಯಗಳು ತಮಗೆ ಯಾವ ರೀತಿಯಲ್ಲಿ ತಲುಪಿವೆ ಎಂಬುದರ ಬಗ್ಗೆ ಅವರು ಗಮನ ಹರಿಸುತ್ತಿದ್ದಾರೆ. ಆಪಾದಿತ ಹಗರಣಗಳು ಅವರ ಲೆಕ್ಕಕ್ಕಿಲ್ಲ. ‘ನಮಗೇನು ಗೊತ್ತು, ಅದರ ಬಗ್ಗೆ ನಾವು ಚಿಂತಿಸುವುದಿಲ್ಲ. ಪ್ರತಿಯೊಬ್ಬ ರಾಜಕಾರಣಿಯೂ ಭ್ರಷ್ಟಾಚಾರ ಮಾಡುತ್ತಾರೆ. ಅದರಲ್ಲೇನು ವಿಶೇಷ’ ಎನ್ನುತ್ತಿದ್ದಾರೆ.
ಮಧ್ಯಮ ವರ್ಗದ ಜನರು ವಾಸಿಸುತ್ತಿರುವ ದೆಹಲಿಯ ಗೇಟೆಡ್ ಎನ್‌ಕ್ಲೇವ್, ರಾಜೌರಿ ಗಾರ್ಡನ್, ಶಾಲಿಮಾರ್ ಬಾಗ್ ಪ್ರದೇಶಗಳಲ್ಲಿ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧದ ಅಸಮಾಧಾನ ಹೆಚ್ಚಾಗಿ ಕೇಳಿಬರುತ್ತಿದ್ದರೂ, ‘ಉಚಿತ ಕೊಡುಗೆಗಳು’ ಅವರನ್ನು ಎಎಪಿಗೆ ಮತ ಹಾಕಲು ಈಗಲೂ ಪ್ರೇರೇಪಿಸುತ್ತಿವೆ. ಎಎಪಿಯಂತೆ ಬಿಜೆಪಿ ಸೇವೆಗಳನ್ನು ಒದಗಿಸುತ್ತದೆ ಎಂಬ ಭರವಸೆ ಜನರಲ್ಲಿಲ್ಲ. ಕಾಂಗ್ರೆಸ್ ನೆಲದಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಸಾಧ್ಯತೆಗಳೇ ಇಲ್ಲ ಎಂಬ ಭಾವನೆ ಹೆಚ್ಚಾಗಿದೆ.
ಶಾಹೀನ್ ಬಾಗ್ ಪ್ರದೇಶದಲ್ಲಿ, ಕೇಜ್ರಿವಾಲ್ ‘ಮುಸ್ಲಿಂ’ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಕೋವಿಡ್ ಸಮಯದಲ್ಲಿ ತಬ್ಲಿಘಿ ಜಮಾತ್ ವಿವಾದ, ಸಿಎಎ ವಿರೋಧಿ ಧರಣಿ ಹಾಗೂ ಈಶಾನ್ಯ ದೆಹಲಿಯ ಕೋಮು ಗಲಭೆಗಳ ವಿಚಾರದಲ್ಲಿ ಕೇಜ್ರಿವಾಲ್ ಅವರ ದ್ವಂದ್ವ ನಿಲುವು ಬೇಸರ ತರಿಸಿದೆ. ನಾವು ಎಎಪಿಯಿಂದ ದೂರ ಸರಿಯುತ್ತಿದ್ದೇವೆ ಎಂದು ಮುಸ್ಲಿಂ ನಿವಾಸಿಗಳು ಹೇಳುತ್ತಿದ್ದಾರೆ. ಆದರೆ, ಅವರು ಕಾಂಗ್ರೆಸ್‌ಗೆ ಮತ ಹಾಕುವ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ, ಎಐಎಂಐಎಂ ಎಡೆಗೆ ವಾಲುತ್ತಿದ್ದಾರೆ. ಶಾಹೀನ್ ಬಾಗ್ ಪ್ರದೇಶದ ಎರಡು ಕ್ಷೇತ್ರಗಳಲ್ಲಿ ಮಾತ್ರವೇ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಇಬ್ಬರೂ, 2020ರ ಗಲಭೆ ಪ್ರಕರಣಗಳಲ್ಲಿ ಜೈಲು ಸೇರಿದ್ದು, ಜೈಲಿನಿಂದಲೇ ಚುನಾವಣೆ ಎದುರಿಸುತ್ತಿದ್ದಾರೆ.
