ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

Date:

Advertisements
ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ. ಸತೀಶ್ ಜಾರಕಿಹೊಳಿ ಗುಂಪು, ತಮ್ಮಲ್ಲೇ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ; ಡಿಕೆ ಬ್ರದರ್ಸ್, ತಮ್ಮ ಶಕ್ತಿಮೀರಿ ತೆಕ್ಕೆಗೆ ತೆಗೆದುಕೊಳ್ಳಲು ಹೋರಾಟಕ್ಕಿಳಿದಿದ್ದಾರೆ. ಅಂತಿಮವಾಗಿ ಗೆಲ್ಲುವವರಾರು? ಅಷ್ಟಕ್ಕೂ ಸಹಕಾರಿ ಖಾತೆಯಲ್ಲಿ ಏನಿದೆ?

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಸಹಕಾರ ಖಾತೆಯು ಸದಾ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದು ಕೇವಲ ಕೆಎಂಎಫ್‌, ಅಪೆಕ್ಸ್‌ ಬ್ಯಾಂಕ್‌ನಂತಹ ಲಾಭದಾಯಕ ಸಂಸ್ಥೆಗಳ ನಿರ್ವಹಣೆಯಷ್ಟೇ ಅಲ್ಲದೆ, ರೈತರ ಹಿತರಕ್ಷಣೆ, ಗ್ರಾಮೀಣ ಅಭಿವೃದ್ಧಿ ಮತ್ತು ರಾಜಕೀಯ ಪ್ರಭಾವದ ಕೇಂದ್ರಬಿಂದುವಾಗಿದೆ. ಈ ಖಾತೆಯ ಸುತ್ತ ಸದ್ಯ ನಡೆಯುತ್ತಿರುವ ಪೈಪೋಟಿ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ತೀವ್ರಗೊಂಡಿದ್ದು, ರಾಜ್ಯದ ಕಾಂಗ್ರೆಸ್ ಪಕ್ಷದ ಆಂತರಿಕ ನಾಯಕತ್ವ ಸಂಘರ್ಷವನ್ನು ಬಹಿರಂಗಪಡಿಸುತ್ತಿದೆ. ಆದರೆ ಈ ಪೈಪೋಟಿಯನ್ನು ಅರ್ಥಮಾಡಿಕೊಳ್ಳಲು, ಸಹಕಾರ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ ಕೂಡ ಪ್ರಮುಖವಾಗುತ್ತದೆ.

ಕರ್ನಾಟಕದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಿದ ಪ್ರಮುಖ ನಾಯಕರಲ್ಲಿ ಕೆ.ಹೆಚ್ ಪಾಟೀಲ್ ಅವರು ಪ್ರಮುಖರು. ಇನ್ನು ಈಗಿನ ಪೀಳಿಗೆಯವರಿಗೆ ಇವರ ಹೆಸರನ್ನು ತಿಳಿಯಪಡಿಬೇಕಾದರೆ ಪ್ರಸ್ತುತ ಕಾನೂನು ಮತ್ತು ಸಂಸದೀಯ ಸಚಿವರಾಗಿರುವ ಎಚ್‌.ಕೆ ಪಾಟೀಲ್‌ ಅವರ ತಂದೆ. ಗದಗ ಜಿಲ್ಲೆಯ ಹುಲಕೋಟಿಯವರಾದ ಇವರನ್ನು ‘ಹುಲಕೋಟಿ ಹುಲಿ’ ಎಂದೇ 1950ರ ದಶಕದಿಂದ 1990ರ ದಶಕದವರೆಗೂ ಖ್ಯಾತರಾಗಿದ್ದರು. 1950ರಲ್ಲಿ ತಮ್ಮ ಸ್ವಗ್ರಾಮದಲ್ಲಿ ಸಹಕಾರಿ ಬ್ಯಾಂಕ್‌ ಸ್ಥಾಪಿಸುವ ಮೂಲಕ ಸಾವಿರಾರು ಬಡವರ ಬದುಕನ್ನು ಹಸನಾಗಿಸಿದ್ದರು. ಮಧ್ಯವರ್ತಿಗಳಿಂದ ರೈತರು ಪಡುವ ಶೋಷಣೆಯನ್ನು ಕೊನೆಗಾಣಿಸುವುದಕ್ಕಾಗಿ ಹೋರಾಟ ಕೈಗೊಂಡರು. ಗದಗ ಅವರ ಕಾರ್ಯಕ್ಷೇತ್ರವಾಯಿತು. ಪ್ರಬಲ ಸಂಸ್ಥೆಯಾದ ಕಾಟನ್ ಸೇಲ್ಸ್ ಸೊಸೈಟಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡರು.

