ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, “ಕಾಶ್ಮೀರ ಭಾರತದ ಕಿರೀಟ, ನಿಮ್ಮ ಮನ ಗೆಲ್ಲಲು ಬಂದಿದ್ದೇನೆ” ಎಂದು ತಿಳಿಸಿದರು.
ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಭಕ್ಷಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕೃಷಿ, ಪ್ರವಾಸೋದ್ಯಮ ಸೇರಿದಂತೆ ಹಲವು ರಂಗಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದರು.
“ವಿಶೇಷಾಧಿಕಾರ ರದ್ದತಿ ಬಳಿಕ ಕಾಶ್ಮೀರ ಅಭಿವೃದ್ದಿಯಲ್ಲಿ ಹೊಸ ಎತ್ತರಗಳನ್ನು ತಲುಪಿದೆ. ಜಮ್ಮು ಕಾಶ್ಮೀರ ಭಾರತದ ಕಿರೀಟ ಇದ್ದಂತೆ. ದಶಕಗಳಿಂದ ಕಾಶ್ಮೀರದ ಬಗ್ಗೆ ಇದ್ದ ಪೂರ್ವಾಗ್ರಹ ಅಂತ್ಯವಾಗಿದೆ. ಜಮ್ಮು ಕಾಶ್ಮೀರದ ಅಭಿವೃದ್ದಿ ಭಾರತದ ಮೊದಲ ಆದ್ಯತೆ” ಎಂದು ತಿಳಿಸಿದರು.
#WATCH | Srinagar, J&K: PM Modi says “I have always treated the people of J&K as my family. The people of my family stay in my heart, and ‘Main hoon Modi ka Pariwar’ is in the hearts of Kashmiris. I promise that the development works in J&K will not stop at any cost. In the next… pic.twitter.com/I5nRKsB3Gb
— ANI (@ANI) March 7, 2024
“ಕಮಲದ ಚಿಹ್ನೆಯೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷವಾದ ನಂಟು ಇದೆ ಎಂದು ಹೇಳಿದರು. ಬಿಜೆಪಿ ಪಕ್ಷದ ಚಿಹ್ನೆಯಾದ ಕಮಲವು ಕಣಿವೆ ರಾಜ್ಯದ ಎಲ್ಲ ಕೆರೆಗಳಲ್ಲೂ ಕಾಣ ಸಿಗುತ್ತದೆ. ಕಾಶ್ಮೀರದ ಕ್ರಿಕೆಟ್ ಸಂಸ್ಥೆಯ ಲೋಗೋದಲ್ಲೂ ಕಮಲ ಇದೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಆರ್ಟಿಕಲ್ 370 ರದ್ದತಿ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲ ಇಡೀ ದೇಶದ ಜನತೆಗೆ ದಾರಿ ತಪ್ಪಿಸಿತ್ತು ಎಂದು ಆರೋಪಿಸಿದ ಪ್ರಧಾನಿ ಮೋದಿ, ಇಂದು ಕಾಶ್ಮೀರ ಅಭಿವೃದ್ದಿ ಕಾಣುತ್ತಿದ್ದು, ಕಾಶ್ಮೀರದ ಯಶಸ್ಸಿನ ಗಾಥೆಯನ್ನು ಇಡೀ ವಿಶ್ವವೇ ನೋಡುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
‘ಮದುವೆಯಾಗಲು ಕಾಶ್ಮೀರಕ್ಕೆ ಬನ್ನಿ’ ಎಂದ ಪ್ರಧಾನಿ
ಸಿನಿಮಾ ಶೂಟಿಂಗ್ ಸೇರಿದಂತೆ ಹಲವು ಪ್ರವಾಸೋದ್ಯಮಕ್ಕೆ ಉತ್ತಮವಾದ ಸ್ಥಳ ಜಮ್ಮು ಮತ್ತು ಕಾಶ್ಮೀರ ಎಂದು ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ, ‘ವೆಡ್ ಇನ್ ಇಂಡಿಯಾ’ ಎಂಬ ವಿಚಾರವನ್ನು ಪ್ರಸ್ತಾಪಿಸಿದರು.
#WATCH | Srinagar, J&K: Prime Minister Narendra Modi says “Now my next mission is ‘Wed in India’. People should come to J&K and host their weddings…The world has seen how G20 was organised in J&K. There was a time when people used to say, who will go to J&K for tourism? Today,… pic.twitter.com/BKeVtUEWG2
— ANI (@ANI) March 7, 2024
“ದೇಶದ ನಿವಾಸಿಗಳಲ್ಲಿ ನನ್ನದೊಂದು ವಿನಂತಿ ಇದೆ. ನೀವು ಮದುವೆಯ ಸಂಭ್ರಮವನ್ನು ಆಚರಿಸಲು ಬೇರೆ ಬೇರೆ ದೇಶಗಳಿಗೆ ಹೋಗುವ ಬದಲು, ಕುಟುಂಬದೊಂದಿಗೆ ವಿಶಾಲವಾದ ಕಾಶ್ಮೀರಕ್ಕೆ ಬಂದು ಮದುವೆಯನ್ನು ಆಚರಿಸಿಕೊಳ್ಳಿ. ಇದರಿಂದಾಗಿ ಸ್ಥಳೀಯ ಜನರಿಗೂ ಉದ್ಯೋಗ ಸಿಕ್ಕಂತಾಗುತ್ತದೆ. ಹಾಗಾಗಿ, ಡೆಸ್ಟಿನೇಷನ್ ವೆಡ್ಡಿಂಗ್ಗೆ ಕಾಶ್ಮೀರವನ್ನು ಆಯ್ಕೆ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
“ಭರವಸೆಗಳನ್ನು ಈಡೇರಿಸಲು ಮೋದಿ ಗ್ಯಾರಂಟಿ ನೀಡಲಾಗಿದೆ. ಮೋದಿಯ ಗ್ಯಾರಂಟಿ, ಪೂರ್ತಿಯಾಗುವ ಗ್ಯಾರಂಟಿ. ದಶಕಗಳಿಂದ ಕಾಶ್ಮೀರದ ಬಗ್ಗೆ ಇದ್ದ ಪೂರ್ವಗ್ರಹ ಅಂತ್ಯವಾಗಿದೆ. ಜಮ್ಮು ಕಾಶ್ಮೀರದ ಅಭಿವೃದ್ಧಿ, ಪ್ರವಾಸೋದ್ಯಮ ಈಗ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ” ಎಂದು ಪ್ರಧಾನಮಂತ್ರಿ ತಿಳಿಸಿದರು.
