“ಮುಸ್ಲಿಮರು ಎಲ್ಲೆಲ್ಲಿ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಿದ್ದೀರಿ. ಮರ್ಯಾದೆಯಿಂದ ಮಸೀದಿಗಳನ್ನು ತೆಗೆದುಕೊಳ್ಳಿ. ಇಲ್ಲವಾದಲ್ಲಿ ಹಿಂದೂ ಸಮಾಜ ಅಂತಹ ಮಸೀದಿಗಳನ್ನು ಒಡೆದು ಪುಡಿ ಪುಡಿ ಮಾಡುತ್ತದೆ” ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಶ್ರೀರಾಮಸೇನೆಯಿಂದ ಆಯೋಜನೆ ಮಾಡಿದ್ದ ‘ಮೋದಿ ಗೆಲ್ಲಿಸಿ.. ಭಾರತ ಉಳಿಸಿ’ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು ನಾಲಗೆ ಹರಿಬಿಟ್ಟಿದ್ದಾರೆ.
“ನ್ಯಾಯಾಲಯದ ಸೂಚನೆ ಮೇರೆಗೆ ಮಥುರಾ, ಕಾಶಿ ದೇವಸ್ಥಾನಗಳ ಸರ್ವೆ ಕಾರ್ಯ ನಡೆಯುತ್ತಿದೆ. ಶೀಘ್ರ ಕಾಶಿಯಲ್ಲಿ ವಿಶ್ವನಾಥ, ಮಥುರಾದಲ್ಲಿ ಕೃಷ್ಣ ದೇಗುಲ ನಿರ್ಮಾಣವಾಗಲಿದೆ. ಶ್ರೀರಾಮನ ಬಗ್ಗೆ ಚರ್ಚಿಸುತ್ತಿರುವುದಕ್ಕೆ ಕೆಲವರ ಹೊಟ್ಟೆಯಲ್ಲಿ ಕಸಿವಿಸಿ ಆಗುತ್ತಿದೆ” ಎಂದು ಹೇಳಿದ್ದಾರೆ.
“ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಶ್ರೀರಾಮನ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮನ್ನ ವಿರೋಧ ಮಾಡುತ್ತಾ ಬಂದವರ ಹೊಟ್ಟೆಯಲ್ಲಿ ಈಗ ಕಸಿವಿಸಿ ಆಗುತ್ತಿದೆ. ಪಾಕಿಸ್ತಾನ ಸೇರಿ ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ಪಾಕಿಸ್ತಾನ ದೇಶದವರು ಮೋದಿ ಪ್ರಧಾನಿ ಆಗಿ ಬರಲಿ ಎಂದು ಬಯಸುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ‘ಇಂಡಿಯಾ’ ತೊರೆದು ಬಿಜೆಪಿ ಮೈತ್ರಿಗೆ ಮರಳುತ್ತಾರಾ ಬಿಹಾರ ಸಿಎಂ; ವದಂತಿಗಳೇನು?
“ಮೋದಿ ಭಾರತೀಯ ಸಂಸ್ಕೃತಿಯನ್ನ ವಿಶ್ವಕ್ಕೆ ಸಾರಿದರು. ದೇಶವನ್ನ ಲೂಟಿ ಮಾಡಿದವರಿಗೆ ಭಾರತೀಯ ಸಂಸ್ಕೃತಿ ನಾಶ ಮಾಡಲು ಆಗಲಿಲ್ಲ. ಕಾಂಗ್ರೆಸ್ ಅವರ ಅಧಿಕಾರದ ಆಸೆಯಿಂದ ದೇಶ ತುಂಡು ತುಂಡಾಯಿತು. ಜನವರಿ 22ರಂದು ರಾಮಮಂದಿರ ಉದ್ಘಾಟನೆ ದಿನದಂದು ಸ್ವತಂತ್ರ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ” ಎಂದಿದ್ದಾರೆ.
“ಸಿದ್ದರಾಮಯ್ಯ ಅವರು ಒಂದು ಸಾವಿರ ಕೋಟಿ ಹಣವನ್ನು ಮುಸ್ಲಿಮರಿಗೆ ಕೊಡುತ್ತೇನೆ ಅಂತ ಹೇಳಿದ್ದಾರೆ. ದುಡ್ಡನ್ನು ಇವರ ಅಪ್ಪನ ಮನೆಯಿಂದ ತಂದು ಕೊಡುತ್ತಾರಾ? ‘ಹಮ್ ದೋ ಹಮಾರೆ ದೋ’ ಎಂದು ಮೋದಿ ಕಾನೂನು ತಂದಿದ್ದಾರೆ. ಆದರೆ ಮುಸ್ಲಿಮರು ಹಮ್ ಪಾಂಚ್ ಹಮಾರಾ ಪಚ್ಚಿಸ್ ಎನ್ನುವುದು ಮೋದಿಯವರ ಕಾಲಾವಧಿಯಲ್ಲಿ ಸಾಧ್ಯವಿಲ್ಲ” ಎಂದು ಮುಸ್ಲಿಮರನ್ನು ಹೀಯಾಳಿಸಿದ್ದಾರೆ.
“ಪ್ರಧಾನಿ ಮೋದಿ ಸೂರ್ಯ ಇದ್ದ ಹಾಗೆ. ನಾಯಿಗಳು ಬೊಗಳುತ್ತಿರುತ್ತವೆ. ಪ್ರಿಯಾಂಕ್ ಖರ್ಗೆ ಎಂಬ ರಾಜಕಾರಣಿ ಮೋದಿ ಬಗ್ಗೆ ಟೀಕೆ ಮಾಡುತ್ತಾರೆ. ಪ್ರಿಯಾಂಕ್ ಖರ್ಗೆ ಚಿಲ್ಲರೆ ರಾಜಕಾರಣಿ” ಎಂದು ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದಿರುವ ಈಶ್ವರಪ್ಪ ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ.