ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಎಎಪಿ ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, ಮನಿಷ್ ಸಿಸೋಡಿಯಾ ಸೋಲುಂಡಿದ್ದಾರೆ. ಎಎಪಿ ಕೇವಲ 24 ಸ್ಥಾನಗಳಿಗೆ ಕುಸಿದಿದ್ದು, ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಈಬಾರಿಯೂ ಶೂನ್ಯ ಸಾಧನೆ ಮಾಡಿದೆ. ಬಿಜೆಪಿ ಗೆದ್ದು ಬೀಗುತ್ತಿದೆ.
ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದು, ಎಎಪಿ ಮತ್ತು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಿಮ್ಮೊಳಗೆ ಕಿತ್ತಾಡಿ, ಒಬ್ಬರನ್ನೊಬ್ಬರು ಮುಗಿಸಿಬಿಡಿ’ ಎಂದು ಕಿಡಿಕಾರಿದ್ದಾರೆ.
ಪೌರಾಣಿಕ ಕಥೆಯುಳ್ಳ ವಿಡಿಯೋವೊಂದನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, “ನಿಮ್ಮಲ್ಲೇ ನೀವು ಇನ್ನಷ್ಟು ಕಿತ್ತಾಡಿಕೊಳ್ಳಿ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Aur lado aapas mein!!! https://t.co/f3wbM1DYxk pic.twitter.com/8Yu9WK4k0c
— Omar Abdullah (@OmarAbdullah) February 8, 2025
ಇಂಡಿಯಾ ಮೈತ್ರಿಕೂಟ ಭಾಗವಾಗಿದ್ದ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧಿಸಬೇಕು ಎಂಬುದು ಮಿತ್ರ ಪಕ್ಷಗಳ ಅಭಿಪ್ರಾಯವಾಗಿತ್ತು. ಆದರೆ, ಸೀಟು ಹಂಚಿಕೆ ಮತ್ತು ಹೊಂದಾಣಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾದ ಕಾರಣ, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿದವು. ಈ ಸ್ಪರ್ಧೆಯು ಪ್ರಚಾರದ ಸಮಯದಲ್ಲಿ ಮಿತ್ರ ಪಕ್ಷಗಳ ನಡುವೆಯೇ ಪೈಪೋಟಿ, ವಾಕ್ಸಮರಕ್ಕೂ ಕಾರಣವಾಯಿತು. ಅಂತಿಮವಾಗಿ, ಬಿಜೆಪಿ ಗೆಲುವು ಸಾಧಿಸಿತು.
ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಬಳಿಕ ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎಂಬ ಅಭಿಪ್ರಾಯಗಳಿವೆ. ಹರಿಯಾಣದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಮತ್ತು ಮಹಾರಾಷ್ಟ್ರದ ಕಳಪೆ ಪ್ರದರ್ಶನದ ಕಾರಣಕ್ಕಾಗಿ ‘ಇಂಡಿಯಾ’ ಕೂಟದ ನಾಯಕತ್ವವನ್ನು ಕಾಂಗ್ರೆಸ್ ಇತರ ಪಕ್ಷಗಳಿಗೆ ಬಿಟ್ಟುಕೊಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದರಲ್ಲಿ, ಎಎಪಿ ಕೂಡ ದನಿಗೂಡಿಸಿತ್ತು. ಆದರೆ, ದೆಹಲಿಯಲ್ಲಿ ಈಗ ಎಎಪಿಯೂ ಸೋಲುಂಡಿದೆ.