ಮೋದಿ ಸರ್ಕಾರ ಬಂದ ಮೇಲೆ ಕೇಂದ್ರದ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ವಿಷಯದಲ್ಲಿ ಸಂಘದ್ದೇ ಅಂತಿಮ ನಿರ್ಣಯ ಎಂಬ ಒಪ್ಪಂದವಿತ್ತು. ಇದು ನಡೆದದ್ದು ಬಿಟ್ಟರೆ ಉಳಿದಂತೆ ಮೋದಿ ಮತ್ತು ಅಮಿತ್ ಶಾ ತಾವಿಬ್ಬರು ನಡೆದದ್ದೇ ದಾರಿ ಎಂದು ಹೊರಟಾಗಿತ್ತು.
ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ, ಭಾರತವನ್ನ ಹಿಂದುತ್ವದ ಹಾದಿಯಲ್ಲಿ ಮುನ್ನಡೆಸುವ ಮಹಾನಾಯಕ ಎಂದೇ ಬಿಂಬಿತವಾಗಿದ್ದ ನರೇಂದ್ರ ಮೋದಿಯವರನ್ನು ಆರ್ ಎಸ್ ಎಸ್ ಕೈ ಬಿಟ್ಟಿತೇ ಅನ್ನುವ ವಿಷಯ ಚರ್ಚೆಗೆ ಬಂದಿದೆ.
ತನ್ನ ರಾಮರಥದ ಮೂಲಕ ಬಿಜೆಪಿಗೆ ಶಕ್ತಿ ನೀಡಿದ ಆಡ್ವಾಣಿಯವರನ್ನು ಬದಿಗೆ ಸರಿಸಿ, ಮೋದಿಯವರನ್ನು ಪ್ರಧಾನಿ ಮಾಡಲು ಉದ್ಯಮಪತಿಗಳು, ಬಾಬಾ ರಾಮದೇವ್ ರಂತವರು, ಜೊತೆಗೆ ಸಂಘ ಹೀಗೆ ಅನೇಕರ ಪಾತ್ರವಿತ್ತು. ಮೋದಿಯವರ ಕುರಿತ ಮಾರ್ಕೆಟಿಂಗ್, ಭಾರತೀಯ ಜನಸಮೂಹವನ್ನೇ ಹುಚ್ಚೆಬ್ಬಿಸುವ ರೀತಿಯಲ್ಲಿತ್ತು. ಆಗ ಸಂಘಕ್ಕೂ ಖುಷಿಯಾಗಿತ್ತು.
ಒಂದು ಕಡೆ ಹಿಂದುತ್ವದ ಅಮಲಿನವರಿಗೆ ಇನ್ನೇನು ಭಾರತ ಹಿಂದೂ ರಾಷ್ಟ್ರ ಆಗಿಯೇ ಹೋಯಿತು ಎಂದೆನಿಸಿದರೆ, ಮೋದಿಯ ಮಾತು ಕೇಳಿ ಭಾರತ ಸಂಪೂರ್ಣ ಅಭಿವೃದ್ಧಿಯ ದೇಶವಾಗುತ್ತದೆ ಎಂಬ ಗಟ್ಟಿ ನಂಬಿಕೆ ಕೆಲವು ಜನಸಾಮಾನ್ಯರಿಗೆ, ಮತ್ತೆ ಕೆಲವರಿಗೆ ರಾಜಕೀಯವಾಗಿ ಕಾಂಗ್ರೆಸ್ ಮುಕ್ತ ಭಾರತ ಎಂದೂ , ದೇಶದ ನಕಾಶೆಗೆ ಸಂಪೂರ್ಣ ಕೇಸರಿ ಬಳಿದು ಹಂಚಿಕೊಂಡದ್ದೂ ಆಯಿತು. ಇಲ್ಲಿ ನ್ಯಾಯಾಲಯದ ಆದೇಶದಿಂದ ರಾಮ ಮಂದಿರ, ಕಾಶ್ಮೀರದ ಆರ್ಟಿಕಲ್ 370 ತೆಗೆದ ವಿಷಯ ಹಿಂದುತ್ವದವರಿಗೆ ತಾತ್ಕಾಲಿಕವಾಗಿ ಒಂದಿಷ್ಟು ಖುಷಿಕೊಟ್ಟಿತು.
