- ‘ಆಕಾಶವೇನು ಕಳಚಿ ಬಿದ್ದಿಲ್ಲ. ಹಣ ಕೊಟ್ಟರೆ ಅಕ್ಕಿ ಎಲ್ಲ ಕಡೆಯೂ ಸಿಗುತ್ತದೆ’
- ಸದ್ದಿಲ್ಲದೆ ಮದ್ಯದ ದರವನ್ನೂ ಏರಿಕೆ ಮಾಡಲಾಗಿದೆ: ಸಿ ಟಿ ರವಿ ಆಕ್ಷೇಪ
ರಾಜ್ಯ ಸರ್ಕಾರದಿಂದ ಆಗದಿರುವ ಕೆಲಸಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಸಿದ್ದರಾಮಯ್ಯ ಈಗಲೇ ಶುರು ಮಾಡಿದ್ದಾರೆ. ನಾಲೈದು ತಿಂಗಳ ಬಳಿಕ ಕೇಂದ್ರವನ್ನು ದೂರುತ್ತಾರೆ ಎಂದು ಭಾವಿಸಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡುವುದಾಗಿ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕಮಿಟ್ಮೆಂಟ್ ಪತ್ರ ಏನಾದರೂ ಕೊಟ್ಟಿತ್ತೇ” ಎಂದು ಪ್ರಶ್ನಿಸಿದರು.
“ಆಕಾಶವೇನು ಕಳಚಿ ಬಿದ್ದಿಲ್ಲ. ಹಣ ಕೊಟ್ಟರೆ ಅಕ್ಕಿ ಎಲ್ಲ ಕಡೆಯೂ ಸಿಗುತ್ತದೆ. ತಲಾ 10 ಕೆ.ಜಿ ಅಕ್ಕಿ ಕೊಡಲಾಗದಿದ್ದರೆ ಎಲ್ಲ ಪಡಿತರ ಚೀಟಿದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಕೊಟ್ಟರೆ ನಾನೇ ಕೊಟ್ಟೆ ಎನ್ನುವುದು, ಕೊಡದಿದ್ದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ” ಎಂದಿದ್ದಾರೆ.
“ಅಕ್ಕಿ ಕಳುಹಿಸುತ್ತೇವೆ. ಚೀಲದ ಮೇಲೆ ನಿಮ್ಮ ಹೆಸರು ಹಾಕಿಕೊಂಡು ವಿತರಿಸಿ ಎಂದು ಎಫ್‌ಸಿಐ ಪತ್ರ ನೀಡಿತ್ತಾ? ಸಿದ್ದರಾಮಯ್ಯ ಅವರು ‘ಸುಳ್ಳುರಾಮಯ್ಯ’ ಅಲ್ಲ ಎನ್ನುವುದಾದರೆ ಕಮಿಟ್ಮೆಂಟ್ ಪತ್ರ ತೋರಿಸಲಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯವರನ್ನು ಬಡವರ ವಿರೋಧಿಗಳು ಎಂದು ಕರೆಯದೆ ಬೇರೇನು ಹೇಳಬೇಕು: ಸಿದ್ದರಾಮಯ್ಯ ತರಾಟೆ
“ವಿದ್ಯುತ್ ದರವನ್ನು ಮೆಲ್ಲಗೆ ಏರಿಸಿದ್ದಾರೆ. ಹಿಂದಿನ ಸರ್ಕಾರವೇ ತೀರ್ಮಾನ ಮಾಡಿತ್ತು ಎನ್ನುತ್ತಿದ್ದಾರೆ. ಹಿಂದು-ಮುಂದು ನೋಡದೆ ಪ್ರಸ್ತಾವನೆಗೆ ಒಪ್ಪಿಗೆ ಕೊಟ್ಟವರು ಯಾರು ಸಿದ್ದರಾಮಯ್ಯ ಅವರೇ? ಜನರಿಗೆ ಗ್ಯಾರಂಟಿ ಘೋಷಣೆ ಮಾಡುವಾಗ ದೊಡ್ಡದಾಗಿ ಸದ್ದು ಮಾಡುವುದು, ಕಿತ್ತುಕೊಳ್ಳುವಾಗ ಸದ್ದೇ ಇರುವುದಿಲ್ಲ. ಬಿಜೆಪಿ ಸರ್ಕಾರದ ಮುಂದೆಯೂ ಕೆಇಆರ್‌ಸಿ ಪ್ರಸ್ತಾವನೆ ಇಟ್ಟಿತ್ತು. ಅನುಮತಿ ನೀಡಿರಲಿಲ್ಲ. ಸದ್ದಿಲ್ಲದೆ ಮದ್ಯದ ದರವನ್ನೂ ಏರಿಕೆ ಮಾಡಲಾಗಿದೆ” ಎಂದರು.
“ಆಸ್ತಿ, ವಾಹನ ನೋಂದಣಿ ಶುಲ್ಕ ಹೆಚ್ಚಿಸಲಾಗುತ್ತಿದೆಯಂತೆ. ಒಂದು ಕಡೆ ಕಿತ್ತು, ಮತ್ತೊಂದು ಕಡೆ ಕೊಟ್ಟಂತೆ ಮಾಡಲಾಗುತ್ತಿದೆ. ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ” ಎಂದರು.