ರೈತರ ಹಿತಕ್ಕಾಗಿ ಕ್ಷಿಪ್ರ ಬದಲಾವಣೆಗಳನ್ನು ಜಾರಿಗೊಳಿಸಿದರು. ಕೆ.ಹೆಚ್‌ ಪಾಟೀಲ್ ಅವರು ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ ಫೆಡರೇಶನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸುಮಾರು 22 ಶಾಖೆಗಳನ್ನು ನಾಡಿನ ಉದ್ದಗಲಕ್ಕೂ ಸ್ಥಾಪಿಸಿ ಮನೆ ಮಾತಾದರು. ಇದೇ ರೀತಿಯ ಸಾಧನೆಗಳು 1950, 1960 ಮತ್ತು 1970ರ ದಶಕಗಳಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸಿದವು. ಸಹಕಾರ ಕ್ಷೇತ್ರದ ಇವರ ಸಾಧನೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ನಾಯಕನನ್ನಾಗಿಸಿತು. ಅಷ್ಟೇ ಅಲ್ಲದೆ, ಗದಗ ಸಮೀಪದ ಹುಲಕೋಟಿಯಲ್ಲಿ ಸಹಕಾರಿ ತತ್ವದ ಮೇಲೆ ಒಂದು ದೊಡ್ಡ ನೂಲಿನ ಗಿರಣಿಯನ್ನು ಸ್ಥಾಪಿಸಿದರು. ಹತ್ತಿಕಾಳಿನಿಂದ ಎಣ್ಣೆ ಹಾಗೂ ಪಶು ಆಹಾರ ತಯಾರಿಸುವ ಕಾರ್ಖಾನೆಗಳನ್ನೂ ಪ್ರಾರಂಭಿಸಿ ಗ್ರಾಮೀಣ ಕೈಗಾರಿಕಾ ಉದ್ಯಮಕ್ಕೆ ಭದ್ರ ಬುನಾದಿ ಹಾಕಿದರು. ಹೀಗೆ, ಪಾಟೀಲ್ ಅವರ ದೂರದೃಷ್ಟಿ ಹಾಗೂ ದಕ್ಷ ನಾಯಕತ್ವ ಕೃಷಿ ಮತ್ತು ಅರಣ್ಯ ಇಲಾಖೆಗೆ ಹೊಸ ಹುರುಪು ನೀಡಿತು.