ಆದರೆ ಮೋದಿಯಿಂದ ಹಿಡಿದು ಅನಂತಕುಮಾರ ಮತ್ತು ಸೂಲಿಬೆಲೆ ಅಂತವರು ಆಡಿದ ಮಾತುಗಳ ಭರವಸೆ ಹಾಗೇ ಉಳಿಯಿತು. ಬೆಲೆ ಏರಿಕೆ, ಕಪ್ಪು ಹಣ, ಡಾಲರ್ ಮೌಲ್ಯ, ವಿದೇಶಿ ಸಾಲ, ಸಂವಿಧಾನ ಬದಲಾವಣೆ ಹೀಗೆ ಜನ ಮಾನಸದಲ್ಲಿ ತುಂಬಿ ತುರುಕಿದ್ದ ಕನಸುಗಳು ಬೇರೆಯೇ ಇತ್ತಲ್ಲ. ಅವು ಹಾಗೇಯೆ ಉಳಿದಿಕೊಂಡೇ ಬಂತು. ನಿರುದ್ಯೋಗಿ ಯುವಕರು ಭ್ರಮನಿರಸನಕ್ಕೊಳಗಾದರು.
ಒಂದೆಡೆ ಮುಸ್ಲಿಂರ ಮೇಲಿನ ವ್ಯಾಪಕ ದ್ವೇಷ ಬೆಳಿಸಿದ್ದರಿಂದ ಹಿಂದೂತ್ವದ ಅಮಲಿನವರಿಗೆ ಸಿ ಟಿ ರವಿ, ಈಶ್ವರಪ್ಪ, ನೂಪೂರ್ ಶರ್ಮಾ, ಶೋಭಕ್ಕ, ಯತ್ನಾಳ್, ಅನಂತಕುಮಾರ್ ಹೆಗಡೆಯಂತವರೇ ನಾಡಿನ ಚುಕ್ಕಾಣಿ ಹಿಡಿಯುತ್ತಾರೆ ಎಂದು ಭಾವಿಸಿ ಥಕಥೈ ಕುಣಿತ ಶುರುಮಾಡಿದ್ದರು.
ಮೋದಿ ಸರ್ಕಾರ ಬಂದ ಮೇಲೆ ಕೇಂದ್ರದ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ವಿಷಯದಲ್ಲಿ ಸಂಘದ್ದೇ ಅಂತಿಮ ನಿರ್ಣಯ ಎಂಬ ಒಪ್ಪಂದವಿತ್ತು. ಇದು ನಡೆದದ್ದು ಬಿಟ್ಟರೆ ಉಳಿದಂತೆ ಮೋದಿ ಮತ್ತು ಅಮಿತ್ ಶಾ ತಾವಿಬ್ಬರು ನಡೆದದ್ದೇ ದಾರಿ ಎಂದು ಹೊರಟಾಗಿತ್ತು.
ಆದರೆ ಅಂತವರೆಲ್ಲರೂ ಮೂಲೆಪಾಲು. ಒಟ್ಟೂ ಗೊಂದಲ. ಇತ್ತ ಗಗನ್ನಕೇರಿದ ಬೆಲೆಯಿಂದ ಜನಸಾಮಾನ್ಯರ ವಿರೋದ. ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಂದಾಗಿ ಮೋದಿಯವರ ವಿರುದ್ದ ತಿರುಗಿ ಬಿದ್ದ ನಾಗರಿಕ ಸಮಾಜ. ಅತೀಯಾದ ಅಪರೇಷನ್ ಕಮಲ, ಪ್ರತಿಪಕ್ಷಗಳ ಮೇಲೆ ಹಿಗ್ಗಾ ಮುಗ್ಗ ಕೇಸ್ ನಿಂದಾಗಿ ಬಿಜೆಪಿ ವಿರುದ್ಧ ಪ್ರಬಲ ಸಂಘಟನೆಗೆ ಮಾಡಿಕೊಂಡು ಒಂದಾದ ಪ್ರತಿಪಕ್ಷಗಳು.
ಇಂತಹ ಪರಿಸ್ಥಿತಿಯಲ್ಲಿ ನಡೆದ ಮೊದಲ ಹಂತದ ಚುನಾವಣೆಯ ನಂತರ ಮೋದಿಯವರು ನಾಗಪುರದ ಸಂಘದ ಕೇಂದ್ರ ಕಚೇರಿಗೆ ಹೋಗುತ್ತಾರೆ. ಹತ್ತು ವರ್ಷದಲ್ಲಿ ಸುಮಾರು 40 ಬಾರಿ ಮಹಾರಾಷ್ಟ್ರಕ್ಕೆ ಹೋಗಿದ್ದರೂ ಮೋದಿಯವರು ಸಂಘದ ಕಾರ್ಯಾಲಯಕ್ಕೆ ಭೇಟಿ ನೀಡಿರಲಿಲ್ಲ. ಪ್ರಧಾನಿಯಾದ ಮೇಲೆ ಡಾ. ಹೆಡ್ಗೆವಾರ್ ಸಮಾಧಿಗೂ ಹೋಗಿ ನಮಿಸಿರಲಿಲ್ಲ.
