ರಾಜ್ಯ ಸರ್ಕಾರದ ಆದೇಶಕ್ಕೆ ಭಯಬಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮಾ ಕೋರ್ಸ್‌ಗಳಿಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣ ಹಿಂಪಡೆದಿವೆ. ಇದರಿಂದ ಕೃಷಿಕರ ಮಕ್ಕಳ ಭವಿಷ್ಯದ ಮೇಲೆ ಸರ್ಕಾರವೇ ಬರೆ ಎಳೆದಂತಾಗಿದೆ.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ದಶಕದ ಹಿಂದೆ ರಾಜ್ಯ ಸರ್ಕಾರ ಆರಂಭಿಸಿದ್ದ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಸ್ಥಗಿತಗೊಳಿಸಿದ ಪರಿಣಾಮ ಕೃಷಿಕರ ಮಕ್ಕಳ ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ಕಾಂಗ್ರೆಸ್ ಸರ್ಕಾರ ಕೂಡ ಈ ಬಗ್ಗೆ ಪರಿಶೀಲಿಸದೆ ಬಿಜೆಪಿ ಆದೇಶವನ್ನೇ ಈಗ ಮುಂದುವರಿಸಿದೆ.
ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ 2023-24ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿತ್ತು. ಆದರೀಗ ರಾಜ್ಯ ಸರ್ಕಾರದ ಆದೇಶಕ್ಕೆ ತಲೆಬಾಗಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ವಿವಿಗಳು ಹಿಂಪಡೆದಿವೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ಬಗ್ಗೆ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜೋನ್ ಪ್ರಕಾಶ್ ರೋಡ್ರಿಗಸ್ ಎಂಬುವರು ತಕರಾರು ತೆಗೆದು ಎರಡೂ ವಿಶ್ವವಿದ್ಯಾಲಯಗಳಿಗೂ ಜೂನ್ 19 ರಂದು ಪತ್ರ ಬರೆದಿದ್ದಾರೆ.
ಸರ್ಕಾರದ ಪತ್ರ ಈ ದಿನ.ಕಾಮ್‌ಗೆ ಲಭ್ಯವಾಗಿದ್ದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಜೂನ್ 18, 2022ರಂದು 6ನೇ ಪರಿಣತರ ಸಭೆಯ ನಡವಳಿಯಂತೆ ಹಾಗೂ ಕೃಷಿ ಸಚಿವ (ಆಗಿನ ಕೃಷಿ ಸಚಿವರು ಬಿ ಸಿ ಪಾಟೀಲ) ಅಧ್ಯಕ್ಷತೆಯಲ್ಲಿ ನಡೆದ 32ನೇ ಸಮನ್ವಯ ಸಮಿತಿ ಸಭೆಯ ನಡವಳಿಯ ನಿರ್ಣಯಗಳಿಗೆ ತಮ್ಮ ವಿಶ್ವವಿದ್ಯಾಲಯ ವಿರುದ್ಧವಾಗಿ ನಡೆದುಕೊಂಡು, 2023-24ನೇ ಸಾಲಿಗೆ ಎರಡು ವರ್ಷದ ಡಿಪ್ಲೊಮಾ (ಕೃಷಿ), ಡಿಪ್ಲೊಮಾ (ಅರಣ್ಯ) ಹಾಗೂ ಡಿಪ್ಲೊಮಾ (ರೇಷ್ಮೆ) ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರದ ನಿರ್ಣಯಕ್ಕೆ ವಿರುದ್ಧವಾಗಿ ಅರ್ಜಿ ಆಹ್ವಾನಿಸಿರುವ ಬಗ್ಗೆ ಎರಡು ದಿನದಲ್ಲಿ ಸರ್ಕಾರಕ್ಕೆ ವಿವರಣೆ ಸಲ್ಲಿಸುವಂತೆ ಪತ್ರದಲ್ಲಿ ಕೋರಲಾಗಿದೆ.

