ರಾಜ್ಯ ಸರ್ಕಾರದ ಅಡಿಯಲ್ಲಿರುವ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ಜೊತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರನ್ನು ಕರೆದು ಸಭೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ-ಟೀಕೆ ವ್ಯಕ್ತವಾಗುತ್ತಿದೆ. ಅಕಾಡೆಮಿಗಳ ಅಧ್ಯಕ್ಷರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಬೇಕು. ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲು ಅಕಾಡೆಮಿಗಳು ಪಕ್ಷದ ವಿಭಾಗಗಳೇ ಎಂದು ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿರುವ ಡಿ.ಕೆ ಶಿವಕುಮಾರ್, “ಅಕಾಡೆಮಿಗಳ ಅಧ್ಯಕ್ಷ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲುಗಳಾಗಿವೆ. ಕೈ ಮತ್ತು ಬಾಯಿ ಶುದ್ಧವಾಗಿರಿಸಿಕೊಂಡು ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ. ಮಾತ್ರವಲ್ಲದೆ, ಚುನಾವಣಾ ಗೆಲುವು-ಸೋಲಿನ ಬಗ್ಗೆ ಹಾಗೂ ಮುಂದಿನ ಚುನಾವಣೆಗಳಿಗೆ ಅನುಕೂಲಕರವಾಗಿ ಕೆಲಸ ಮಾಡುವಂತೆಯೂ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಿಗಮ ಮಂಡಳಿ ಹಾಗೂ ಅಕಾಡೆಮಿ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ನಿಗಮ ಮಂಡಳಿಗಳು ಹಾಗೂ ಅಕಾಡೆಮಿಗಳ ವತಿಯಿಂದ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳು ಹಾಗೂ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು. pic.twitter.com/MrVssmPIyi
— DK Shivakumar (@DKShivakumar) June 14, 2024
ಅಕಾಡೆಮಿಗಳ ಅಧ್ಯಕ್ಷರೊಂದಿಗೆ ಪಕ್ಷದ ಕಚೇರಿಯಲ್ಲಿ ಅದೂ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.
ಸಭೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಚಿಂತಕ ಶಿವಸುಂದರ್, “ಸಾಂಸ್ಕೃತಿಕ ಅಕಾಡೆಮಿಗಳು ಕಾಂಗ್ರೆಸ್ ಪಕ್ಷದ ಶಾಖೆಗಳೇ? ಅದರ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭೆ KPCC ಕಚೇರಿಯಲ್ಲೇಕೆ? ಅಲ್ಲಿ ಕಾಂಗ್ರೆಸ್ಸಿನ ಭವಿಷ್ಯದ ಬಗ್ಗೆ ಚರ್ಚೆಯೇಕೆ? ಸ್ವಾಭಿಮಾನಿಗಳು ಅದರಲ್ಲಿ ಭಾಗವಹಿಸಿದ್ದೇಕೆ? ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನೀಯ… ಅಕಾಡೆಮಿ ಅಧ್ಯಕ್ಷರುಗಳ ನಡೆ ವಿಶಾದನೀಯ” ಎಂದಿದ್ದಾರೆ.
“ಕಾಂಗ್ರೆಸ್ ಕಚೇರಿಯಲ್ಲಿ ಮಂತ್ರಿಗಳು, ಮುಖಂಡರ ಮುಂದೆ ಎದ್ದು ನಿಂತು ಈ ರೀತಿ ವರದಿ ಒಪ್ಪಿಸುವುದು, ಸಾಂಸ್ಕೃತಿಕ ಲೋಕ ತಲುಪಿದ ಅಧಃಪತನಕ್ಕೆ ಸಾಕ್ಷಿ. ಅಕಾಡೆಮಿ, ಪ್ರಾಧಿಕಾರ ಎಲ್ಲವೂ ಆಡಳಿತ ಪಕ್ಷದ ಕೃಪಾ ಪೋಷಿತ ಎನ್ನುವುದು ನಿಜವಾದರೂ ಸಹ, ‘ನಾನು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ನೋಡಿ ಎಂದೆಲ್ಲ ಬಡಬಡಿಸಿ’… ಸಾಂಸ್ಕೃತಿಕ ಪ್ರತಿರೋಧ ಮತ್ತು ಕಟ್ಟುವಿಕೆಯನ್ನು ಎಲ್ಲಿಗೆ ತಂದು ನಿಲ್ಲಿಸಿದಿರಿ?” ಎಂದು ಶಿಕ್ಷಣ ತಜ್ಞ ಬಿ ಶ್ರೀಪಾದ ಭಟ್ ಕಿಡಿಕಾರಿದ್ದಾರೆ.