”ಎಎಪಿ ನಮಗೆ ಶಾಲೆ, ಆಸ್ಪತ್ರೆ, ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯಗಳನ್ನು ಕೊಟ್ಟಿದೆ. ನಾವು 10 ವರ್ಷಗಳಿಂದ ‘ವಿಧಾನಸಭೆಗೆ ಎಎಪಿ, ಲೋಕಸಭೆಗೆ ಕಾಂಗ್ರೆಸ್’ ಎಂಬ ಭಾವನೆ ಹೊಂದಿದ್ದೆವು. ಆದರೆ ಈ ಬಾರಿ, ಮನಸ್ಸು ಘಾಸಿಗೊಂಡಿದೆ. ಹೊಸತನ್ನು ಹುಡುಕುತ್ತಿದ್ದೇವೆ” ಎಂದು ಶಾಹಿನ್ ಬಾಗ್‌ನ ಮಹಿಳೆಯೊಬ್ಬರು ಹೇಳುತ್ತಾರೆ.
ಸತತ 15 ವರ್ಷಗಳ ಕಾಲ ದೆಹಲಿಯನ್ನು ಆಳಿದ್ದು, ಕಳೆದ 11 ವರ್ಷಗಳಿಂದ ದೆಹಲಿ ನೆಲದಲ್ಲಿ ಕಾಣೆಯಾಗಿರುವ ಕಾಂಗ್ರೆಸ್ ಬಗ್ಗೆ ದೆಹಲಿ ಜನರಲ್ಲಿ ಒಲವಿಲ್ಲ. ‘ಕಾಂಗ್ರೆಸ್ ನೆಲದಲ್ಲಿ ಕಾಣಿಸುತ್ತಿಲ್ಲ. ಯಾವುದೇ ಸದ್ದು ಮಾಡುತ್ತಿಲ್ಲ. ಪಕ್ಷವು ಎಲ್ಲೆಡೆ ಸೋಲುತ್ತಿದೆ. ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿ ನಾವು ಮತ ಚಲಾಯಿಸಬಹುದಾದ ಅಥವಾ ಗುರುತಿಸಬಹುದಾದ ಸ್ಥಳೀಯ ನಾಯಕರೇ ಇಲ್ಲ’ ಎಂದು ದೆಹಲಿ ನಿವಾಸಿಗಳು ಹೇಳುತ್ತಿದ್ದಾರೆ.
ಹೀಗಾಗಿ, ಈ ಚುನಾವಣೆ 11 ವರ್ಷಗಳಿಂದ ದೆಹಲಿಯನ್ನು ಆಳುತ್ತಿರುವ ಎಎಪಿ ಮತ್ತು 27 ವರ್ಷಗಳ ಕಾಲ ದೆಹಲಿಯಲ್ಲಿ ಅಧಿಕಾರದಿಂದ ಹೊರಗುಳಿದಿರುವ ಬಿಜೆಪಿ ನಡುವಿನ ಸ್ಪರ್ಧೆಯಾಗಿದೆ. ಎಎಪಿಯ ಉಚಿತ ಯೋಜನೆಗಳು ದೆಹಲಿ ಜನರನ್ನು ಹಿಡಿದಿಟ್ಟಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಎಎಪಿ ಪ್ರಮುಖ ಯೋಜನೆಗಳಲ್ಲಿ ಸಬ್ಸಿಡಿ ವಿದ್ಯುತ್ (200 ಯೂನಿಟ್‌ಗಳವರೆಗೆ ಉಚಿತ) ಪ್ರಮುಖವಾದದ್ದು. ದೆಹಲಿಯ ಎಲ್ಲ ಭಾಗದ ಜನರೂ ಈ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಜೊತೆಗೆ, ಉಚಿತ ನೀರು ಸರಬರಾಜು ಯೋಜನೆಯೂ ಇದೆ. ನೀರಿನ ಗುಣಮಟ್ಟ ಕಳಪೆಯಾಗಿರುವ ದೆಹಲಿಯಲ್ಲಿ ಉಚಿತ ಶುದ್ಧ ನೀರು ಒದಗಿಸುವ ಯೋಜನೆಯನ್ನು ಎಎಪಿಗೆ ಜಾರಿಗೆ ತಂದಿದೆ. ಆದರೆ, ಕೇವಲ ಅರ್ಧ ಭಾಗಕ್ಕೆ ಮಾತ್ರವೇ ಯೋಜನೆಯ ಫಲಾನುಭವ ದೊರೆಯುತ್ತಿದ್ದು, ಎಲ್ಲ ಭಾಗಗಳಿಗೂ ಇನ್ನೂ ಲಭ್ಯವಾಗಿಲ್ಲ. ಆ ಕೆಲಸವನ್ನು ಮುಂದುವರೆಸುವುದಾಗಿ ಎಎಪಿ ಭರವಸೆ ನೀಡಿದೆ.
