ರಾಜ್ಯ ಕಾಂಗ್ರೆಸ್ ಸರಕಾರದ ಬಗ್ಗೆ ಚರ್ಚೆ ಮಾಡುವುದು, ಕೆಸರಿನ ಮೇಲೆ ಕಲ್ಲು ಹಾಕುವುದು, ಎರಡೂ ಒಂದೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಚನ್ನಪಟ್ಟಣದ ಆಕ್ಕೂರು ಗ್ರಾಮದಲ್ಲಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟನೆ ನೆರವೇರಿಸಿದ ನಂತರ ಅವರು ಮಾಧ್ಯಮಗಳು ‘ನಾಳೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ, ಅದಕ್ಕೆ ನೀವೇನು ಹೇಳುತ್ತೀರಿ’ ಎಂದಾಗ “ಈ ಸರ್ಕಾರದ ಬಗ್ಗೆ ಹೇಳಲಿಕ್ಕೆ ಏನೂ ಇಲ್ಲ. ಎಲ್ಲಿ ನೋಡಿದರೂ ಇವರು ಮಾಡಿರುವ ಕೆಲಸಗಳ ಸಾಕ್ಷಿ ಗುಡ್ಡೆಗಳೇ ಕಾಣುತ್ತಿವೆ. ಚನ್ನಪಟ್ಟಣ ಉಪ ಚುನಾವಣೆ ಮುಗಿದು ನಾಲ್ಕು ತಿಂಗಳಾಯಿತು. ಅಕ್ಕೂರು ಕೆರೆಗೆ ನೀರು ತುಂಬಿಸಿದ್ದಾರಾ” ಎಂದು ಪ್ರಶ್ನಿಸಿದರು.
“ಈ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುವುದು ಯಾರಿಗೂ ಬೇಕಿಲ್ಲ. ಜನರಿಗೂ ಅದು ಬೇಕಿಲ್ಲ. ಬಸ್ ಪ್ರಯಾಣ ದರ ಏರಿಕೆ ಮಾಡಲಾಯಿತು. ಮನಸೋ ಇಚ್ಛೆ ಎಲ್ಲಾ ಕಡೆ ತೆರಿಗೆ, ದರ ಏರಿಕೆ ಮಾಡುತ್ತಾ ಹೋದರು. ಜನರು ಯಾರಾದರೂ ತಲೆ ಕೆಡಿಸಿಕೊಂಡರಾ? ಶೇ.40ರಿಂದ 50ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದರು. ಯಾರಾದರೂ ತಲೆ ಕೆಡಿಸಿಕೊಂಡರೆ? ಈಗ ವಿದ್ಯುತ್ ಸ್ಮಾರ್ಟ್ ಮೀಟರ್ ಹಾಕಿ ಅದರ ಬೆಲೆ ಶೇ.400ರಿಂದ 800ರಷ್ಟು ಏರಿಕೆ ಮಾಡುತ್ತಾರಂತೆ. ಪತ್ರಿಕೆಯಲ್ಲಿ ಸುದ್ದಿ ಬಂದಿದೆ. ಅದರ ಬಗ್ಗೆ ಯಾರಾದರೂ ಮಾತನಾಡುತ್ತಿದ್ದಾರೆಯೇ? ಇದರ ಯಾವುದರ ಬಗ್ಗೆಯೂ ಜನ ತಲೆಕೆಡಿಸಿಕೊಳ್ಳುತ್ತಿದ್ದಾರೆಯೇ? ಇಲ್ಲ.. ಅವರಿಗೆ ₹2000ವೇ ದೊಡ್ಡದು. ಈ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡಲು ಜನರಿಗೆ ಬೇಕಿಲ್ಲದೆ ಇರುವಾಗ ಪ್ರತಿಪಕ್ಷಗಳು ಏನು ಮಾಡಲು ಸಾಧ್ಯ?” ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
