- ಬರಪೀಡಿತ ಹತ್ತಿ ಬೆಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು
- ‘ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕ್ರಮ’
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಸೋಮವಾರ ರಾಯಚೂರು ತಾಲ್ಲೂಕಿನ ತುಂಟಾಪುರ ಗ್ರಾಮದ ಬರಪೀಡಿತ ಹತ್ತಿ ಬೆಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ನರಸಿಂಹಲು ಅವರ ಜಮೀನಿಗೆ ಭೇಟಿ ನೀಡಿದ ಸಚಿವರು ರೈತರ ಅಹವಾಲು ಆಲಿಸಿದರು. ಸರ್ಕಾರದ ಪರಿಹಾರ ನಿರೀಕ್ಷೆ ಮಾಡುವ ಜೊತೆಗೆ ರೈತರು ಪ್ರತಿವರ್ಷವೂ ಬೆಳೆ ವಿಮೆ ಮಾಡಿಸುವುದು ಅಗತ್ಯ ಎಂದು ಸಚಿವರು ವಿವರಿಸಿದರು.
ಇದೇ ವೇಳೆ ರೈತರು ಉಳಿದ ಬೆಳೆಗಳ ಬಿತ್ತನೆ ಬೀಜಗಳಿಗೆ ನೀಡುವ ರೀಯಾಯಿತಿಯನ್ನೂ ಬಿಟಿ ಹತ್ತಿ ಬೀಜಕ್ಕೂ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
“ಫ್ರೋಟ್ ಆಧಾರಿತ ಅಧಿಕೃತ ದತ್ತಾಂಶ ಆಧಾರದ ಮೇಲೆ ಭಾರತೀಯ ಹತ್ತಿ ಕಾರ್ಪೊರೇಷನ್ ವತಿಯಿಂದ ರೈತರು ಬೆಳೆದ ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ರಚಿಸಿದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು” ಎಂದು ಸಚಿವರು ರೈತರಿಗೆ ತಿಳಿಸಿದರು.
ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ
ರಾಜ್ಯದ 216 ತಾಲ್ಲೂಕುಗಳಲ್ಲಿ ಬರವಿದ್ದರೂ ಇನ್ನೂ ಕೇಂದ್ರದ ನೆರವು ಸಿಕ್ಕಿಲ್ಲ. ಆದರೆ ರಾಜ್ಯ ಸರ್ಕಾರ ರೈತರ ಹಿತ ಕಾಯುವುದನ್ನು ಮರೆಯಲ್ಲ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಬರ ವೀಕ್ಷಣೆ ಬಳಿಕ ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ನಂತರ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು.
“ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ತೆರಳಿದೆ, ಆದ್ರೆ ಈವರಗೆ ಅನುದಾನ ದೊರೆತಿಲ್ಲ ಹಾಗಾಗಿ ನ. 9ರಂದು ನಡೆಯುವ ಸಂಪುಟ ಸಭೆಯಲ್ಲಿ ರೈತರ ನೆರವು ಕುರಿತು ಚರ್ಚಿಸಲಾಗುವುದು. ಬರದ ಸಂದರ್ಭದಲ್ಲಿಯೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕೂಲಿ ಹಣ ಬಾಕಿ 3 ತಿಂಗಳಿಂದ ಬಿಡುಗಡೆ ಮಾಡಿರಲಿಲ್ಲ. ತಾವು, ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತಿತರರು ದೆಹಲಿಗೆ ತೆರಳಿ ಮನವಿ ಮಾಡಿದ ನಂತರ 720 ಕೋಟಿ ರೂ ಬಿಡುಗಡೆ ಮಾಡಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರ ಅಂದ್ರೆ ರಾಜಕಾರಣಿಗಳ ಚೆಲ್ಲಾಟ, ರೈತರಿಗೆ ಪ್ರಾಣಸಂಕಟ
“ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಎಂದಿನಂತಿದೆ, ಆದರೆ ಬಳಕೆ ಹೆಚ್ಚಿರುವುದರಿಂದ ಪಂಪ್ ಸೆಟ್ ಗಳಿಗೆ 5-7 ಗಂಟೆ ಶಿಫ್ಟ್ ಆಧಾರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಸಗೊಬ್ಬರ ಬಿತ್ತನೆ ಬೀಜದ ಪೂರೈಕೆ ಕೊರತೆ ಇಲ್ಲ. ರೈತರ ಅನುಕೂಲಕ್ಕಾಗಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ. ಕೃಷಿ ನವೋದ್ಯಮ ಪ್ರೋತ್ಸಾಹ, ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಯೋಜನೆ ಜಾರಿಗೊಳಿಸಲಾಗುತ್ತಿದೆ” ಎಂದರು.
ರಸಗೊಬ್ಬರ ನಿಯಮಿತ ಬಳಕೆ ಬಗ್ಗೆ ಜಾಗೃತಿ
“ರೈತರಿಗೆ ರಸಗೊಬ್ಬರ, ಕೀಟನಾಶಕಗಳ ನಿಯಮಿತ ಬಳಕೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಭೂಮಿಯ ಸಾರ ಉಳಿಸಿ. ಜಿಲ್ಲೆಯಲ್ಲಿ ಈ ಬಾರಿ ಬಿತ್ತನೆ ಕಡಿಮೆಯಾದರೂ ರಸಗೊಬ್ಬರ ಬಳಕೆ ಹೆಚ್ಚಾಗಿದೆ. ಇದು ಮಣ್ಣಿನ ಫಲವತ್ತತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಹಾಗಾಗಿ ಕೃಷಿಕರಿಗೆ ಅರಿವು ಮೂಡಿಸಿ” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ಕೃಷಿ ವಿಜ್ಞಾನಿಗಳು ರೈತರಿಗೆ ಲಾಭದಾಯಕ ಹಾಗೂ ಆರೋಗ್ಯ ಪೂರ್ಣ ಬೇಸಾಯ ಪದ್ದತಿ ಬಗ್ಗೆ ಅರಿವು ಮೂಡಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಸಮನ್ವಯ ಮಾಡಬೇಕಿದೆ. ರೈತರಿಗೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಅರಿವು ಮೂಡಿಸಬೇಕು ಅಲ್ಲದೆ ಸರ್ಕಾರದ ಎಲ್ಲ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸಬೇಕು” ಎಂದು ಸಚಿವರು ಸೂಚಿಸಿದರು.