ಈಗ ಚರ್ಚೆಯಾಗುತ್ತಿರುವ ಸುದ್ದಿ ಅದುವೆ. ಮೊದಲ ಹಂತದ ಚುನಾವಣೆಯಲ್ಲಿ ಹಿನ್ನಡೆ ಸುದ್ದಿ ತಿಳಿದು ಸಂಘದ ಸರಸಂಘಚಾಲಕರ ಭೇಟಿಗೆ ಹೋಗಿದ್ದರಂತೆ. ಸುಮಾರು 5 ಘಂಟೆಗಳ ಕಾಲ ಪ್ರಯತ್ನಿಸಿದರೂ ನೇರ ಭೇಟಿಯಾಗದ ಕಾರಣ ವಿಡಿಯೋ ಕಾನ್ಫರೆನ್ಸ್ ಕಾಲ್ ಮೂಲಕ ಮೀಟಿಂಗ್ ಆಗಿದೆಯಂತೆ.
ಸಂಘದ ಕಾರ್ಯಕರ್ತರು ಚುನಾವಣೆಗೆ ನೇರ ಕೆಲಸ ಮಾಡುವಂತೆ ಸೂಚನೆ ನೀಡಲು ವಿನಂತಿಸಿದ್ದಾರಂತೆ. ಮೋದಿಯವರ ವಿನಂತಿಯನ್ನು ಸಂಘ ತಿರಸ್ಕರಿಸಿದೆ ಎಂದು ಸುದ್ದಿಯಾಗಿದೆ. ಇದಕ್ಕೆ ಪ್ರತಿಯಾಗಿ ನಾವು ಸರ್ಕಾರದಲ್ಲಿ ಇರದಿದ್ದರೆ ಸಂಘಕ್ಕೆ ಕಷ್ಟ ಎಂಬ ಧಾಟಿಯಲ್ಲಿ ಮೋದಿ ಮಾತನಾಡಿದ್ದಾರೆ. (ಬಿಜೆಪಿ ಸರ್ಕಾರವಿರದಿದ್ದರೆ ಹಿಂದೂಗಳಿಗೆ ಕಷ್ಟ- ಅಂತಾರಲ್ಲ. ಅದೇ ರೀತಿ ಬಿಜೆಪಿ ಇಲ್ಲಾ ಅಂದರೆ ಸಂಘಕ್ಕೆ ಕಷ್ಟ ಎಂದು ಮೋದಿಯವರು ಸಂಘಕ್ಕೇ ಹೇಳಿದ್ದಾರಂತೆ) ಸರ್ಕಾರ ನಮ್ಮದಿಲ್ಲದಿದ್ದರೂ ನಾವು ಸಂಘವನ್ನು ಉಳಿಸಿ ಬೆಳೆಸಿದ್ದೇವೆ. ಅದರ ಬಗ್ಗೆ ತಾವು ತಲೆಬಿಸಿ ಮಾಡಬೇಡಿ. ಸ್ವಯಂ ಸೇವಕರಿಗೆ ಚುನಾವಣೆಯಲ್ಲಿ ಕೆಲಸ ಮಾಡುವ ಆದೇಶ ನೀಡಲಾಗದು. ಅವರವರ ವೈಯಕ್ತಿಕ ನಿರ್ಧಾರ , ಮಾಡುವವರಿಗೆ ಬೇಡ ಅನ್ನುವುದಿಲ್ಲ ಎಂಬ ಮರು ಉತ್ತರ ಸಂಘ ನೀಡಿದೆ.
ಈ ಸಭೆಯ ಒಂದೆರಡು ದಿನ ಮೊದಲು ಯೋಗಿ ಗಡ್ಕರಿ ಮತ್ತು ಸಂಘದ ನಾಯಕರ ಮಾತುಕತೆಯಾಗಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಅಂದರೆ ಸಂಘ ತನ್ನದೇ ನಿರ್ಧಾರಗಳನ್ನು ಮಾಡಿಯಾಗಿದೆ ಎಂಬ ಅರ್ಥವೂ ಹೌದು.
