‘ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇವಲ ಮೌಖಿಕ ಸೂಚನೆ ನೀಡಿ ಒಬ್ಬ ಶಾಸಕ(ಡಿಕೆ ಶಿವಕುಮಾರ್)ನ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದ್ದು ರಾಜಕೀಯ ಪ್ರೇರಿತ. ಎಫ್‌ಐಆರ್ ಇಲ್ಲದೆಯೇ ಸಿಬಿಐಗೆ ವಹಿಸಿದ್ದ ಪ್ರಕರಣವಾಗಿತ್ತು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ವಿರುದ್ಧ 2019ರಲ್ಲಿ ಸಿಬಿಐ ತನಿಖೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದ ಅಂದಿನ ಬಿಜೆಪಿ ಸರ್ಕಾರ ನೀಡಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿರುವ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷವನ್ನು ಮುಗಿಸಬೇಕು ಅಂತ ಸಂಚು ರೂಪಿಸುತ್ತಿದೆ. ವಿಪಕ್ಷದವರ ಧ್ವನಿಯನ್ನು ದಮನಿಸಲು ಕೆಲವರನ್ನು ಐಟಿ ಮತ್ತು ಇಡಿ ಮೂಲಕ ಹೆದರಿಸುತ್ತಿದೆ. ಎಐಸಿಸಿ ಅಧ್ಯಕ್ಷರಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರ ತನಕವೂ ನಾಯಕರ ವಿರುದ್ದ ಸಂಚು ರೂಪಿಸುತ್ತಿದೆ. ಅನಾವಶ್ಯಕವಾಗಿ ಡಿ ಕೆ ಶಿವಕುಮಾರ್ ಅವರ ವಿರುದ್ದ ಹಿಂದಿನ ಬಿಜೆಪಿ ಸರ್ಕಾರ ಸಂಚು ರೂಪಿಸುವ ಕೆಲಸ ಮಾಡಿತ್ತು. ಬಿಜೆಪಿಯವರು ಕೊಲೆ ಮಾಡಿದರೂ ಪರವಾಗಿಲ್ಲ ಅಂತವರಿಗೆ ಏನೂ ಆಗಿಲ್ಲ. ಆದರೆ ನಮ್ಮನ್ನು ಮಾತ್ರ ಹೆದರಿಸುತ್ತಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ಯಾವುದಾದರೂ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಬೇಕಾದರೆ ಪ್ರಮುಖವಾಗಿ ಐದು ಅಂಶಗಳನ್ನು ಒದಗಿಸಬೇಕು. ಅದರಲ್ಲಿ ಒಂದು ಕೇಸಿನ ಮಾಹಿತಿ ಬೇಕು, ಪ್ರಕರಣದ ಎಫ್‌ಐಆರ್ ನೀಡಬೇಕು, ನ್ಯಾಯಾಲಯದಲ್ಲಿ ದೂರಾದರೂ ಇರಬೇಕು, ಸಿಬಿಐಗೆ ಹಸ್ತಾಂತರ ಮಾಡುವ ಉದ್ದೇಶ ಏನು, ಸ್ಥಳೀಯ ಪೊಲೀಸರು ಅಥವಾ ರಾಜ್ಯದ ಪೊಲೀಸ್ ಅವರಿಗೆ ವಿಚಾರಣೆ ಮಾಡಕ್ಕಾಗುತ್ತಿಲ್ಲ ಎಂಬ ವಿವರಣೆ ನೀಡಬೇಕು. ಆದರೆ ಅದ್ಯಾವುದನ್ನೂ ಪಾಲಿಸದ ಬಿಜೆಪಿ ಸರ್ಕಾರ, ಡಿ ಕೆ ಶಿವಕುಮಾರ್ ಅವರ ವಿರುದ್ಧ 13 ತಿಂಗಳ ನಂತರ ಅಂದರೆ ಅಕ್ಟೋಬರ್ 3, 2020ರಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದೆ. ಹಾಗಾಗಿ, ಸಿಬಿಐಗೆ ವಹಿಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ಕೇವಲ ಮೌಖಿಕ ಆದೇಶ ನೀಡಿ, ಡಿಕೆ ಶಿವಕುಮಾರ್ ವಿರುದ್ಧ ಸಿಬಿಐಗೆ ನೀಡಿರುವ ಪ್ರಕರಣ ಕಾನೂನಾತ್ಮಕವೇ ಆಗಿರಲಿಲ್ಲ. ಬಿಜೆಪಿಯವರು ಕಾನೂನಿಗೆ ವಿರುದ್ಧ ಮಾಡಿರುವುದನ್ನು ನಾವು(ಕಾಂಗ್ರೆಸ್) ಕಾನೂನಾತ್ಮಕವಾಗಿ ವಾಪಸ್ ತಗೊಂಡ್ರೆ ಇವರು ಬೆಂಕಿ ಬಿದ್ದಂಗೆ ಆಡುತ್ತಿದ್ದಾರೆ. ಸುಪ್ರೀಂ ಕೋರ್ಟಿನ ಮೂರು ಆದೇಶಗಳ ಅನುಸಾರವಾಗಿಯೇ ನಾವು ಡಿಕೆ ಶಿವಕುಮಾರ್ ವಿರುದ್ಧ 2019ರಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ಹಿಂಪಡೆದಿದ್ದೇವೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಂದಿನ ದಾಖಲೆಗಳನ್ನು ತೋರಿಸುತ್ತಾ ಸ್ಪಷ್ಟೀಕರಣ ನೀಡಿದ್ದಾರೆ.
‘ಆದೇಶವನ್ನು ಹಿಂಪಡೆದಿರುವ ಬಗ್ಗೆ ಬಿಜೆಪಿಯವರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ವಾಸ್ತವ ಏನೆಂದರೆ ಬಿಜೆಪಿ ಸಿಬಿಐಗೆ ನೀಡಿರುವ ಆದೇಶವೇ ಅಕ್ರಮವಾದುದು. ಆಗ ವಿಪಕ್ಷವಾಗಿದ್ದ ನಮ್ಮ ಪಕ್ಷದ ನಾಯಕರನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ಷಡ್ಯಂತ್ರ ಎಂಬುದು ಸ್ಪಷ್ಟ. ಯಾವುದೇ ಸರಿಯಾದ ದಾಖಲೆ ಇಲ್ಲದೆಯೇ ಕೇವಲ ಮೌಖಿಕವಾಗಿ ಸಿಬಿಐಗೆ ವಹಿಸಲಾಗಿತ್ತು ಎಂಬುದು ಸ್ಪಷ್ಟ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಚಿವ ಸಂಪುಟದ ನಿರ್ಧಾರವನ್ನು ಸಮರ್ಥನೆ ಮಾಡಿದರು.