ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾರವಾರ ಗ್ರಾಮೀಣ ಪೊಲೀಸರು ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸುವೋ-ಮೊಟೋ ಕೇಸು ದಾಖಲಿಸಿಕೊಂಡಿದ್ದಾರೆ.
ನಮೋ ಬ್ರಿಗೇಡ್ ಜನಗಣಮನ ಬೆಸೆಯೋಣ ಎಂಬ ಬೈಕ್ ಯಾತ್ರೆ ಹಮ್ಮಿಕೊಂಡಿದೆ. ಇದರ ಭಾಗವಾಗಿ ಕಾರವಾರದ ಕಡವಾಡ ಗ್ರಾಮಕ್ಕೆ ಬಂದಿದ್ದ ಚಕ್ರವರ್ತಿ ಸೂಲಿಬೆಲೆ, ಈ ವೇಳೆ ಕಾರವಾರ ತಾಲೂಕಿನ ಕಡವಾಡದ ಬೋವಿವಾಡದಲ್ಲಿರುವ ಶ್ರೀ ಆದಿ ದೇವಸ್ಥಾನಕ್ಕೂ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸೂಲಿಬೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೂಲಿಬೆಲೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಕಾರವಾರ ತಾಲೂಕಿನ ಕಡವಾಡದ ಬೋವಿವಾಡದಲ್ಲಿರುವ ಶ್ರೀ ಆದಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಚಕ್ರವರ್ತಿ ಸೂಲಿಬೆಲೆ , ‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳು ಬದುಕುವುದು ಕಷ್ಟ. ಮುಸ್ಲಿಮರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಯ ಹಸ್ತವಿದೆ’ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರನ್ನು ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಕರಣ ಸಂಬಂಧಿಸಿ ಹಿಂದು-ಮುಸ್ಲಿಂ ಧರ್ಮಗಳ ನಡುವೆ ವೈಮನಸ್ಸು ಉಂಟು ಮಾಡುವ ಹೇಳಿಕೆ ನೀಡಿದ್ದಾರೆಂಬ ಆರೋಪದ ಮೇಲೆ ಪೊಲೀಸರು ಸುವೋ-ಮೋಟೋ ಕೇಸು ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷೆ ಸೌಗಂಧಿಕಾ ರಂಗನಾಥ್ ಎಂಬುವವರ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ ಆರೋಪದಡಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಫೇಸ್ಬುಕ್ನಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ ಆರೋಪದ ಮೇಲೆ ಸೌಂಗಧಿಕಾ ಅವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಸೂಲಿಬೆಲೆ ವಿರುದ್ಧ ಐಪಿಸಿ ಸೆಕ್ಷನ್ 504, 509ರ ಅಡಿ ಎಫ್‌ಐಆರ್ ದಾಖಲಾಗಿತ್ತು.