ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ಎಪಿಪಿ ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನವಿ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ಇಡಿ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಸಿಸೋಡಿಯಾ ಅವರ ಮನವಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಇಡಿ ಮತ್ತು ಸಿಬಿಐಗೆ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಸೂಚನೆ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಮೇ 8ಕ್ಕೆ ನಿಗದಿಪಡಿಸಿದ್ದಾರೆ.
ಸಿಸೋಡಿಯಾ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ವಾರಕ್ಕೊಮ್ಮೆ ನಿವಾಸದಲ್ಲಿ ಭೇಟಿ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.
“ವಾರಕ್ಕೊಮ್ಮೆ ಪತ್ನಿಯನ್ನು ಭೇಟಿಯಾಗಲು ಕಸ್ಟಡಿ ಪೆರೋಲ್‌ಗಾಗಿ ಸಿಸೋಡಿಯಾ ಸಲ್ಲಿಸಿರುವ ಮನವಿಗೆ ಯಾವುದೇ ಅಭ್ಯಂತರವಿಲ್ಲ” ಎಂದು ಇಡಿ ಹೇಳಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತಮ್ಮ ಜಾಮೀನು ಅರ್ಜಿಯನ್ನು ರೂಸ್ ಅವೆನ್ಯೂ ನ್ಯಾಯಾಲಯ ವಜಾಗೊಳಿಸಿದ್ದ ಆದೇಶವನ್ನು ಪ್ರಶ್ನಿಸಿ ಸಿಸೋಡಿಯಾ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸಿಸೋಡಿಯಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು 2023ರ ಫೆಬ್ರವರಿ 26ರಂದು ಸಿಸೋಡಿಯಾ ಅವರನ್ನು ಬಂಧಿಸಲಾಗಿದ್ದು, ಒಂದು ವರ್ಷದಿಂದ ಅವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಪ್ರಕರಣದಲ್ಲಿ ಅವರು ನಿರಪರಾಧಿ, ದೆಹಲಿ ಮದ್ಯ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ವಾದವನ್ನು ಆಲಿಸಿದ ನ್ಯಾಯಲಯ ಪ್ರತಿಕ್ರಿಯೆ ಕೇಳಿ ಸಿಬಿಐ ಮತ್ತು ಇಡಿಗೆ ನೋಟಿಸ್ ಜಾರಿ ಮಾಡಿದೆ.