ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು 10 ವರ್ಷಗಳಿಂದ ವಿಫಲವಾಗಿರುವ ಮೋದಿ ಸರ್ಕಾರ, ರೈತರ ಧ್ವನಿ ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್, ಹರಿಯಾಣ ರೈತರು ದೆಹಲಿ ಚಲೋಗೆ ಕರೆಕೊಟ್ಟಿದ್ದು, ಫೆಬ್ರವರಿ 13ರ ಮಂಗಳವಾರ ದೆಹಲಿಯತ್ತ ಹೊರಟ್ಟಿದ್ದಾರೆ. ಪಂಜಾಬ್ ರೈತರನ್ನು ತಡೆಯಲು ಅಂಬಾಲಾ ಗಡಿಯಲ್ಲಿ ಹರಿಯಾಣ ಸರ್ಕಾರ ದೊಡ್ಡ ಸಿಮೆಂಟ್ ಬ್ಲಾಕ್‌ಗಳನ್ನು ಅಳವಡಿಸಿದೆ. ದೆಹಲಿ ಪೊಲೀಸರು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ರಸ್ತೆಗಳಿಗೆ ದೊಡ್ಡ ದೊಡ್ಡ ಮೊಳೆಗಳನ್ನು ಹೊಡೆದಿದ್ದಾರೆ. ರೈತ ಪ್ರತಿಭಟನೆಯನ್ನು ಹತ್ತಿಕ್ಕಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯತ್ನಿಸುತ್ತಿದೆ.
ಸರ್ಕಾರದ ನಡೆಯನ್ನು ಖಂಡಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ, “ಮುಳ್ಳುತಂತಿ, ಡ್ರೋನ್ ಮೂಲಕ ಅಶ್ರುವಾಯು, ಮೊಳೆಗಳು ಮತ್ತು ಗನ್‌ಗಳು ಎಲ್ಲವನ್ನೂ ಹೊಂದಿಸಲಾಗಿದೆ. ಸರ್ವಾಧಿಕಾರಿ ಮೋದಿ ಸರ್ಕಾರವು ರೈತರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
“‘ಆಂದೋಲನಜೀವಿ’ ಮತ್ತು ‘ಪರಾವಲಂಬಿ’ ಎಂದು ಕರೆಯುವ ಮೂಲಕ ರೈತರನ್ನು ಹೇಗೆ ಅವಮಾನಿಸಲಾಯಿತು. 750 ಮಂದಿ ರೈತರು ಹೇಗೆ ಪ್ರಾಣ ಕಳೆದುಕೊಂಡರು ಎಂಬುದನ್ನು ನೆನಪಿಡಿ,” ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
कायर pic.twitter.com/S6lUStaTYL
— Congress (@INCIndia) February 12, 2024
“10 ವರ್ಷಗಳಲ್ಲಿ ಮೋದಿ ಸರ್ಕಾರ ದೇಶದ ಅನ್ನದಾತರಿಗೆ ನೀಡಿದ್ದ ಮೂರು ಭರವಸೆಗಳನ್ನು – 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಸ್ವಾಮಿನಾಥನ್ ವರದಿಗೆ ಅನುಗುಣವಾಗಿ ವೆಚ್ಚದ ಮೇಲೆ 50% ಆದಾಯ ಹಾಗೂ ಎಂಎಸ್‌ಪಿಗೆ ಕಾನೂನು ಸ್ಥಾನಮಾನ – ಈಡೇರಿಸುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ.
“ನಾವು ಹೆದರುವುದಿಲ್ಲ, ತಲೆಬಾಗುವುದಿಲ್ಲ. ರೈತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದ್ದಾರೆ.
ಮಾನ್ಯ ಖರ್ಗೆ ಅವ್ರೆ…ಕಳೆದ 10 ವರ್ಷಗಳಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ದನಿ ಹತ್ತಿಕ್ಕುತ್ತಿದೆ ಅಂತೇಳಿ ಕೇಂದ್ರದ ಕಡೆಗೆ ಬೊಟ್ಟು ಮಾಡಿ ಬೊಬ್ಬೆ ಹೊಡೆಯುತ್ತಿದ್ದೀರಿ. ಸ್ವಲ್ಪ ರಾಜ್ಯದ ಕಡೆ ನೋಡಿ ಸ್ವಾಮಿ..ಏಕೆಂದ್ರೆ.. ಒಂದು ಎಕರೆಗೆ 20 ಸಾವಿರ ಖರ್ಚು ಮಾಡಿ ಬೆಳೆ ಬೆಳೆದು ನಷ್ಟಕ್ಕೊಳಗಾಗುವ ರೈತನಿಗೆ 2 ಸಾವಿರ ರೂಪಾಯಿ ಭಿಕ್ಷೆ ಹಾಕುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಸರಿಯೇ ಮಿಸ್ಟರ್ ಖರ್ಗೆ ಅವ್ರೆ…
ಎಂ. ಶಿವರಾಂ.. ಬೆಂಗಳೂರು.