Advertisements

ರಾಷ್ಟ್ರಮಟ್ಟದಲ್ಲಿ ಸಹಕಾರ ಕ್ಷೇತ್ರದ ಇತಿಹಾಸವನ್ನು ಕೆದಕಿದರೆ, ಗುಜರಾತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾಧನೆಯೂ ಗಮನಾರ್ಹ. ಗುಜರಾತ್‌ನ ಸಹಕಾರಿ ಕ್ಷೇತ್ರದಲ್ಲಿ ಅಮಿತ್ ಶಾ ಅವರು ಕಾಂಗ್ರೆಸ್ ಹಾಗೂ ಅಲ್ಲಿನ ಪ್ರಬಲ ಸಮುದಾಯದ ನಾಯಕರ ಪ್ರಭಾವವನ್ನು ಕಡಿಮೆ ಮಾಡುವ ತಂತ್ರವನ್ನು ಸಹಕಾರ ಕ್ಷೇತ್ರದಿಂದಲೇ ಪ್ರಾರಂಭಿಸಿದರು. ಧರ್ಮ ರಾಜಕಾರಣದ ಜೊತೆಯಲ್ಲೇ  ರಾಜ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸಹಕಾರಿ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಅವರು ಬಿಜೆಪಿಯನ್ನು ಬಲಪಡಿಸಿದರು. 1990ರ ದಶಕದಲ್ಲಿ ನಷ್ಟದಲ್ಲಿದ್ದ ಅಹಮದಾಬಾದ್ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ (ಎಡಿಸಿಬಿ) ಅಮಿತ್‌ ಶಾ ಅಧ್ಯಕ್ಷರಾದ ಒಂದು ವರ್ಷದಲ್ಲಿ ಲಾಭಕ್ಕೆ ತಿರುಗಿತು. ಅಮಿತ್ ಶಾ ರಾಷ್ಟ್ರ ರಾಜಕಾರಣಕ್ಕೆ ಕಾಲಿಡುವ ಹೊತ್ತಿಗೆ ಎಡಿಸಿಬಿ ನೂರಾರು ಕೋಟಿ ಲಾಭ ಗಳಿಸುವಂತಾಯಿತು. ಸಹಕಾರಿ ಕ್ಷೇತ್ರದಲ್ಲಿ ಪಕ್ಷದ ಹಿಡಿತವನ್ನು ಬಲಪಡಿಸಿದರು. ಈ ಯಶಸ್ಸು ಅವರನ್ನು ಇತರ ಕ್ಷೇತ್ರಗಳತ್ತ ಕೊಂಡೊಯ್ದಿತು.

ಸಹಕಾರಿ ತಂತ್ರಗಳನ್ನೇ ಬಳಸಿ ಅವರು ಕ್ರಿಕೆಟ್ ಕ್ಷೇತ್ರಕ್ಕೂ ಕಾಲಿಟ್ಟರು. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಪ್ರಭಾವ ಬೀರಿ ಅಧ್ಯಕ್ಷರಾದರು, ಮತ್ತು ನಂತರ ಬಿಸಿಸಿಐನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಹಕಾರಿ ಸಂಸ್ಥೆಗಳನ್ನು ಲಾಭದಾಯಕಗೊಳಿಸುವ ಮೂಲಕ ಪಡೆದ ಆರ್ಥಿಕ ಮತ್ತು ರಾಜಕೀಯ ಬಲವನ್ನು ಕ್ರಿಕೆಟ್ ನಿರ್ವಹಣೆಗೆ ಬಳಸಿ, ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿದರು. ಮಗ ಜಯ್ ಶಾನನ್ನು ಭಾರೀ ಆದಾಯವಿರುವ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥನನ್ನಾಗಿಸಿದರು. ಸಾಲದು ಎಂದು ಈಗಲೂ ಕೇಂದ್ರದಲ್ಲಿ ಗೃಹ ಖಾತೆಯ ಜೊತೆಗೆ ಸಹಕಾರ ಖಾತೆಯನ್ನೂ ಇಟ್ಟುಕೊಂಡರು. ಇದು ಸಹಕಾರ ಕ್ಷೇತ್ರವು ಹೇಗೆ ರಾಜಕೀಯ ಮತ್ತು ಸಾಮಾಜಿಕ ವಿಸ್ತರಣೆಗೆ ಮೆಟ್ಟಿಲಾಗಬಲ್ಲುದು ಎಂಬುದಕ್ಕೆ ಉದಾಹರಣೆ. ಈ ಐತಿಹಾಸಿಕ ಸಾಧನೆಗಳ ಹಿನ್ನೆಲೆಯಲ್ಲಿ ಕರ್ನಾಟಕದ ಸದ್ಯದ ಸಹಕಾರ ಖಾತೆ ಪೈಪೋಟಿಯನ್ನು ನೋಡಿದರೆ, ಕೆ ಎನ್‌ ರಾಜಣ್ಣ ಅವರಿಂದ ತೆರವಾದ ಸಹಕಾರಿ ಖಾತೆ ಪಡೆಯಲು ಘಟಾನುಘಟಿಗಳು ಕಣ್ಣಿಟ್ಟಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಸದ್ಯ ಪೈಪೋಟಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ಪೈಪೋಟಿ ತೀವ್ರಗೊಂಡಿದೆ. ಜಾರಕಿಹೊಳಿ ಕುಟುಂಬ, ವಿಶೇಷವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಅವರ ಕುಟುಂಬವು ಸಹಕಾರಿ ಸಂಸ್ಥೆಗಳ ಮೂಲಕ ರೈತರ ಮತ್ತು ಗ್ರಾಮೀಣ ಸಮುದಾಯದ ನಡುವೆ ಬಲವಾದ ನೆಲೆಯನ್ನು ಕಟ್ಟಿಕೊಂಡಿದೆ, ಮತ್ತು ಈ ಹಿಡಿತವು ಅವರನ್ನು ಸಹಕಾರ ಖಾತೆಗೆ ಸಹಜ ಪ್ರತಿಸ್ಪರ್ಧಿಯನ್ನಾಗಿ ಮಾಡಿದೆ. ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಪಕ್ಷದಲ್ಲಿ ಪ್ರಭಾವಿ ಸ್ಥಾನಗಳನ್ನು ಗುರಿಯಾಗಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಪೈಪೋಟಿ ನೀಡುತ್ತಿರುವಂತೆ ಕಾಣುತ್ತದೆ. ಆದರೆ ಸಹಕಾರ ಖಾತೆಯು ಅವರ ಕುಟುಂಬದ ಪ್ರಭಾವದ ಕ್ಷೇತ್ರಕ್ಕೆ ಹೊಂದಿಕೊಳ್ಳುವುದರಿಂದ, ಅವರು ಈ ಖಾತೆಯ ಬಗ್ಗೆ ಆಸಕ್ತಿ ತೋರುವ ಸಾಧ್ಯತೆಯಿದೆ. ಬೆಳಗಾವಿ ಪ್ರದೇಶದ ಸಹಕಾರಿ ಬ್ಯಾಂಕುಗಳು ಮತ್ತು ಸಂಸ್ಥೆಗಳಲ್ಲಿ ಅವರ ಹಿಡಿತವು ರಾಜಕೀಯವಾಗಿ ಲಾಭದಾಯಕವಾಗಿದ್ದು, ಇದು ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಅವರನ್ನು ಬಲಪಡಿಸುತ್ತದೆ.

