”ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ. ಸ್ಫೋಟವಾಗಿರುವುದು ನಿಜ. ಬಿಜೆಪಿ ಅವರ ಅವಧಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆದಾಗಲೂ ಬಿಜೆಪಿ ನಾಯಕರು ತುಷ್ಟೀಕರಣ ಮಾಡಿದ್ದರಾ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್‌ನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ” ಎಂದರು.
ಮಂಗಳೂರು ಕುಕ್ಕರ್ ಬಾಂಬ್ ಹಾಗೂ ಈ ಸ್ಫೋಟಕ್ಕೂ ಸಾಮ್ಯತೆ ಇರುವ ಬಗ್ಗೆ ಕೇಳಿದ ಸುದ್ದಿಗಾರರ ಪ್ರಶ್ನೆಗೆ ತನಿಖೆ ನಡೆಯುತ್ತಿದೆ ಎಂದು ಉತ್ತರಿಸಿದರು.
”ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿಗರು ರಾಜಕೀಯವಾಗಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಅವರ ಕಾಲದಲ್ಲಿಯೂ ಬಾಂಬ್ ಸ್ಪೋಟವಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟವಾದಾಗ ಏನು ಮಾಡಿದ್ದರು? ಆಗಲೂ ತುಷ್ಟೀಕರಣದಿಂದಾಗಿ ಆಗಿತ್ತೇ?” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ನಾಲ್ವರು ಶಂಕಿತರು ಪೊಲೀಸ್ ವಶಕ್ಕೆ
”ಸ್ಪೋಟದ ಘಟನೆಯನ್ನು ಖಂಡಿಸುತ್ತೇನೆ. ಇದರಲ್ಲಿ ರಾಜಕಾರಣ ಮಾಡಬಾರದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಪೊಲೀಸ್ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ, ಬೆಂಗಳೂರಿಗೆ ಆಗಮಿಸಿದ ಅವರು ಬ್ರೂಕ್ ವೆಲ್ ಫೀಲ್ಡ್ ಆಸ್ಪತ್ರೆ ಮತ್ತು ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದಲ್ಲಿ ಗಾಯಗೊಂಡವರನ್ನು ಮಾತಾಡಿಸಿದರು. ಇನ್ನು ರಾಮೇಶ್ವರ ಕೆಫೆಗೆ ಭೇಟಿ ನೀಡಿ ಘಟನಾ ಸ್ಥಳದ ಪರಿಶೀಲನೆ ನಡೆಸಿದರು.