ದೆಹಲಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಎಎಪಿ, 10 ವರ್ಷಗಳ ಬಳಿಕ ಅಧಿಕಾರ ಗದ್ದುಗೆ ಕಳೆದುಕೊಂಡಿದೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್, “ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇವೆ” ಎಂದು ಹೇಳಿದ್ದಾರೆ.
“ನಮ್ಮ ಪಕ್ಷವು ಅಧಿಕಾರಕ್ಕಾಗಿ ರಾಜಕೀಯದಲ್ಲಿಲ್ಲ. ಎಎಪಿ ರಚನಾತ್ಮಕ ವಿರೋಧ ಪಕ್ಷದ ಪಾತ್ರ ನಿರ್ವಹಿಸುತ್ತದೆ. ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ” ಎಂದಿದ್ದಾರೆ.
“ಜನರ ನಿರ್ಧಾರವು ಅತ್ಯಂತ ಮುಖ್ಯ. ಬಿಜೆಪಿಯ ಗೆಲುವಿಗೆ ನಾನು ಅಭಿನಂದಿಸುತ್ತೇನೆ. ಅವರಿಗೆ ಬಹುಮತವನ್ನು ನೀಡಿದ ಜನರ ಆಶಯಗಳು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತದೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ದೆಹಲಿಯ 70 ಸ್ಥಾನಗಳಲ್ಲಿ ಬಿಜೆಪಿ ಕನಿಷ್ಠ 45 ಸ್ಥಾನಗಳನ್ನು ಗೆಲ್ಲುವುದು ಬಹುತೇಕ ಖಚಿತವಾಗಿದೆ. ಎಎಪಿ 25 ಸ್ಥಾನಗಳನ್ನು ಗೆಲ್ಲಲಿದೆ. 2020ರ ಚುನಾವಣೆಯಲ್ಲಿ ಎಎಪಿ ಬರೋಬ್ಬರಿ 62 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ಕೇವಲ 8 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.