ರಾಜ್ಯದ ಪ್ರಸಿದ್ಧ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಣಿಯೇ ಆಗಿಲ್ಲ ಎಂಬುದು ಆರ್‌ಟಿಐ ಕಾಯ್ದೆಯಡಿ ಅರ್ಜಿ ಹಾಕಿದ ಸಂದರ್ಭದಲ್ಲಿ ಬಹಿರಂಗಗೊಂಡಿದೆ.
ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಬೇಕು ಎಂದು ‘ನೈಜ ಹೋರಾಟಗಾರರ ವೇದಿಕೆ’ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವ ‘ನೈಜ ಹೋರಾಟಗಾರರ ವೇದಿಕೆ’ಯ ಹೆಚ್ ಎಂ ವೆಂಕಟೇಶ್, ಲೋಕೇಶ್ ಬಿ.ಎಸ್., ಹಂದ್ರಾಳ್ ನಾಗಭೂಷಣ್, ಕುಣಿಗಲ್ ನರಸಿಂಹಮೂರ್ತಿ ಹಾಗೂ ಜಗದೀಶ್, ‘ಮಂಜುನಾಥೇಶ್ವರ ದೇವಸ್ಥಾನದ ನೋಂದಾವಣೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಧರ್ಮಸ್ಥಳದ ಧರ್ಮಾಧಿಕಾರಿ ಎಂದೇ ಖ್ಯಾತಿ ಪಡೆದ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಶಾಸನಗಳನ್ನು ರೂಪಿಸುವಲ್ಲಿ ಅವರು ಪಾತ್ರದಾರರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಆದರೂ ಸಹಿತ ಶಾಸನಗಳನ್ನು ರಚಿಸುವಲ್ಲಿ ಪಾತ್ರರಾದ ವೀರೇಂದ್ರ ಹೆಗ್ಗಡೆಯವರೇ ಈಗ ಕಾನೂನು ಕಾಯ್ದೆಗಳನ್ನು ಉಲ್ಲಂಘಿಸಿರುವುದು ಉಲ್ಲೇಖ -1ರಲ್ಲಿ ಸ್ಪಷ್ಟವಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ ಹಲವಾರು ದೇವಸ್ಥಾನಗಳಿದ್ದು ಭಕ್ತರು ಸಣ್ಣಪುಟ್ಟ ದೇವಸ್ಥಾನಗಳ ಆಡಳಿತವನ್ನು ನಡೆಸುತ್ತಿದ್ದಾರೆ. ಅವರು ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಯನ್ನು ಪಾಲಿಸಿಲ್ಲವೆಂದರೆ ದೇವರ ಮೇಲಿನ ಭಕ್ತಿ ಮತ್ತು ತಿಳುವಳಿಕೆಯ ಜ್ಞಾನದ ಕೊರತೆಯ ಜೊತೆ ಕಾನೂನಿನ ಅರಿವಿಲ್ಲದೆ ಇರಬಹುದು. ಆದರೆ ಬಹಳ ಮುಖ್ಯವಾಗಿ ದೇಶದ ಕಾನೂನು, ಕಾಯ್ದೆ, ಶಾಸನಗಳನ್ನು ರಚಿಸುವಲ್ಲಿ ರಾಜ್ಯಸಭಾ ಸದಸ್ಯರಾಗಿ ಪಾತ್ರ ವಹಿಸುತ್ತಿರುವ ಕಾನೂನು ಕಾಯ್ದೆಗಳ ಸಂಪೂರ್ಣ ಮಾಹಿತಿ, ಅರಿವಿರುವ ವೀರೇಂದ್ರ ಹೆಗ್ಗಡೆಯವರು ತಮ್ಮದೇ ಆಡಳಿತವಿರುವ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೋಂದಾಯಿಸದೆ ಇರುವುದು ಅಕ್ಷಮ್ಯ ಅಪರಾಧ. ಈ ನಡೆಯನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಇ-ಮೇಲ್ ಮೂಲಕ ಕಳುಹಿಸಿರುವ ಪತ್ರದಲ್ಲಿ ವೇದಿಕೆ ಉಲ್ಲೇಖಿಸಿದೆ.
ಸಾರ್ವಜನಿಕರು ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಕಾಣಿಕೆ ದೇಣಿಗೆಗಳನ್ನು ನೀಡಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಭಕ್ತ ಸಮೂಹವೇ ಕಾರಣವಾಗಿರುವುದರಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವು ಸಾರ್ವಜನಿಕ ದೇವಸ್ಥಾನವಾಗಿ ಅನಾದಿ ಕಾಲದಿಂದಲೂ ಹೊರಹೊಮ್ಮಿದೆ. ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆ, ಕಾನೂನು, ಅಧಿನಿಯಮ, ಸುತ್ತೋಲೆ ಸೆಕ್ಷನ್ ಗಳನ್ನು ಜಾರಿಗೆ ತರುವ ಕಾರ್ಯಾಂಗದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ತಾವು, ಮಂಜುನಾಥೇಶ್ವರ ದೇವಸ್ಥಾನವನ್ನು ನೋಂದಾವಣೆ ಆಗಿರುವುದಿಲ್ಲ ಎಂಬ ಪೂರ್ಣ ಮಾಹಿತಿ ಇದ್ದರೂ ಸಹಿತ ಸದರಿ ದೇವಸ್ಥಾನದ ಮೇಲೆ ಮುಜರಾಯಿ ಇಲಾಖೆಯ ಕಾಯ್ದೆ, ಕಾನೂನುಗಳನ್ನು ಅನ್ವಯವಾಗಂತೆ ಮಾಡದಿರುವುದು ಕೂಡ ಸ್ಪಷ್ಟವಾಗಿದೆ. ಜಿಲ್ಲೆಯ ಆಡಳಿತವನ್ನು ಸಮಗ್ರವಾಗಿ ಪರಿಶೀಲಿಸಿ ಕಾರ್ಯಾಂಗದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸದೆ ಈ ದೇವಸ್ಥಾನದ ಆಡಳಿತದ ಮೇಲೆ ನೀವು ಮೌನ ವಹಿಸಿರುವುದು ಸಂವಿಧಾನ ಬಾಹಿರ ಹಾಗೂ ಆಡಳಿತದ ವೈಫಲ್ಯ ಎಂದು ಜಿಲ್ಲಾಡಳಿತದ ತಪ್ಪನ್ನು ನೈಜ ಹೋರಾಟಗಾರರ ವೇದಿಕೆ ಎತ್ತಿ ತೋರಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಜುನಾಥೇಶ್ವರ ದೇವಸ್ಥಾನದ ನೋಂದಾವಣೆಯಾಗದೇ ಇರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆ, ಕಟ್ಟಳೆ, ಸುತ್ತೋಲೆಗಳನ್ನು ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವ, ಪಾಲಿಸುವ ಗುರುತರ ಜವಾಬ್ದಾರಿ ಈಗ ನಿಮ್ಮ ಮೇಲೆ ಇದೆ. ಅದನ್ನು ನಿಭಾಯಿಸುವ ಜವಾಬ್ದಾರಿ ಜಿಲ್ಲಾಧಿಕಾರಿಯದ್ದಾಗಿರುತ್ತದೆ. ಹೀಗಾಗಿ, ಮನವಿ ಪತ್ರ ತಲುಪಿದ ಏಳು ದಿನಗಳ ಒಳಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರನ್ನು ‘ನೈಜ ಹೋರಾಟಗಾರರ ವೇದಿಕೆ’ ಸದಸ್ಯರು ಒತ್ತಾಯಿಸಿದ್ದಾರೆ.