ಇನ್ನು, ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಸುರೇಶ್ ಕಂಜರ್ಪಣೆ, “ಭಾಷಾ, ಸಾಂಸ್ಕೃತಿಕ ಅಕಡೆಮಿ, ಸಂಸ್ಥೆಗಳು ಕಾಂಗ್ರೆಸ್ಸಿನ ವಿಸ್ತರಣೆಯೇ? ಈ ಹುದ್ದೆಗಳ ನೇಮಕಾತಿ ಆಡಳಿತ ಪಕ್ಷದ ಬೇಕು- ಬೇಡಗಳ ಕಾರಣಕ್ಕೇ ಆಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಮೂಲತಃ ಸಾಂಸ್ಕೃತಿಕ ಲೋಕದ ಸ್ವಾಯತ್ತ ಬೇರುಗಳ ಮಂದಿ ತಾವು ಎಂಬುದನ್ನೂ ಜಾಹೀರುಪಡಿಸುವುದು ಈ ಹುದ್ದೆಗೇರಿದವರ ಕರ್ತವ್ಯ. ಅದು ಬಿಟ್ಟು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ?! ಬಿಜೆಪಿ, ಆರೆಸ್ಸೆಸ್ ಇದನ್ನೇ ಮಾಡಿತ್ತು. ನಾಳೆಯೂ ಮಾಡಲಿದೆ. ಆಗ ಅದನ್ನು ಟೀಕಿಸುವ/ವಿಮರ್ಶಿಸುವ ನೈತಿಕ ಹಕ್ಕು ನಾವೆಲ್ಲ ಕಳೆದುಕೊಳ್ಳುತ್ತೇವೆ. ಸೈದ್ಧಾಂತಿಕ ಅನುಮೋದನೆ ಒಂದು ಪಕ್ಷಕ್ಕೆ ವೈಯಕ್ತಿಕವಾಗಿ ನೀಡಿದರೂ ಸಾಂವಿಧಾನಿಕ ಸ್ಥಾನಗಳು ಈ ನೇರ ಗುರುತಿಸಿಕೊಳ್ಳುವಿಕೆಯನ್ನು ಮೀರಿರುತ್ತವೆ. ಈ ಪಾವಿತ್ರ್ಯತೆಯನ್ನು ಕಾಪಾಡಿ ಮಾದರಿಯಾದಾಗಲೇ ಸಂವಿಧಾನಕ್ಕೊಂದು ಬೆಲೆ. ಕುರ್ಚಿಯೇರಿದ ಮಾರನೇ ದಿನವೇ ಪಕ್ಷದ ಕಚೇರಿಯಲ್ಲಿ ಪಾಠ ಹೇಳಿಸಿಕೊಳ್ಳಲು ಹಾಜರಾದರೆ ಏನರ್ಥ?
ನೈತಿಕತೆಯ ಒಂದುಮೆಟ್ಟಿಲು ಇಳಿದಂತೆ ಎಂದಷ್ಟೇ ಅರ್ಥ. ಕಾಲದ ಓಟವೆಂದರೆ progressive degeneration ಎಂಬ ಮಾತಿದೆ. ನಾವೆಲ್ಲ ಮೌಲ್ಯಗಳ ಮರುಸ್ಥಾಪನೆಯನ್ನು ಎದುರು ನೋಡಿದರೆ ಈ ಪ್ರಸಂಗ! ಕಾಲ ಮಿಂಚಿಲ್ಲ ಎಂದು ಸಾಂತ್ವನ ಹೇಳಬಹುದಷ್ಟೇ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆ ಯಾವ ಸರ್ಕಾರಗಳು ಇಂತಹ ಕೆಲಸ ಮಾಡಿರಲಿಲ್ಲ. ತುಂಬಾ ನಾಚಿಕೆಗೇಡಿನ ಸಂಗತಿ ಇದು. ಡಿಕೆಶಿ ಹಿತವಚನ ಕೇಳಿಸಿಕೊಳ್ಳುವ ದುರ್ಗತಿ ಅಕಾಡೆಮಿಗಳ ಅಧ್ಯಕ್ಷರುಗಳಿಗೆ ಬರಬಾರದಿತ್ತು” ಎಂದು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಹೇಳಿದ್ದಾರೆ.