ಮತ್ತೊಂದೆಡೆ ಹಳೆಯ ಮೈಸೂರು ಭಾಗದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಆರ್ಥಿಕವಾಗಿ ಸದೃಢರಲ್ಲದೆ, ಪಕ್ಷದ ಹೈಕಮಾಂಡ್‌ನಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ರಾಜಕಾರಣಿ. ಈ ಹಿನ್ನೆಲೆಯಲ್ಲಿ ಸಹಕಾರ ಖಾತೆಯನ್ನು ಪಡೆಯುವ ಮೂಲಕ ಅವರು ತಮ್ಮ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಲು ಯೋಜಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಅವರ ಸಹೋದರ ಡಿ ಕೆ ಸುರೇಶ್ ಅವರನ್ನು ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಶನ್) ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಉದ್ದೇಶವು ಇದರ ಹಿಂದಿದೆ. ಸಹಕಾರ ಖಾತೆಯಡಿ ಕೆಎಂಎಫ್, ಅಪೆಕ್ಸ್ ಬ್ಯಾಂಕ್ ಮುಂತಾದ ಹಲವು ಸಂಸ್ಥೆಗಳು ಬರುವುದರಿಂದ, ಈ ಖಾತೆಯು ಸುರೇಶ್ ಅವರ ರಾಜಕೀಯ ಪುನರ್ವಸತಿಗೆ ಮುಖ್ಯವಾಗಿದೆ. ಶಿವಕುಮಾರ್ ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಈ ಖಾತೆಯನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ. ಇವೆಲ್ಲ ಕಾರಣಗಳಿಂದ ಈ ಪೈಪೋಟಿಯು ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಮ್ಮೆ ರಾಜಕೀಯ ಹಣಾಹಣಿ  ಉಂಟುಮಾಡಬಹುದು.

