ದೇವನಹಳ್ಳಿ ಭೂಸ್ವಾಧೀನ ಕುರಿತು ಚನ್ನರಾಯಪಟ್ಟಣ ರೈತರ ಹೋರಾಟ ಮತ್ತು ಬೇಡಿಕೆಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಗುರುವಾರ ಸುದೀರ್ಘ ಸಭೆ ನಡೆಸಿದರು.
ಜೂನ್ 23ರಂದು ರೈತ ಹೋರಾಟಗಾರರು, ಸಾಹಿತಿಗಳು, ಸಿನಿಮಾ ನಟರು ಸೇರಿ ಕರೆ ನೀಡಿದ್ದ ‘ದೇವನಹಳ್ಳಿ ಚಲೋ’ ದಿನ ಸರ್ಕಾರ ಹೋರಾಟಗಾರರನ್ನು ಬಂಧಿಸಿತ್ತು. ಇದರಿಂದ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದವು. ಸಿಎಂ ದೆಹಲಿಯಿಂದ ಹಿಂತಿರುಗಿದ ನಂತರ ಜುಲೈ 4ರಂದು ಚನ್ನರಾಯಪಟ್ಟಣ ರೈತರ ಜೊತೆ ವಿಶೇಷ ಸಭೆ ನಡೆಸುವುದಾಗಿ ಘೋಷಿಸಿದ್ದರು.
ಇದನ್ನು ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | ಇಂದಿನಿಂದ ಅಹೋರಾತ್ರಿ ಧರಣಿ
ಸರ್ಕಾರದ ಭರವಸೆಯನ್ನು ಕೇಳಿಸಿಕೊಂಡ ರೈತರು ಅಂತಿಮವಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಶಪಥ ಮಾಡಿ ಸರ್ಕಾರ ವಿರುದ್ಧ ಅಂತಿಮ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರದ(ಜುಲೈ 4) ಸಭೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದರು.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ರೈತ ಹೋರಾಟಗಾರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು ಇನ್ನೂ ಹತ್ತು ದಿನಗಳ ಸಮಯಾವಕಾಶ ಕೋರಿದ್ದಾರೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಸಿದ್ದರಾಮಯ್ಯ ಅವರು ರೈತರ ಪರವಾಗಿ ನಿಲುವು ವ್ಯಕ್ತಪಡಿಸಿ ಮಾತನಾಡಿದ್ದಾರೆ ಎಂದು ಖಚಿತ ಮೂಲಗಳು ಹೇಳಿವೆ.
ಸರ್ಕಾರ ಶುಕ್ರವಾರ ರೈತರೊಂದಿಗೆ ಸಭೆ ಸರ್ಕಾರ ನಡೆಸುತ್ತಾ ಅಥವಾ ನಡೆಸಿದರೂ ಅಂತಿಮವಾಗಿ ರೈತರ ಬೇಡಿಕೆ ಈಡೇರುತ್ತಾ ಎಂಬುದನ್ನು ಕಾದು ನೋಡಬೇಕು.
ಡಿಸಿಎಂ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಐದು ಇಲಾಖೆಗಳ ಉನ್ನತ ಅಧಿಕಾರಿಗಳು ಗುರುವಾರದ ಸಭೆಯಲ್ಲಿದ್ದರು.
