ಹಿರಿಯ ಪತ್ರಕರ್ತ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ತಳ್ಳಿ ಹಾಕಿ, ಸುಳ್ಳು ಆರೋಪ ಮಾಡಿರುವ ವ್ಯಕ್ತಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ಆದೇಶ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ ನಾಮನಿರ್ದೇಶನ ಪಟ್ಟಿಯಲ್ಲಿ ದಿನೇಶ್ ಅಮಿನ್ ಮಟ್ಟು ಹೆಸರಿದ್ದ ಹಿನ್ನೆಲೆಯಲ್ಲಿ ಜಿ ಎಂ ಗಾಡ್ಕರ್ ಎಂಬವರು ರಾಜ್ಯಪಾಲರಿಗೆ ಪತ್ರ ಬರೆದು ಮಟ್ಟು ವಿರುದ್ದ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಯಾಗಿ ರಾಜ್ಯಪಾಲರಿಗೆ ಪತ್ರ ಬರೆದಿರುವ ದಿನೇಶ್ ಅವರು, “ಗಾಡ್ಕರ್ ಎಂಬ ಅಪರಿಚಿತ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ನನ್ನ ವಿವರಣೆಗಳನ್ನು ಗಂಭೀರವಾಗಿ ಪರಿಗಣಿಸಿ ತಾವು ಆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಬೇಕು” ಎಂದು ಕೋರಿದ್ದಾರೆ.
ಪತ್ರದಲ್ಲಿ ಏನಿದೆ?
“ನಾನು ತುಮಕೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ನಿವೇಶನ ಪಡೆದಿದ್ದೇನೆ ಎನ್ನುವ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು ಮತ್ತು ನಿರಾಧಾರವಾದುದು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾನು ಯಾವುದೇ ನಿವೇಶನ ಪಡೆದಿಲ್ಲ. ಕೇಂದ್ರ ಸರ್ಕಾರದ ಯೋಜನೆಯಾದ ಐಡಿಎಸ್ ಎಂಟಿ ಯೋಜನೆಯಡಿಯಲ್ಲಿ ನಾನು ನಿವೇಶನ ಪಡೆದಿದ್ದು ಅದಕ್ಕೆ ಸಂಬಂಧಿಸಿದ ಎಲ್ಲ ಷರತ್ತುಗಳನ್ನು ನಾನು ಪಾಲಿಸಿದ್ದೇನೆ. ಅದರಲ್ಲಿ ಸ್ಥಳೀಯವಾಗಿ ಹದಿನೈದು ವರ್ಷಗಳ ಕಾಲ ನಿವಾಸಿಯಾಗಿ ಇರಬೇಕೆಂಬ ಯಾವ ಷರತ್ತು ಕೂಡಾ ಇಲ್ಲ” ಎಂದು ಸಂಬಂಧಿಸಿದ ಷರತ್ತುಗಳುಳ್ಳ ನಿವೇಶನ ಹಂಚಿಕೆ ಪತ್ರವನ್ನು ಲಗತ್ತಿಸಿ ಪತ್ರ ಬರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಧಾನ ಪರಿಷತ್ ನಾಮನಿರ್ದೇಶನ: ನಾಲ್ಕು ಸ್ಥಾನಗಳಿಗೆ ಹೆಸರು ಫೈನಲ್, ಅಧಿಕೃತ ಘೋಷಣೆ ಮಾತ್ರ ಬಾಕಿ
