ಚನ್ನರಾಯಪಟ್ಟಣ ಹೋಬಳಿಯ ಹ್ಯಾಡಾಳ ಗ್ರಾಮದ ರೈತರಿಗೆ ಭೂಮಿ ತೆರವು ಕುರಿತು ಅಧಿಕಾರಿಗಳು ನೋಟಿಸ್ ನೀಡಿರುವುದು ನನ್ನ ಗಮನಕ್ಕೆ ಬಂದಿದ್ದು ಕೂಡಲೇ ನೋಟಿಸ್ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ಧೇನೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು.
ಚನ್ನರಾಯಪಟ್ಟಣ ಹೋಬಳಿಯ ರೈತರು ಗುರುವಾರ ಸಚಿವರ ನಿವಾಸಕ್ಕೆ ಬಂದು ಮನವಿ ಸಲ್ಲಿಸಿದ ವೇಳೆ ಮಾತನಾಡಿ,”ಚನ್ನರಾಯಪಟ್ಟಣ ಹೋಬಳಿಯ ರೈತರ ಜಮೀನನ್ನು ಕೆಐಡಿಬಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರೊಂದಿಗೆ ಸಭೆಯನ್ನು ನಡೆಸಿದ್ದು ಕೆಲವೇ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇವೆ” ಎಂದು ರೈತರಿಗೆ ಭರವಸೆ ನೀಡಿದರು.
ಮುಂದಿನ ಸರ್ಕಾರದ ಆದೇಶದವರೆಗೂ ಯಾವುದೇ ನೋಟಿಸ್ಗಳನ್ನು ರೈತರಿಗೆ ನೀಡದಂತೆ ಹಾಗೂ ತಕ್ಷಣವೇ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೂ ರೈತರಿಗೆ ನೋಟಿಸ್ ನೀಡಲ್ಲ”ಎಂದರು.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ಕೆಐಎಡಿಬಿ ಭೂಸ್ವಾಧೀನ: ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವರೇ ಸಿದ್ದರಾಮಯ್ಯ?
ರೈತರ ಧರಣಿ
ಸಾವಿರಾರು ಎಕರೆ ಕೃಷಿ ಭೂಮಿಯನ್ನು ತನ್ನ ಕೈವಶಪಡಿಸಿಕೊಳ್ಳಲು ಕೆಐಎಡಿಬಿ ಮಹಾ ಹುನ್ನಾರ ನಡೆಸಿದೆ. ಪ್ರಸ್ತುತ ಭೂಸ್ವಾಧೀನ ಕೈಬಿಟ್ಟರೆ ರಾಜ್ಯಾದ್ಯಂತ ಹೋರಾಟಗಳಾಗುವ ಭಯದಲ್ಲಿ ಸರಕಾರ ನೆಪ ಹೇಳಲು ಮುಂದಾಗಿದೆ. ಪ್ರಾಣ ಕೊಡುತ್ತೇವೆ, ಭೂಮಿ ಕೊಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿರುವ ರೈತರು 842 ದಿನ ಅಂದರೆ ಸುಮಾರು ಎರಡು ವರ್ಷಗಳಿಂದ ಅನ್ನ, ನೀರು ಲೆಕ್ಕಿಸದೆ ಧರಣಿ ಕುಳಿತಿದ್ದಾರೆ. ತರಹೇವಾರಿ ಹೋರಾಟಗಳನ್ನು ರೂಪಿಸುತ್ತಲೇ ಬಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕೆ ಎಚ್ ಮುನಿಯಪ್ಪ ಅವರ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ರೈತರು ಮುನಿಯಪ್ಪ ಮನೆಯ ಮುಂದೆ ಧರಣಿ ಕುಳಿತಿದ್ದರು.