ಈ ಸುದ್ದಿಗೆ ಪೂರಕವಾಗಿ ಎಂಬಂತೆ ಸಂಘದ ಕಾರ್ಯಕರ್ತರು ಸಾಂಘೀಕವಾಗಿ ಚುನಾವಣೆ ಕೆಲಸ ಮಾಡಿಲ್ಲ. ಅಂದರೆ ಸಂಘದ ಆದೇಶ ತಲುಪಿಸಿ, ಪರಿವಾರದ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಿ, ಕೆಲಸ ಆದ ಮೇಲೆ ವರದಿ ಒಪ್ಪಿಸುವ ಸಂಘಟಿತ ಕೆಲಸ ಆಗಿಲ್ಲ. ವೈಯಕ್ತಿಕ ನೆಲೆಯಲ್ಲಿ ಕೆಲವರು ತೊಡಗಿಸಿಕೊಂಡದ್ದು ಮಾತ್ರ ಎಂಬುವುದು ನಿಜ. ಸಂಘದ ಸಂಘಟಿತ ಚುನಾವಣಾ ಕೆಲಸ ಆಗದಿದ್ದರೆ ಬಿಜೆಪಿಗೆ ಕೊಂಚ ನಷ್ಟವಂತೂ ಇದೆ.
ಮೋದಿ ಮತ್ತು ಅಮಿತ್ ಶಾ ಸಂಘದ ನಿಯಂತ್ರಣಕ್ಕೂ ಸಿಗದೇ ಬೆಳೆಯುತ್ತಿದ್ದಾರೆ. ಕೇವಲ ಒಂದೆರಡು ಉದ್ಯಮಿಗಳಿಗೆ ಮಾತ್ರ ಮಣೆ ಹಾಕಿ ಉಳಿದ ಉದ್ಯಮಿಗಳನ್ನು ಹತ್ತಿಕ್ಕಿದ್ದಾರೆ (ಹತ್ತಿಕ್ಕಲ್ಪಟ್ಟವರಲ್ಲಿ ಸಂಘದ ಪರದವರೂ ಇದ್ದಾರೆ). ಯೋಗಿ ಮತ್ತು ಗಡ್ಕರಿಯನ್ನು ದೂರವಿಡುವ ಪ್ರಯತ್ನ ಮಾಡಿದ್ದಾರೆ. ಅತೀಯಾದ ನಿಂದನೆ ದ್ವೇಷದ ರಾಜಕಾರಣದಿಂದಾಗಿ ಇದನ್ನೆಲ್ಲಾ ಸಂಘವೇ ಮಾಡಿಸುತ್ತಿದೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಸಂಘ ಕೆಸರು ಗದ್ದೆ ಆಟ ಆಯೋಜಿಸುತ್ತದೆ. ಆದರೆ ಯಾವತ್ತೂ ಆಡಿ ಕೆಸರು ಮೆತ್ತಿಸಿಕೊಳ್ಳುವುದಿಲ್ಲ. ಈಗ ಇವರ ಹುಚ್ಚಟಾದಿಂದ, ಕೆಸರು ತನಗೆ ರಾಚುತ್ತಿದೆ ಎಂದೇ ಅದು ಜಾಗೃತವಾಗಿ ದೂರ ನಿಲ್ಲುವ ಯೋಚನೆ ಮಾಡಿದಂತಿದೆ.
ಅನಗತ್ಯ ಕೆರಳಿಸುವ ಮಾತುಗಳು, ಎಲ್ಲರ ಜೊತೆ ದ್ವೇಷ ಇತ್ಯಾದಿ ಸಂಗತಿಗಳನ್ನು ಸಂಘ ಗಮನಿಸಿದೆ. ಎಲ್ಲವನ್ನೂ ಬಹಿರಂಗವಾಗಿ ತೋರಿಸುವುದನ್ನೂ ಅದು ಒಪ್ಪುವುದಿಲ್ಲ. ಆ ಮಟ್ಟಿಗೆ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವವನ್ನು ಮಾತ್ರ ಸಂಘ ಪೂರ್ಣವಾಗಿ ಸ್ವೀಕರಿಸಿತ್ತು. ಅದರ ದಾರಿ ಇದಲ್ಲ. ಮೋದಿ ಆಡಳಿತ ಸಾಧನೆಯಿಲ್ಲ. ಕೇವಲ ಗೌಜಿಯ ಜಾತ್ರೆಯಾಗಿದೆ.
ಸಂಘದ ಕಾರ್ಯಕ್ರಮದಲ್ಲಿ ಗೌಜಿ ಬಿಲ್ಕುಲ್ ಇರುವುದಿಲ್ಲ. ಅದರ ನಡಿಗೆಯ ರೀತಿಯೇ ಬೇರೆ. ಹಾಗಾಗಿ ಸಂಘ ಮೋದಿಯವರನ್ನು ಕೈ ಬಿಟ್ಟಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ
Dear Hegde sir,
I heartfully respect your honest speach with your real experience between old RSS team.
Recently, you have done excellent responsibility about KERAGODU flag 🚩 issues. Your great and heart words are made few people to understand what is real agenda with BJP gang patalam.
I thank you so much for that time you done the job🙏