ಬಳ್ಳಾರಿಯನ್ನು ತಮ್ಮ ‘ರಿಪಬ್ಲಿಕ್’ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ 884 ಕೋಟಿ ರೂ. ನಷ್ಟ ಉಂಟು ಮಾಡಿದ್ದ ಪ್ರಕರಣದಲ್ಲಿ ಬಿಜೆಪಿ ನಾಯಕ, ಶಾಸಕ ಜಿ. ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ. ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ಬೆನ್ನಲ್ಲೇ, ಜನಾರ್ದನ ರೆಡ್ಡಿಯ ಆಸ್ತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಜನಾರ್ದನ ರೆಡ್ಡಿಯ ಅಕ್ರಮ ಗಣಿಗಾರಿಕೆ ಮತ್ತು ಲೂಟಿಯಿಂದ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ. ಹೀಗಾಗಿ, ಅವರ ಆಸ್ತಿಯನ್ನು ಸರ್ಕಾರವು ‘ಅರಿಯರ್ಸ್ ಆಫ್ ಲ್ಯಾಂಡ್ ರೆವಿನ್ಯೂ’ ಎಂದು ಪರಿಗಣಿಸಿ, ಮುಟ್ಟುಗೋಲು ಹಾಕಿಕೊಳ್ಳಬೇಕು. ಸರ್ಕಾರಕ್ಕೆ ಆಗಿರುವ ನಷ್ವವನ್ನು ಇದರಿಂದ ತುಂಬಿಸಿಕೊಳ್ಳಬಹುದು. ಅಲ್ಲದೆ, ರೆಡ್ಡಿಯ ಅಕ್ರಮ ಗಣಿಗಾರಿಕೆಯಿಂದ ಲಾಭ ಪಡೆದ ಅಂದಿನ ಸರ್ಕಾರದ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ದುರಂಹಕಾರಿ ರಾಜಕಾರಣಿಗಳು ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆ ಅನುಭವಿಸಲೇಬೇಕು ಎಂಬುದಕ್ಕೆ ರೆಡ್ಡಿಗೆ ಶಿಕ್ಷೆ ವಿಧಿಸಿರುವುದು ಅತ್ಯುತ್ತಮ ಉದಾಹರಣೆಯಾಗಿದೆ. 2000-2006ರಿಂದ ರೆಡ್ಡಿ ಅಕ್ರಮ ಗಣಿಗಾರಿಗೆ ನಡೆದಾಗ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು. ಅಂದು ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರೇ ಖುದ್ದು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅಕ್ರಮ ಗಣಿಗಾರಿಕೆ ಬಗ್ಗೆ ಅತ್ಯಂತ ನಿಖರ ವರದಿ ಸಿದ್ದಪಡಿಸಿದ್ದು ಕಾಂಗ್ರೆಸ್ ಪಕ್ಷ. 2008ರಲ್ಲಿ ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯು ಅಕ್ರಮ ಗಣಿಗಾರಿಕೆಯ ವರದಿಯನ್ನು ಬಿಡುಗಡೆ ಮಾಡಿತ್ತು. ಆ ವರದಿಯು ಲೋಕಾಯುಕ್ತ ತನಿಖೆಗೆ ಸಹಾಯವನ್ನೂ ಮಾಡಿದೆ” ಎಂದು ಅವರು ಹೇಳಿದ್ದಾರೆ.
“ಈ ಅಕ್ರಮ ಗಣಿಗಾರಿಕೆಗೆ ಅಂದಿನ ಸರ್ಕಾರಗಳು ನೆರವು ನೀಡಿದ್ದವು. ಶ್ರೀರಾಮುಲು ಅವರು ಅರಣ್ಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು. ಅಂದು ಅಧಿಕಾರದಲ್ಲಿ ಇದ್ದುಕೊಂಡೆ ಅನ್ಯಾಯ ಎಸಗಿದವರಿಗೆ ಇಂದು ತಕ್ಕ ಶಿಕ್ಷೆಯಾಗಿದೆ” ಎಂದು ಹೇಳಿದ್ದಾರೆ.