ಜಾರಕಿಹೊಳಿ ಕುಟುಂಬದ ಪ್ರಭಾವವು ಉತ್ತರ ಕರ್ನಾಟಕದಲ್ಲಿ ಬಲವಾಗಿದ್ದರೆ, ಶಿವಕುಮಾರ್ ಅವರ ಹಿಡಿತವು ಹಳೆಯ ಮೈಸೂರು ಮತ್ತು ಬೆಂಗಳೂರು ಕೇಂದ್ರಿತವಾಗಿದೆ. ಪಕ್ಷದ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಕುತೂಹಲಕರ. ಸಹಕಾರ ಖಾತೆಯು ರಾಜ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಇದು ಕೇವಲ ಹುದ್ದೆಯಲ್ಲದೆ ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿದೆ. ಶಿವಕುಮಾರ್ ಅವರ ಆರ್ಥಿಕ ಬಲ ಮತ್ತು ಹೈಕಮಾಂಡ್ ಸಂಬಂಧಗಳು ಅವರನ್ನು ಮುಂಚೂಣಿಗೆ ತರುತ್ತವೆಯೇ ಅಥವಾ ಜಾರಕಿಹೊಳಿ ಅವರ ಸ್ಥಳೀಯ ಹಿಡಿತವು ಗೆಲ್ಲುತ್ತದೆಯೇ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಆದರೆ ಈ ಪೈಪೋಟಿಯು ಸಹಕಾರ ಕ್ಷೇತ್ರದ ಐತಿಹಾಸಿಕ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.

ರಾಜ್ಯದ ರೈತರು ಮತ್ತು ಗ್ರಾಮೀಣ ಸಮುದಾಯಕ್ಕೆ ಉತ್ತಮ ನಾಯಕತ್ವವು ಅಗತ್ಯವಾಗಿದೆ. ಸಹಕಾರ ಖಾತೆಯ ಈ ಪೈಪೋಟಿ ಕೇವಲ ಹುದ್ದೆಗಾಗಿ ನಡೆಯುತ್ತಿರುವುದಲ್ಲ, ಇದು ರಾಜ್ಯದ ಪ್ರಾದೇಶಿಕ ಶಕ್ತಿ ಸಮೀಕರಣ, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಹಾಗೂ ಭವಿಷ್ಯದ ರಾಜಕೀಯ ಯೋಜನೆಗಳ ಮೇಲೆ ನೇರ ಪರಿಣಾಮ ಬೀರುವಂತಹ ಹೋರಾಟವಾಗಿದೆ. ಒಟ್ಟಾರೆಯಾಗಿ, ಕರ್ನಾಟಕದ ರಾಜಕೀಯದಲ್ಲಿ ಸಹಕಾರ ಖಾತೆಯು ಶಕ್ತಿಯ ಕೇಂದ್ರವಾಗಿ ಉಳಿದಿದ್ದು, ಡಿಕೆಶಿ-ಜಾರಕಿಹೊಳಿ ಪೈಪೋಟಿಯು ಇದನ್ನು ಮತ್ತಷ್ಟು ರೋಚಕಗೊಳಿಸಲಿದೆ. ಕೆ ಎಚ್ ಪಾಟೀಲ್ ಮತ್ತು ಅಮಿತ್ ಶಾ ಅವರಂತಹ ನಾಯಕರು ಸಹಕಾರ ಕ್ಷೇತ್ರವನ್ನು ಹೇಗೆ ರಾಜಕೀಯ ಪ್ರಭಾವ ಮತ್ತು ಆರ್ಥಿಕ ಯಶಸ್ಸಿನ ಸಾಧನವಾಗಿ ಬಳಸಿಕೊಂಡರು ಎಂಬುದನ್ನು ಗಮನಿಸಿದರೆ, ಈ ಖಾತೆಯ ಮಹತ್ವ ಮತ್ತಷ್ಟು ಅರಿವಾಗುತ್ತದೆ. ಈ ಪೈಪೋಟಿಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X