ರಾಜ್ಯ ಸರ್ಕಾರದ ಪತ್ರಕ್ಕೆ ಭಯಬಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮಾ ಕೋರ್ಸ್‌ಗಳಿಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಕೂಡಲೇ ಹಿಂಪಡೆದಿವೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜೂನ್ 22ರಂದು ಅಧಿಸೂಚನೆ ಹೊರಡಿಸಿ, “ತನ್ನ ಅಧೀನದಲ್ಲಿ ಕೃಷಿ ಮಹಾವಿದ್ಯಾಲಯ ಮಂಡ್ಯದಲ್ಲಿ ನಡೆಸುತ್ತಿರುವ ಎರಡು ವರ್ಷದ ಡಿಪ್ಲೊಮಾ (ಕೃಷಿ) ಮತ್ತು ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ನಡೆಸುತ್ತಿರುವ ಎರಡು ವರ್ಷಗಳ ಡಿಪ್ಲೊಮಾ (ರೇಷ್ಮೆ ಕೃಷಿ) ಕೋರ್ಸ್‌ಗಳ ಪ್ರವೇಶಕ್ಕೆ ಮೇ 29 ರಂದು ಹೊರಡಿಸಲಾದ ಅಧಿಸೂಚನೆಯನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗುತ್ತಿದೆ” ಎಂದು ತಿಳಿಸಿದೆ.
ಇನ್ನು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೂಡ ಈ ಬಗ್ಗೆ ಅಧಿಸೂಚನೆ ಹೊರಡಿಸಿ, “ಮೇ 5ರಂದು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ 2023-24ನೇ ಸಾಲಿಗೆ ಎರಡು ವರ್ಷದ ಡಿಪ್ಲೊಮಾ (ಕೃಷಿ) ಮತ್ತು ಡಿಪ್ಲೊಮಾ (ಅರಣ್ಯ) ಕೋರ್ಸುಗಳಿಗೆ ಹೊರಡಿಸಲಾದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ” ಎಂದು ಹೇಳಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ವರವಾಗಿದ್ದ ಕೋರ್ಸ್!
ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಡಿಯಲ್ಲಿ ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಡಿಪ್ಲೊಮಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ವಿಚಾರಿಸಲು ಇಲ್ಲಿಯ ಕೃಷಿ ಡಿಪ್ಲೊಮಾ ವಿದ್ಯಾಲಯದ ಸಂಯೋಜಕ ಆರ್ ಎಲ್ ಜಾಧವ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, “ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಬಡ ಮಕ್ಕಳಿಗೆ ಬಹಳ ಅನುಕೂಲಕರವಾಗಿದ್ದ ಡಿಪ್ಲೊಮಾ ಕೋರ್ಸ್‌ಗಳನ್ನು ರಾಜ್ಯ ಸರ್ಕಾರದ ಆದೇಶದ ಮೇಲೆ ಬೆಂಗಳೂರು, ರಾಯಚೂರು, ಶಿವಮೊಗ್ಗ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ಗಳನ್ನು ಈಗ ಸ್ಥಗಿತಗೊಳಿಸಲಾಗಿದೆ” ಎಂದು ತಿಳಿಸಿದರು.
“ಕೃಷಿ ಡಿಪ್ಲೊಮಾ ಪೂರೈಸಿದವರಿಗೆ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಕ್ಷೇತ್ರ ಸಹಾಯಕ, ಖಾಸಗಿ ರಸಗೊಬ್ಬರ, ಬೀಜ, ಔಷಧ ಕಂಪನಿಗಳಲ್ಲಿ ಉದ್ಯೋಗಗಳು ಬೇಗ ಲಭಿಸುತ್ತಿದ್ದವು. ಬೀಜ ವಿತರಣಾ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೂ ಅವಕಾಶಗಳಿವೆ. ರಸಗೊಬ್ಬರ, ಔಷಧ ಅಂಗಡಿ ಪರವಾನಗಿ ದೊರಕಲಿದೆ. ಅನೇಕ ಕೃಷಿ ಸಂಬಂಧಿತ ಖಾಸಗಿ ಕಂಪನಿಗಳು ಕೃಷಿ ಡಿಪ್ಲೊಮಾ ಪೂರೈಸಿದವರಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದವು” ಎಂದು ಜಾದವ್ ವಿವರಿಸಿದರು.
