ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ದೊಡ್ಡ ಸವಾಲು ಎದುರಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಅಧಿಕೃತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ರಾಜಕೀಯ ರಂಗವನ್ನು ಪ್ರವೇಶಿಸುತ್ತೇನೆ” ಎಂದು ಘೋಷಿಸಿದರು.
Bengaluru | Fakkireshwar Mutt seer, Jagadguru Fakira Dingaleshwar Mahaswami says, “Union Minister Pralhad Joshi is trampling our community. His contribution to the Dharwad Lok Sabha constituency is still questionable.” pic.twitter.com/amEryGyhWp
— ANI (@ANI) April 8, 2024
“ಅಧಿಕಾರದ ಮತ್ತು ಸಂಪತ್ತಿನ ಮದದಲ್ಲಿ ಪ್ರಲ್ಹಾದ್ ಜೋಶಿ ಬದುಕುತ್ತಿದ್ದಾರೆ. ಜೋಶಿಯವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಜೋಷಿ ಅವರೇ, ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಲ್ಹಾದ್ ಜೋಶಿ ದುರಾಡಳಿತ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರು ಗಮನಹರಿಸುತ್ತಿಲ್ಲ. ಅವರಿಗೆ ಅದೇ ಬೇಕಾಗಿದೆ ಅನ್ನಿಸುತ್ತದೆ. ಹೀಗಾಗಿ, ಈ ದಿಂಗಾಲೇಶ್ವರ ರಾಜಕೀಯ ಪ್ರವೇಶ ಮಾಡಬೇಕಾಯಿತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷದ ವಿರುದ್ಧ ಸ್ವಾಭಿಮಾನದ ಯುದ್ಧ ಆಗಿದೆ. ಇದು ಮತದಾರರು ಮಾಡಿದ ತೀರ್ಮಾನ ಆಗಿದೆ. ಹೀಗಾಗಿ ನನಗೆ ಸ್ಪರ್ಧೆ ಮಾಡುವಂತೆ ಮತದಾರರು ಒತ್ತಾಯ ಮಾಡಿದ್ದಾರೆ” ಎಂದರು.
“ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಕಳೆದ ಒಂದೂವರೆ ವರ್ಷದಿಂದ ಹಾವೇರಿಯಲ್ಲಿ ಸಕ್ರಿಯರಾಗಿದ್ದರು. ಅವರಿಗೆ ಟಿಕೆಟ್ ತಪ್ಪಿಸಿರುವುದು ಇದೇ ಪ್ರಲ್ಹಾದ್ ಜೋಶಿ. ನಾನು ಹಿಂದೆಯೇ ಕೆಎಸ್ ಈಶ್ವರಪ್ಪ ಹಾಗೂ ಅವರ ಪುತ್ರನಿಗೆ ಪ್ರಹ್ಲಾದ್ ಜೋಶಿಯನ್ನು ನಂಬಬೇಡಿ ಎಂದು ಹೇಳಿದ್ದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ” ಎಂದು ದಿಂಗಾಲೇಶ್ವರ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಸಿಎಂ ಹುದ್ದೆಯಿಂದ ಕೇಜ್ರಿವಾಲ್ ವಜಾಗೊಳಿಸಲು ಮೂರನೇ ಅರ್ಜಿ: ಹೈಕೋರ್ಟ್ ಗರಂ
ದುರಾಡಳಿತದ ವಿರುದ್ಧ ನನ್ನ ಹೋರಾಟ ಎಂದ ದಿಂಗಾಲೇಶ್ವರ ಸ್ವಾಮೀಜಿ, “ಪ್ರಧಾನಿ ಮೋದಿ ಭೇಟಿಗೆ ಯಾವುದೇ ರಾಜ್ಯದ ಬಿಜೆಪಿ ಸಂಸದರು ಅವಕಾಶ ಕೊಡಲಿಲ್ಲ. ಪ್ರಲ್ಹಾದ್ ಜೋಷಿಯವರಿಗೆ ಮೋದಿಯವರು ದೂರ ಆಗುತ್ತಾರೆ ಅನ್ನುವ ಭಯವಿದೆ. ನನ್ನ ಗುರಿಯನ್ನು ಮುಟ್ಟುವವರೆಗೂ ಇನ್ಮುಂದೆ ಮಾಲೆಯನ್ನು ಧರಿಸಲ್ಲ. ಹೂಮಾಲೆಯನ್ನ ಸ್ವೀಕಾರ ಮಾಡುವುದಿಲ್ಲ” ಎಂದು ಇದೇ ವೇಳೆ ದಿಂಗಾಲೇಶ್ವರ ಸ್ವಾಮೀಜಿ ಶಪಥ ಮಾಡಿದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ, ಬ್ರಾಹ್ಮಣ ಸಮಾಜದ ಪ್ರಲ್ಹಾದ್ ಜೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಕುರುಬ ಸಮಾಜದ ವಿನೋದ್ ಅಸೂಟಿ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 6ರಿಂದ 7 ಲಕ್ಷ ಮತದಾರರು ಲಿಂಗಾಯತ ಸಮುದಾಯಕ್ಕೆ ಸೇರಿದವರಿದ್ದಾರೆ.