“ಅಕಾಡೆಮಿಯ ಅಧ್ಯಕ್ಷರ ಅಥವಾ ಸದಸ್ಯರ ಸಭೆ ನಡೆಯಬೇಕಾದಲ್ಲಿ ಮಂತ್ರಿಗಳೇ ಕನ್ನಡ ಸಂಸ್ಕೃತಿ ಇಲಾಖೆಗೆ ಬಂದು ಅಂತರಂಗ ಸಭಾಭವನದಲ್ಲಿ ಸಭೆ ನಡೆಸುತ್ತಿದ್ದರು. ಈ ಸಭೆಗಳಲ್ಲಿ ಅಧ್ಯಕ್ಷ, ಸದಸ್ಯರ, ಸಲಹೆ ಸೂಚನೆಗಳನ್ನು ಪಡೆದುಕೊಂಡು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಅಧಿಕಾರಿಗಳಿಗೆ ಅನುಕೂಲಕರ ನಿರ್ದೇಶನಗಳನ್ನು ನೀಡುತ್ತಿದ್ದರು, ಅಕಾಡೆಮಿಯ ವಿಚಾರಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಭಾಭವನದಲ್ಲೂ ಸಭೆ ಕರೆಯುತ್ತಿರಲಿಲ್ಲ ಅಂತರಂಗಕ್ಕೆ ಬಂದು ಸಭೆ ನಡೆಸುತ್ತಿದ್ದರು. ಅಕಾಡೆಮಿಗಳಿಂದ ಸಲಹೆ ಪಡೆಯಬೇಕೆ ಹೊರತು, ಅವರಿಗೆ ಸೂಚನೆ ಕೊಡುವ ಕೆಲಸ ಸ್ವಾಯತ್ತ ಸಂಸ್ಥೆಗಳಿಗೆ ಮಾಡುವ ಅವಮಾನ. ನಮ್ಮ ಅಧ್ಯಕ್ಷರುಗಳು ಕೂಡ ಕರೆದ ತಕ್ಷಣ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದು ವಿಷಾದನೀಯ. ಬಹುಶಃ ನಿಗಮ ಮಂಡಳಿಗಳ ಅಧ್ಯಕ್ಷರುಗಳ ಜೊತೆಯಲ್ಲಿ ಅಕಾಡೆಮಿಗಳನ್ನು ಕರೆಸಿರುವುದು ಗೋಚರವಾಗುತ್ತದೆ. ನಿಗಮ ಮಂಡಳಿಗಳಿಗೆ ಸರ್ಕಾರ ನೂರಾರು ಸಾವಿರಾರು ಕೋಟಿಗಳ ಅನುದಾನ ನೀಡುತ್ತದೆ, ಅಕಾಡೆಮಿಗಳ ಬಜೆಟ್ ವರ್ಷಕ್ಕೆ ಒಂದು ಕೋಟಿ, ಇದಲ್ಲದೆ ಹಿಂದಿನ ಯಾವ ಅಕಾಡೆಮಿ ಸದಸ್ಯರು ಅಧ್ಯಕ್ಷರುಗಳು ರಾಜಕೀಯಕ್ಕೆ ಹೋಗಿಲ್ಲ” ಎಂದು ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಲೋಕೇಶ್ ಹೇಳಿದ್ದಾರೆ.
“ಅಕಾಡೆಮಿ ಸಂಸ್ಥೆಗಳಿಗೆ ಎಷ್ಟು ಸ್ವಾಯತ್ತತೆ ಇದೆಯೋ ಗೊತ್ತಿಲ್ಲ. ಆದರೆ, ಅದರ ಚುಕ್ಕಾಣಿ ಹಿಡಿದಿರುವ ವ್ಯಕ್ತಿಗಳು ಕಾಂಗ್ರೆಸ್‌ಗೆ ಸೇರಿರುವರಲ್ಲ, ಸ್ವತಂತ್ರರು. ತಮ್ಮ ಕಲೆ ಸಾಹಿತ್ಯ ಸಾಮರ್ಥ್ಯದಿಂದ ಅಧಿಕಾರ ಪಡೆದಿದ್ದಾರೆ. ಇವರ ಉದ್ದೇಶ ಖಂಡಿತ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸುವುದು, ಅಧಿಕಾರದಲ್ಲಿ ಉಳಿಸುವುದು, ಗೆಲ್ಲಿಸುವುದು ಅಲ್ಲ, ಅದನ್ನು ಮೀರಿದ ಗುರುತರ ಜವಾಬ್ದಾರಿ ಇವರಿಗಿದೆ ಅನ್ನುವುದು ಅವರಿಗೆಲ್ಲ ಖಂಡಿತ ಗೊತ್ತಿದೆ. ಈ ಸಭೆಯ ಹಿನ್ನೆಲೆ ಸ್ವಲ್ಪ ತಿಳಿಯುವುದು ಉತ್ತಮ, ಯಾರು ಯಾವ ಉದ್ದೇಶದಿಂದ ಕರೆದಿರುತ್ತಾರೆ ಗೊತ್ತಿಲ್ಲ. ಈ ವಿಚಾರದಲ್ಲಿ ಧ್ವನಿ ಎತ್ತುವುದು ಖಂಡಿತ ಸೂಕ್ತ” ಎಂದು ಕೃಷಿ ಚಿಂತಕ ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ.