ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ “ಸನಾತನ ಧರ್ಮ ನಿರ್ಮೂಲನೆ” ಹೇಳಿಕೆಯ ಬಗ್ಗೆ ಬಿಜೆಪಿ ನಾಯಕರಿಂದ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ದೇಗುಲದ ಸಿಬ್ಬಂದಿ ಅಂಗಿ ಕಳಚಿ ಎಂದದ್ದಕ್ಕೆ ದೇಗುಲದ ಪ್ರವೇಶ ನಿರಾಕರಣೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.
ಸಮಾಜ ಸುಧಾರಕ ನಾರಾಯಣ ಗುರುಗಳ 169ನೇ ಜನ್ಮದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಒಮ್ಮೆ, ನಾನು ಕೇರಳದ ದೇವಸ್ಥಾನಕ್ಕೆ ಹೋದಾಗ, ಅವರು ನನ್ನ ಅಂಗಿಯನ್ನು ತೆಗೆದು ಒಳಗೆ ಪ್ರವೇಶಿಸುವಂತೆ ಹೇಳಿದರು. ಆದರೆ ನಾನು ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದೆ ಮತ್ತು ನಾನು ಹೊರಗಿನಿಂದ ಪ್ರಾರ್ಥನೆ ಮಾಡುತ್ತೇನೆ ಎಂದು ಸಿಬ್ಬಂದಿಗೆ ಹೇಳಿದೆ. ಅಲ್ಲದೆ ಸಿಬ್ಬಂದಿ ಕೆಲವರನ್ನು ಬಿಟ್ಟು ನನ್ನ ಜೊತೆಯಿದ್ದ ಹಲವರಿಗೆ ಅಂಗಿಯನ್ನು ಕಳಚಿ ಎಂದರು. ಆದರೆ ಇದು ಅಮಾನವೀಯ ಪದ್ಧತಿ. ದೇವರ ಮುಂದೆ ಎಲ್ಲರೂ ಸಮಾನರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ನ್ಯಾಯ ಶಾಶ್ವತವಾಗಿ ಅರಳಲಿ: ಪತ್ರ ಮುಖೇನ ಬಿಜೆಪಿಗೆ ಉದಯನಿಧಿ ಸ್ಟಾಲಿನ್ ತಿರುಗೇಟು
ಹಲವಾರು ದಕ್ಷಿಣ ಭಾರತದ ದೇವಾಲಯಗಳಲ್ಲಿ, ದೇವಾಲಯವನ್ನು ಪ್ರವೇಶಿಸುವ ಮೊದಲು ಪುರುಷರು ತಮ್ಮ ಅಂಗಿಗಳನ್ನು ತೆಗೆಯುವುದು ಸಾಮಾನ್ಯ ಅಭ್ಯಾಸವಾಗಿದೆ. ಬದಲಿಗೆ ಭುಜದ ಮೇಲೆ ಸುತ್ತುವ ಶಾಲು ತರಹದ ‘ಅಂಗವಸ್ತ್ರ’ವನ್ನು ಧರಿಸುವಂತೆ ಹೇಳುತ್ತಾರೆ. ಹಲವು ದೇಗುಲಗಳಲ್ಲಿ ಊಟವನ್ನು ಕೂಡ ಬ್ರಾಹ್ಮಣೇತರ ಸಮುದಾಯಗಳಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ಅಮಾನುಷ ಪದ್ಧತಿಯ ವಿರುದ್ಧ ಹಲವಾರು ಚಳವಳಿಗಳು ನಡೆದರೂ ಸುಧಾರಣೆ ಮಾತ್ರ ಕಂಡಿಲ್ಲ.
ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳ ಕುರಿತು ನಡೆಯುತ್ತಿರುವ ವಿವಾದದ ನಡುವೆ, ತಮಿಳುನಾಡು ಸಂಸದ ಎ ರಾಜಾ ಗುರುವಾರ ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕ ಹೊಂದಿರುವ ರೋಗಗಳಿಗೆ ಹೋಲಿಸಬೇಕು. ಉದಯನಿಧಿಯವರು ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿರುವುದು ಸರಿಯಾಗಿದೆ ಎಂದು ತಿಳಿಸಿದ್ದಾರೆ.
ಉದಯನಿಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಇತರ ಸಚಿವರು ಪ್ರತಿಕ್ರಿಯಿಸಿದ ರೀತಿಯ ಕುರಿತು ಸಿಎಂ ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿಗೆ ಪತ್ರ ಬರೆದಿರುವ ಎಂ ಕೆ ಸ್ಟಾಲಿನ್, ನನ್ನ ಮಗ ಎಲ್ಲಿಯೂ ‘ಜನಾಂಗೀಯ ಹತ್ಯೆ’ ಎಂಬ ಪದವನ್ನು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಬಳಸಿಲ್ಲ ಎಂದು ಸಿಎಂ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ದಬ್ಬಾಳಿಕೆಯ ತತ್ವಗಳ ವಿರುದ್ಧ ಉದಯನಿಧಿ ಅವರ ನಿಲುವನ್ನು ಸಹಿಸಲಾಗದ ಬಿಜೆಪಿ ಪರ ಶಕ್ತಿಗಳು ಸುಳ್ಳು ಸುದ್ದಿ ಹಬ್ಬಿಸಿ, ಸನಾತನ ಚಿಂತನೆಯುಳ್ಳ ಜನರ ಹತ್ಯೆಗೆ ಉದಯನಿಧಿ ಕರೆ ನೀಡಿದ್ದಾರೆ ಎಂದು ಸ್ಟಾಲಿನ್ ಪಿಎಂ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ಈ ಸುಳ್ಳನ್ನು ಉತ್ತರದ ರಾಜ್ಯಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದೆ ಎಂದು ದೂರಿದ್ದಾರೆ.