ಮೊಹಲ್ಲಾ ಕ್ಲಿನಿಕ್ ಮತ್ತು ಸರ್ಕಾರಿ ಶಾಲೆಗಳ ಆಧುನೀಕರಣವು ಎಲ್ಲ ವರ್ಗಗಳನ್ನು ತಲುಪಿದೆ. ಎಎಪಿಯ ವಿರೋಧಿಗಳು ಸಹ ಇವುಗಳನ್ನು ಅತ್ಯುತ್ತಮ ಎಂದೇ ಹೇಳುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವು ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಮುಖ್ಯವಾಗಿ ಕಾಣಿಸುತ್ತಿದೆ.
ಭಾರತದ ರಾಜಧಾನಿಯಲ್ಲಿ ನೆಲೆ ಕಂಡುಕೊಳ್ಳಲು ಪ್ರತಿದಿನ ಹೆಣಗಾಡುತ್ತಿರುವವರಿಗೆ ಎಎಪಿ ಸರ್ಕಾರದ ಯೋಜನೆಗಳು ಅತ್ಯಗತ್ಯ, ಅತ್ಯಾವಶ್ಯವಾಗಿವೆ. ಉಚಿತ ಯೋಜನೆ/ಸೇವೆಗಳಲ್ಲಿ ಏರು-ಪೇರುಗಳು ಕಂಡುಬಂದರೂ, ಎಎಪಿ ತನ್ನ ಬೆಂಬಲ ನೆಲೆಯನ್ನು ಉಳಿಸಿಕೊಂಡಿದೆ.
ಇದೆಲ್ಲದರ ನಡುವೆ, ಗೋವಿಂದಪುರಿಯ ಭೂಮಿಹೀನ್ ಪ್ರದೇಶದಲ್ಲಿ ಇಟ್ಟಿಗೆ ಮತ್ತು ಮನೆಗಳ ಅವಶೇಷಗಳ ನಡುವೆ ಹಲವಾರು ಮಂದಿ ವಾಸಿಸುತ್ತಿದ್ದಾರೆ. 2 ವರ್ಷಗಳ ಹಿಂದೆ, ಕೇಂದ್ರ ಸರ್ಕಾರವು ಅವರಿಗೆ ನೋಟಿಸ್ ಕೊಟ್ಟು, ಮನೆಗಳನ್ನು ಧ್ವಂಸ ಮಾಡಲಾಯಿತು. ಆ ನಂತರ, ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರಿಂದ, ಅವರನ್ನು ಒಕ್ಕಲೆಬ್ಬಿಸಲಾಗಿಲ್ಲ. ಮನೆಗಳನ್ನು ಉರುಳಿಸಿದ ಸರ್ಕಾರವು ಅವಶೇಷಗಳನ್ನು ತೆರವುಗೊಳಿಸಲ್ಲ. ಹೀಗಾಗಿ, ಅವುಗಳ ನಡುವೆಯೂ ಅಲ್ಲಿನ ನಿವಾಸಿಗಳು ವಾಸಿಸುತ್ತಿದ್ದಾರೆ.
