ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ವೀಣಾ ಭರದ್ವಾಡ ಆಯ್ಕೆಯಾಗಿದ್ದಾರೆ. ವೀಣಾ ಅವರು ಪಾಲಿಕೆಯ 22ನೇ ಮೇಯರ್ ಆಗಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.
ಮಂಗಳವಾರ, ಪಾಲಿಕೆಯ ಮೇಯರ್ ಹುದ್ದೆಗೆ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೀಣಾ ಭರದ್ವಾಡ ಅವರು 46 ಮತಗಳನ್ನು ಪಡೆದು, ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು , ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುವರ್ಣ ಕಲ್ಲಕುಂಟ್ಲ 37 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಈ ಹಿಂದಿನ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ಅವರು ನೂತನ ಮೇಯರ್‌ಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಾರಿ ಮೇಯರ್ ಹುದ್ದೆಯನ್ನು ಕಾಂಗ್ರೆಸ್ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಲಿಂಗಾಯತ ಸಮುದಾಯ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಇತ್ತೀಚೆಗೆ ಬಿಜೆಪಿ ತೆರೆದು ಕಾಂಗ್ರೆಸ್ ಸೇರಿದ್ದರು. ಹೀಗಾಗಿ, ಪಾಲಿಕೆಯಲ್ಲಿರುವ ಶೆಟ್ಟರ್ ಬೆಂಬಲಿತ ಬಿಜೆಪಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಬಹುದು ಅಥವಾ ಮತದಾನದಿಂದ ದೂರ ಉಳಿಯಬಹುದು ಎಂದು ಅಂದಾಜಿಸಲಾಗಿತ್ತು.
ಅವರು ಮತದಾನದಿಂದ ದೂರ ಉಳಿದರೂ ಕಾಂಗ್ರೆಸ್‌ಗೆ ಗೆಲುವಿನ ಹಾದಿ ಸುಲಭವೆಂಬ ಲೆಕ್ಕಾಚಾರಗಳೂ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಇದೆಲ್ಲದರ ನಡುವೆಯೇ ಚುನಾವಣೆ ನಡೆದಿದ್ದು, ಯಾವುದೇ ಅಡ್ಡ ಮತದಾನ ಅಥವಾ ಗೈರಾಗದ ಕಾರಣ ಬಿಜೆಪಿ ಮತ್ತೆ ಪಾಲಿಕೆಯ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿದೆ.
ಬಿಜೆಪಿ ಮುಖಂಡನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಿಸಲು ಕೋರ್ಟ್ ಅನುಮತಿ ನೀಡದ ಕಾರಣ, ಅವರು ಮತದಾನದಿಂದ ದೂರು ಉಳಿದಿದ್ದರು.