“ಪತ್ರಕರ್ತನಾಗಿರುವ ನನ್ನ ವಿರುದ್ಧ ನನಗಾಗದ ವ್ಯಕ್ತಿಗಳು ಪೊಲೀಸ್ ಠಾಣೆಗಳಲ್ಲಿ ಹಲವಾರು ಬಾರಿ ದೂರು ದಾಖಲಿಸಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ ಅಂತಹ ದೂರುಗಳೆಲ್ಲವೂ ದುರುದ್ದೇಶದಿಂದ ಕೂಡಿದ ಮತ್ತು ಆಧಾರರಹಿತವಾಗಿದ್ದ ಕಾರಣ ಯಾವುದೇ ಪ್ರಕರಣದಲ್ಲಿ ನನ್ನ ಮೇಲಿನ ಆರೋಪಗಳು ಸಾಬೀತಾಗಿಲ್ಲ. ದೂರುದಾರರು ಉಲ್ಲೇಖಿಸಿದ ಫೇಕ್ ನ್ಯೂಸ್ ಪ್ರಕರಣದಲ್ಲಿಯೂ ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಸಾಕ್ಷಾಧಾರಗಳಿಲ್ಲದ ಕಾರಣ ಎರಡೂ ವರ್ಷಗಳಾದರೂ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿಲ್ಲ. ಹಾಗಾಗಿ ನನ್ನ ಮೇಲೆ ಯಾವುದೇ ದೋಷಾರೋಪಣೆ ಇರುವುದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

“ದೂರುದಾರರು ಉಲ್ಲೇಖಿಸಿರುವ ‘ದಿ ಪಾಲಿಸಿ ಫ್ರಂಟ್’ ಸಂಸ್ಥೆಯಲ್ಲಿ ನಾನು ಮಾಲೀಕನೂ ಅಲ್ಲ, ಪಾಲುದಾರನೂ ಅಲ್ಲ. ನನಗೆ ಯಾವುದೇ ಸಂಸ್ಥೆಯನ್ನು ಬೇನಾಮಿಯಾಗಿ ನಡೆಸುವ ಅವಶ್ಯಕತೆಯೂ ಇಲ್ಲ. ಸುಳ್ಳು ಮಾಹಿತಿಗಳನ್ನು ಆಧರಿಸಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ದೂರುದಾರರು ನನ್ನ ಚಾರಿತ್ರ್ಯ ಹನನದ ಏಕೈಕ ಆದೇಶದಿಂದ ಆರೋಪ ಮಾಡಿದ್ದಾರೆ” ಎಂದು ವಿವರಿಸಿದ್ದಾರೆ.
“ಕಳೆದ 40 ವರ್ಷಗಳಿಂದ ನಾನು ಪತ್ರಿಕಾ ವೃತ್ತಿಯಲ್ಲಿದ್ದು ಮತ್ತು ಆ ಕಾರಣದಿಂದಾಗಿ ಸಾರ್ವಜನಿಕ ಜೀವನದಲ್ಲಿರುವ ನಾನು ಸಂವಿಧಾನ ಮತ್ತು ನೆಲದ ಕಾನೂನಿಗೆ ಗೌರವಕೊಟ್ಟುಕೊಂಡು ಬದುಕಿದವನು. ವೈಯಕ್ತಿಕ ದ್ವೇಷಾಸೂಯೆಯಿಂದ ಕೆಲವರು ಆರೋಪಗಳನ್ನು ಮಾಡಿದ್ದರೂ ಅವುಗಳು ಸಾಬೀತಾಗದೆ ಬಿದ್ದುಹೋಗಿರುವುದು ನಾನು ಪಾಲಿಸಿಕೊಂಡು ಬಂದಿರುವ ಪ್ರಾಮಾಣಿಕ ಬದುಕು, ಸತ್ಯ ಹಾಗೂ ನ್ಯಾಯ ನಿಷ್ಠೆಗೆ ಸಾಕ್ಷಿಯಾಗಿದೆ. ನನ್ನ ಚಾರಿತ್ರ್ಯಹನನ ಮಾಡುವ ದುರುದ್ದೇಶದಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲೆ ಮಾಡಲಿದ್ದೇನೆ ಎನ್ನುವುದನ್ನೂ ತಮ್ಮ ಗಮನಕ್ಕೆ ತರಬಯಸುತ್ತೇನೆ” ಎಂದು ರಾಜ್ಯಪಾಲರಿಗೆ ತಿಳಿಸಿದ್ದಾರೆ.