”ನಮ್ಮನ್ನು ಒಕ್ಕಲೆಬ್ಬಿಸದಂತೆ ತಡೆಯಾಜ್ಞೆ ಸಿಕ್ಕಿತು. ಆದರೆ, ತಡೆಯಾಜ್ಞೆ ಕೈಸೇರುವುದರೊಳಗೆ ನಮ್ಮ ಮನೆಗಳನ್ನು ಉರುಳಿಸಿಬಿಟ್ಟಿದ್ದರು. ಮನೆಗಳ ಅವಶೇಷಗಳ ನಡುವೆಯೇ ಬದುಕುತ್ತಿದ್ದೇವೆ. ಅವುಗಳನ್ನು ತೆರವುಗೊಳಿಸಲು ಅಥವಾ ಬಾಡಿಗೆ ಮನೆಗಳಿಗೆ ಹೋಗಲು ನಮಗೆ ಶಕ್ತಿ ಇಲ್ಲ. ಕೇಜ್ರಿವಾಲ್ ಅವರು ಕನಿಷ್ಠ ನಮಗೆ ಉಚಿತ ವಿದ್ಯುತ್ ಮತ್ತು ನೀರು ಕೊಡುತ್ತಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿದ್ದೇವೆ” ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.
ಆ ಪ್ರದೇಶದ ಇಂದಿರಾ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಲಾಲಿ ಎಂಬವರು, ”ನಾವು ಈ ಪ್ರದೇಶಕ್ಕೆ ಬಂದಾಗ ನನಗೆ 4-5 ವರ್ಷ ವಯಸ್ಸು. ಈಗ ನನ್ನ ಮೊಮ್ಮಕ್ಕಳು ಕೂಡ ಇಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಕುಟುಂಬದವರು ಮನೆಕೆಲಸ, ಆಟೋ ಚಾಲನೆ, ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೇಜ್ರಿವಾಲ್ ನಮ್ಮನ್ನು ಇಲ್ಲಿಂದ ಹೊರಹಾಕುವುದಿಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ಹೊರದಬ್ಬುತ್ತದೆ. ನಮ್ಮ ಮನೆಗಳ ಮೇಲೆ ಬುಲ್ಡೋಜರ್ ಹರಿಸುತ್ತದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ದೆಹಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೈಲುಹಕ್ಕಿ ತಾಹಿರ್ ಹುಸೈನ್ ಯಾರು ಗೊತ್ತೇ?
ಉಚಿತ ಶಿಕ್ಷಣದಿಂದಾಗಿ ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಉಚಿತ ವಿದ್ಯುತ್ ಸೌಲಭ್ಯದಿಂದಾಗಿ ಪ್ರತಿ ತಿಂಗಳ ಮನೆಯ ವೆಚ್ಚದಲ್ಲಿ 500 ರೂ. ಉಳಿಸುತ್ತಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದರಿಂದ, ಕುಟುಂಬದ ಹೆಣ್ಣು ಮಕ್ಕಳು ಕೆಲಸದ ಸ್ಥಳಗಳಿಗೆ ತೆರಳುವುದು, ಸಂಚಾರ ಮಾಡುವುದಕ್ಕೆ ತೊಂದರೆ ಇಲ್ಲ. ಕುಟುಂಬದ ವೆಚ್ಚದಲ್ಲಿ ಒಂದಷ್ಟು ಉಳಿತಾಯ ನೋಡುತ್ತಿದ್ದೇವೆ ಎಂದು ಹಿಂದುಳಿದ ಸಮುದಾಯಗಳ ಜನರು ಹೇಳುತ್ತಾರೆ.