“ಈ ಸರ್ಕಾರದ ಬಗ್ಗೆ ಚರ್ಚೆ ಮಾಡಲಿಕ್ಕೆ ಏನೂ ಇಲ್ಲ. ಈ ಸರ್ಕಾರದಿಂದ ಜನರಿಗೆ ಏನು ನಿರೀಕ್ಷೆ ಇಲ್ಲ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಜನರ ಪರಿಸ್ಥಿತಿ ಏನಾಗಿದೆ? ರೈತರ ಸ್ಥಿತಿ ಏನಾಗಿದೆ ಎನ್ನುವುದು ಗೊತ್ತಿದೆ. ಚನ್ನಪಟ್ಟಣ, ರಾಮನಗರಕ್ಕೆ ನಾನು ಏನು ಒಳ್ಳೆಯದು ಮಾಡಿದ್ದೇನೆ ಎನ್ನುವುದು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ. ಯಾರೋ ಬರೋಬ್ಬರನ್ನು ತೃಪ್ತಿ ಮಾಡಿಲ್ಲ. ನಾನೇನು ಎನ್ನುವುದು ಜನರಿಗೆ ಗೊತ್ತಿದೆ. ಯಾರಿಗೋ ಉತ್ತರ ಕೊಟ್ಟುಕೊಂಡು ನಾನು ಕೂರಲು ಸಾಧ್ಯವಿಲ್ಲ” ಎಂದರು.
ಸರ್ಕಾರದ ಗುತ್ತಿಗೆಯಲ್ಲಿ ರಾಜ್ಯ ಕಾಂಗ್ರೆಸ್ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಯಾವ ಜಾತಿಗೆ ಎಷ್ಟು ಮೀಸಲಾತಿ ಕೊಡಬೇಕು ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಕೇವಲ ವೋಟಿಗಾಗಿ ಎಲ್ಲಾ ನಡೆಯುತ್ತಿದೆ. ರಾಜ್ಯದ ಜನರಿಗೆ ಅಭಿವೃದ್ಧಿ ಬೇಕು. ಯಾರಿಗೆ ಗುತ್ತಿಗೆ ಕೊಟ್ಟರೆ ಏನು ಉಪಯೋಗ? ಎಲ್ಲಿ ಗುತ್ತಿಗೆ ಕೊಟ್ಟರೂ ಅಲ್ಲಿಯೂ ಪರ್ಸಂಟೇಜ್ ವ್ಯವಹಾರ ಇದ್ದೇ ಇರುತ್ತದೆ” ಎಂದು ವ್ಯಂಗ್ಯವಾಡಿದರು.
“ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷನಿಗೆ ನಾನು ಕೇಳಲು ಬಯಸುತ್ತೇನೆ. ನಾನು 2006 ಮತ್ತು 2018ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ರಾಜ್ಯದ ಗುತ್ತಿಗೆದಾರರಿಗೆ ದುಡ್ಡು ಬಿಡುಗಡೆಆಯಾಡುತ್ತಿದ್ದೆ. ಅವತ್ತು ಯಾವ ಕಮೀಶನ್ ನಡೆಯುತ್ತಿತ್ತು? ಗುತ್ತಿಗೆದಾರರು ಹೇಳಬೇಕು. ಯಾವ ಗುತ್ತಿಗೆದಾರ ಬಂದು ನಮಗೆ ಪರ್ಸಂಟೇಜ್ ಕೊಟ್ಟಿದ್ದ? ಆಗ ಇಂಥದ್ದು ಚರ್ಚೆಯಲ್ಲಿಯೇ ಇರಲಿಲ್ಲ. ಈಗ ಇವೆಲ್ಲಾ ಚರ್ಚೆ ಆಗುತ್ತಿದೆ” ಎಂದು ಹೇಳಿದರು.

ಪಾಪ ಮಾಜಿ ಜ್ಯಾತ್ಯಾತೀತ ಕುಮಾರಣ್ಣಗೆ ಗೋಮಾಳ ಜಮೀನು ನಿದ್ದೆ ಕೆಡಿಸಿರಬಹುದು