“ಎಸ್ಸೆಸ್ಸೆಲ್ಸಿ ಪಾಸಾಗಿ ಕೃಷಿ ಡಿಪ್ಲೊಮಾ ಕೋರ್ಸ್ ಮುಗಿಸಿದವರಿಗೆ ಬಿ.ಎಸ್ಸಿ ಅಗ್ರಿ ಪದವಿ ಪ್ರವೇಶದಲ್ಲೂ ಶೇ.5 ರಷ್ಟು ಮೀಸಲಾತಿ ಇತ್ತು. ಕನ್ನಡ ಮಾಧ್ಯಮದಲ್ಲಿ ವಿಷಯಗಳು ಇರುವುದರಿಂದ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಈ ಡಿಪ್ಲೊಮಾ ಕೋರ್ಸ್‌ಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದರು” ಎಂದು ಆರ್ ಎಲ್ ಜಾಧವ್ ಹೇಳಿದರು.
ಹೆಸರು ಹೇಳಲು ಇಚ್ಛಿಸದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, “ಬಿಜೆಪಿ ಸರ್ಕಾರದ ಅವಧಿಯಲ್ಲೇ ಡಿಪ್ಲೊಮಾ ಕೋರ್ಸ್ ಸ್ಥಗಿತಗೊಳಿಸುವಂತೆ ಆದೇಶ ಬಂದಿದೆ. ಈಗ ಈ ಕಾಂಗ್ರೆಸ್ ಸರ್ಕಾರ ಕೂಡ ಈ ನೀತಿಯನ್ನು ಮುಂದುವರಿಸಿದೆ. ಸರ್ಕಾರ ಹೇಗೆ ಹೇಳುತ್ತದೆಯೋ ಹಾಗೆ ನಾವು ನಡೆಯಬೇಕು. ನಮ್ಮ ವಿಶ್ವವಿದ್ಯಾಲಯದಿಂದಲೂ ಪ್ರವೇಶ ಕೋರಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆದಿದ್ದೇವೆ” ಎಂದರು.
ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಈ ಬಗ್ಗೆ ಪ್ರತಿಕ್ರಿಯಿಸಿ, “ಬಿಜೆಪಿ ಸರ್ಕಾರ ಯಾವಾಗಲೂ ಜನಪರವಾಗಿ ಯೋಚಿಸಲಿಲ್ಲ. ರೈತ ಮಕ್ಕಳ ಜೀವನಕ್ಕೆ ಆಧಾರವಾಗಿದ್ದ ಈ ಡಿಪ್ಲೊಮಾ ಕೋರ್ಸ್‌ಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿ ಹೋಗಿದೆ. ಕಾಂಗ್ರೆಸ್ ಸರ್ಕಾರ ಕೂಡ ಬಿಜೆಪಿ ಆದೇಶವನ್ನೇ ಪಾಲಿಸುತ್ತಿದೆ. ಕೂಡಲೇ ಕೃಷಿ ಸಚಿವರು ಈ ಬಗ್ಗೆ ಪರಿಶೀಲಿಸಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಡಿಪ್ಲೊಮಾ ಕೋರ್ಸ್‌ಗಳನ್ನು ಮುಂದುವರಿಸಬೇಕು” ಎಂದು ಆಗ್ರಹಿಸಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.
It is injustice for the rural and former families by withdrawing two years diploma courses in agriculture. At any cost this course should be continued which will help the development of agriculture.