ಹೀಗಾಗಿ, ಉಚಿತ ಸೌಲಭ್ಯಗಳು, ಆದಾಯದಲ್ಲಿ ಉಳಿತಾಯ, ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ನಾನಾ ಯೋಜನೆಗಳ ಕಾರಣಕ್ಕಾಗಿ ಅತ್ಯಂತ ದುರ್ಬಲ ವರ್ಗಗಳು ಕೊಂಚ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿದೆ. ಆದ್ದರಿಂದ, ಬಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರು ಎಎಪಿಯನ್ನು ಬೆಂಬಿಲಿಸುವುದಾಗಿ ಹೇಳುತ್ತಿದ್ದಾರೆ.
ಎಎಪಿಯ ಯೋಜನೆಗಳು, ಉಚಿತ ಸೌಲಭ್ಯಗಳು ಬಿಜೆಪಿ ಮಾಡುತ್ತಿರುವ ಭ್ರಷ್ಟಾಚಾರ ಆರೋಪಗಳನ್ನು ದೆಹಲಿಯಲ್ಲಿ ನಗಣ್ಯಗೊಳಿಸಿವೆ. ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರಕ್ಕೇರಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ಈ ಬಾರಿಯಾದರೂ ದೆಹಲಿಯನ್ನು ಗೆಲ್ಲಲೇಬೇಕೆಂದು ಹವಣಿಸುತ್ತಿದೆ. ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣ, ಶೀಶ್ ಮಹಲ್, ವಾಯುಮಾಲಿನ್ಯ, ನೀರಿನ ಸಮಸ್ಯೆ ಮೊದಲಾದವುಗಳನ್ನು ಮುಂದಿಟ್ಟುಕೊಂಡು ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ.
ಆದರೆ, ಅದಾವುದೂ ಬಿಜೆಪಿಯ ಕೈಹಿಡಿಯುತ್ತಿಲ್ಲ. ಮುಖ್ಯವಾಗಿ, ಕೇಜ್ರಿವಾಲ್ ವಿರುದ್ಧವಾಗಿ ಪ್ರಬಲ ಮುಖ್ಯಮಂತ್ರಿ ಅಭ್ಯರ್ಥಿಯೂ ಬಿಜೆಪಿಯಲ್ಲಿಲ್ಲ. ಬಿಜೆಪಿ ಕೂಡ ಹಲವು ಉಚಿತ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳುತ್ತಿದೆ. ಆದರೆ, ಅವುಗಳಲ್ಲಿ ಹಲವಾರು ಯೋಜನೆಗಳನ್ನು ಎಎಪಿ ಅಸ್ತಿತ್ವದಲ್ಲಿರಿಸಿದೆ. ಹೀಗಾಗಿ, ಆ ಗ್ಯಾರಂಟಿ ಯೋಜನೆಗಳಿಗಾಗಿ ಜನರು ಬಿಜೆಪಿಗೆ ಮತ ಹಾಕಬೇಕಾಗಿಲ್ಲ.
ಜೊತೆಗೆ, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹವಾ ಕೂಡ ಕೆಲಸ ಮಾಡುತ್ತಿಲ್ಲ. 2020ರಲ್ಲಿ ಒಟ್ಟು 70 ಕ್ಷೇತ್ರಗಳ ಪೈಕಿ ಕೇವಲ 8 ಕ್ಷೇತ್ರಗಳನ್ನು ಗೆದ್ದು, ನಾಮ್ ಕೆ ವಾಸ್ತೆಗಷ್ಟೇ ವಿಪಕ್ಷವೆಂದು ಕರೆಸಿಕೊಂಡಿದ್ದ ಬಿಜೆಪಿ, ಈ ಬಾರಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬಹುದಾದರೂ, ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ ಎಂಬುದು ದೆಹಲಿ ನೆಲದಲ್ಲಿ ಕಂಡುಬರುತ್ತಿದೆ. ಅಂತಿಮ ಫಲಿತಾಂಶ ಏನಿರಲಿದೆ ಎಂಬುದು ಫೆಬ್ರವರಿ 8ರಂದು ಪ್ರಕಟವಾಗುವ ಫಲಿತಾಂಶದಲ್ಲಿ ಗೋಚರಿಸಲಿದೆ.
ಮಾಹಿತಿ ಮೂಲ: ಟಿಐಇ