ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್‌ಡಿಎ ಸರ್ಕಾರದ ಪಾಲುದಾರ ಜೆಡಿಯು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಜೆಡಿಯು ಬೇಡಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡ ಮೋದಿ ಸರ್ಕಾರ, ಬಿಹಾರಕ್ಕೆ ಆ ಸ್ಥಾನವನ್ನು ನೀಡುವುದೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚರ್ಚೆ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ) ಸಚಿವ ಜಿತನ್ ರಾಮ್ ಮಾಂಝಿ, ‘ನೀತಿ ಆಯೋಗವು ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಂಬಂಧನೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಆದರೆ, ರಾಜ್ಯದ ಹಣಕಾಸಿನ ಅಗತ್ಯಗಳನ್ನು ಪೂರೈಸಬಹುದು’ ಎಂದು ಹೇಳಿದ್ದಾರೆ.
ಹಾಜಿಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಂಝಿ, “ನೀತಿ ಆಯೋಗವು ದೇಶದ ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಏನು ಬೇಕಾದರೂ ಕೇಳಬಹುದು. ಆದರೆ, ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗುವುದಿಲ್ಲ” ಎಂದು ಹೇಳಿದ್ದಾರೆ.
“ಕೇಂದ್ರ ಸರ್ಕಾರ ಬಿಹಾರಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ. ಅಭಿವೃದ್ಧಿಗೆ ಎಷ್ಟೇ ಹಣ ಬೇಕಾದರೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ನೀಡಲಿದ್ದಾರೆ” ಎಂದಿದ್ದಾರೆ.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದಾಗಿನಿಂದ, ಜೆಡಿಯು ನಾಯಕರು ಬಿಹಾರಕ್ಕೆ ವಿಶೇಷ ಸ್ಥಾನಮಾನಕ ನೀಡಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಜೆಡಿಯು ಬೇಡಿಕೆಗೆ ಕೇಂದ್ರ ಜಲಸಂಪನ್ಮೂಲ ಸಚಿವ ವಿಜಯ್ ಕುಮಾರ್ ಚೌಧರಿ ಮತ್ತು ಕಟ್ಟಡ ನಿರ್ಮಾಣ ಸಚಿವ ಅಶೋಕ್ ಚೌಧರಿ ಧ್ವನಿಗೂಡಿಸಿದ್ದಾರೆ.
ಏತನ್ಮಧ್ಯೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್ ನಾಯಕಿ ಮೀರಾ ಕುಮಾರ್ ಅವರಂತಹ ವಿರೋಧ ಪಕ್ಷದ ನಾಯಕರು ಎನ್‌ಡಿಎ ಸರ್ಕಾರದ ಭಾಗವಾಗಿದ್ದರೂ ಬಿಹಾರಕ್ಕೆ ಬಿಜೆಪಿಯಿಂದ ವಿಶೇಷ ಸ್ಥಾನಮಾನ ಪಡೆಯಲಾಗದ ಜೆಡಿಯುಅನ್ನು ಲೇವಡಿ ಮಾಡಿದ್ದಾರೆ.