ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಆರ್ಎಸ್ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಬಿಜೆಪಿಯವರು ಡಿ ಕೆ ಶಿವಕುಮಾರ್ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಹಾಗೆಂದು, ಅವರು ಉಪ ಮುಖ್ಯಮಂತ್ರಿಗಳಾಗಿ ಅದನ್ನು ಹಾಡಿದ್ದರೆ ತಕರಾರಿಲ್ಲ”ಎಂದರು.
“ಆರ್ಎಸ್ಎಸ್ ಅನ್ನು ಈ ದೇಶದಲ್ಲಿ ಮೂರು ಬಾರಿ ಈಗಾಗಲೇ ನಿಷೇಧ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಿ ಸಂಘದ ಪ್ರಾರ್ಥನೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಯಾಕೆಂದರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ, ಇಡೀ ಏಳು ಕೋಟಿ ಕರ್ನಾಟಕ ಜನತೆಯ ಸರ್ಕಾರ. ಅದರಲ್ಲಿ ಆರ್ಎಸ್ಎಸ್ನವರೂ ಇದ್ದಾರೆ, ಜಮಾಅತ್ ಇಸ್ಲಾಮಿ ಅವರೂ ಇದಾರೆ ಎಲ್ಲರೂ ಇದ್ದಾರೆ. ತಾಲಿಬಾನಿಗಳೂ ಇದ್ದಾರೆ” ವ್ಯಂಗ್ಯವಾಗಿ ಕುಟುಕಿದರು.
ಕಾಂಗ್ರೆಸ್ ಅಧ್ಯಕ್ಷರಾಗಿ ಆ ರೀತಿ ಹೇಳುವ ಹಾಗಿಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತದೆ. ಯಾಕೆಂದರೆ, ಮಹಾತ್ಮ ಗಾಂಧಿಯವರನ್ನು ಕೊಂದಂತ ಸಂಘಟನೆ ಅದು. ಆ ಸಂಘಟನೆಯ ಪ್ರಾರ್ಥನೆ ಮಾಡುವುದು ಸರಿಯಲ್ಲ” ಎಂದು ಹೇಳಿದರು.
ಡಿ ಕೆ ಶಿವಕುಮಾರ್ಗೆ ಹಲವು ಮುಖ
“ಡಿ ಕೆ ಶಿವಕುಮಾರ್ಗೆ ಹಲವು ಮುಖಗಳಿವೆ. ಅವರು ಕೃಷಿಕರು ಎಂದು ಹೇಳಿಕೊಳ್ಳುತ್ತಾರೆ. ಆಮೇಲೆ ಒಮ್ಮೊಮ್ಮೆ ಕ್ವಾರಿ ಮಾಲೀಕ, ಎಜುಕೇಷನಿಸ್ಟ್, ಉದ್ಯಮಿ ಎಂದೆಲ್ಲ ಹೇಳಿಕೊಳ್ಳುತ್ತಾರೆ. ಹೀಗಾಗಿ ಯಾರಿಗೆ ಸಂದೇಶ ಕೊಡಬೇಕು ಎಂಬುದನ್ನು ಅವರು ಗಮನದಲ್ಲಿ ಇಟ್ಟುಕೊಂಡಿದ್ದಾರೆ ನಮಗೆ ಗೊತ್ತಿಲ್ಲ. ಯಾರನ್ನು ಮೆಚ್ಚಿಸುವುದಕ್ಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ” ಎಂದರು.
