ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಹೇಳಿದ್ದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಸ್ವಾಮೀಜಿ, “2023ರಲ್ಲಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿತೆಂಬ ವಿಷಯವನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೆ. ಹಾಗಾಗಿ, ಕಾರ್ಯಕ್ರಮದಲ್ಲಿ ಆ ವಿಚಾರವನ್ನು ಪ್ರಸ್ತಾಪಿಸಿದೆ” ಎಂದು ಹೇಳಿದ್ದಾರೆ.
“ಕರ್ನಾಟಕದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್‌ಗೆ 135 ಸ್ಥಾನಗಳನ್ನು ನೀಡಿ ಆಶೀರ್ವದಿಸಿದ್ದರು. ಈ ಯಶಸ್ಸಿನ ಹಿಂದೆ ಸಿದ್ದರಾಮಯ್ಯನವರ ಪಾತ್ರ ಎಷ್ಟಿದೆಯೋ, ಅಷ್ಟೇ ಮಟ್ಟದ ಪಾಲುದಾರಿಕೆ ಡಿ.ಕೆ ಶಿವಕುಮಾರ್ ಅವರದ್ದೂ ಇದೆ. ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ, ಶಿವಕುಮಾರ್ ಟ್ರಬಲ್ ಶೂಟರ್ ಆಗಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಬಂದ ತೊಂದರೆಗಳನ್ನೆಲ್ಲ ನಿವಾರಿಸಲು ಮುಖ್ಯ ಪಾತ್ರ ವಹಿಸಿದ್ದಾರೆ” ಎಂದು ಸ್ವಾಮೀಜಿ ಹೇಳಿದ್ದಾರೆ.
“ಡಿ.ಕೆ ಶಿವಕುಮಾರ್ ಅವರಿಗೆ ಆಡಳಿತದಲ್ಲಿ ಸಾಕಷ್ಟು ಅನುಭವ ಇರುವುದರಿಂದ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ, ಕನ್ನಡ ನಾಡಿಗೆ ಅವರಿಂದ ಹೆಚ್ಚಿನ ಸೇವೆ ದೊರೆಯತ್ತದೆ. ರಾಜ್ಯಕ್ಕೆ ಒಳಿತಾಗುತ್ತದೆ ಎಂಬ ಆಶಯ ನಮ್ಮದು” ಎಂದಿದ್ದಾರೆ.
“ಅವರ ಸೇವೆಗಳ ಕಾರಣದಿಂದ ಅವರು ಮುಖ್ಯಮಂತ್ರಿಯಾಗುವ ಹಾದಿಯನ್ನು ಸುಗಮಗೊಳಿಸಿಕೊಡಬೇಕೆಂದು ನಾವು ವೈಯಕ್ತಿಕವಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಈ ವಿಷಯ ಕಳೆದ 2-3 ದಿನಗಳಿಂದ ಚರ್ಚೆಯಾಗುತ್ತಿದೆ. ಡಿ.ಕೆ ಶಿವಕುಮಾರ್ ರವರು ನಮ್ಮ ಮೂಲಕ ವೇದಿಕೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.