ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ದೋಷಮುಕ್ತವಾಗಿ ಹೊರ ಬರುತ್ತೇನೆ ಎಂದು ಬಿಆರ್‌ಎಸ್ ನಾಯಕಿ ಹಾಗೂ ವಿಧಾನಪರಿಷತ್ ಸದಸ್ಯೆ ಕೆ ಕವಿತಾ ಹೇಳಿದ್ದಾರೆ.
ಪ್ರಕರಣ ಸಂಬಂಧ ಇ.ಡಿ ವಶದ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಕವಿತಾ ಅವರನ್ನು ಮಂಗಳವಾರ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ನವದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕರೆದೊಯ್ಯುವಾಗ ಕವಿತಾ ಅವರು ಹೇಳಿಕೆಗಳನ್ನು ನೀಡಿದ್ದು, “ಇದು ಅಕ್ರಮ ಹಣ ಪ್ರಕರಣವಲ್ಲ. ಇದು ರಾಜಕೀಯ ಕುತಂತ್ರದ ಪ್ರಕರಣವಾಗಿದೆ. ನನ್ನನ್ನು ತಾತ್ಕಾಲಿಕವಾಗಿ ಜೈಲಿನಲ್ಲಿರಿಸಬಹುದು” ಎಂದು ಹೇಳಿದರು.
“ಆರೋಪಿಗಳಲ್ಲಿ ಒಬ್ಬರು ಈಗಾಗಲೇ ಬಿಜೆಪಿಗೆ ಸೇರಿದ್ದಾರೆ, ಇನ್ನೊಬ್ಬರು ಬಿಜೆಪಿ ಟಿಕೆಟ್ ಪಡೆದಿದ್ದಾರೆ ಮತ್ತು ಮೂರನೆಯವರು ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಿಜೆಪಿಗೆ 50 ಕೋಟಿ ರೂ.ಗಳನ್ನು ನೀಡಿದ್ದಾರೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೇಜ್ರಿವಾಲ್ ಬಂಧನ ಖಂಡಿಸಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಎಎಪಿ ಸಜ್ಜು; ಹೆಚ್ಚಿದ ಭದ್ರತೆ
ಇ.ಡಿ ವಶದಲ್ಲಿದ್ದ ವೇಳೆ ಕವಿತಾ ಅವರಿಗೆ ಡಿಜಿಟಲ್ ದಾಖಲೆಗಳು ಸೇರಿದಂತೆ ಇನ್ನಿತರೆ ಪ್ರಶ್ನೆಗಳನ್ನೂ ಕೇಳಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿರುವುದಾಗಿ ‘ಎಎನ್‌ಐ‘ ವರದಿ ಮಾಡಿದೆ.