- ಡಿ.ಕೆ.ಶಿವಕುಮಾರ್ ಪ್ರಕರಣ ವಾಪಸ್, ಸರಕಾರ ಬೀಳುವುದರ ಮೊದಲ ಹೆಜ್ಜೆ ಇದು: ಈಶ್ವರಪ್ಪ
- ಹಾವೇರಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
“ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕರಣ ವಾಪಸ್ ಪಡೆದಿರುವುದು ಸರ್ಕಾರ ಬಿದ್ದು ಹೋಗುವುದರ ಮೊದಲ ಹೆಜ್ಜೆ. ಶಿವಕುಮಾರ್ ಅವರು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಬದಲಾಗಿ ತಿಹಾರ್ ಜೈಲಿಗೆ ಹೋಗುತ್ತಾರೆ” ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸರಕಾರ ಬೀಳಲು ಎರಡನೆಯ ಹೆಜ್ಜೆ ಅಂದರೆ ಜಾತಿಗಣತಿ. ಒಂಭತ್ತು ವರ್ಷದ ಹಿಂದೆ ಜಾತಿ ಗಣತಿ ಮಾಡಲಾಗಿತ್ತು. ಆದರೆ ಅದನ್ನು ಈವರೆಗೆ ಬಹಿರಂಗಪಡಿಸಿಲ್ಲ. ಸಿಎಂ ಸಿದ್ದರಾಮಯ್ಯನವರಿಗೆ ತಾನು ಹಿಂದುಳಿದ ವರ್ಗದ ಚಾಂಪಿಯನ್ ಅನಿಸಿಕೊಳ್ಳಬೇಕಿತ್ತು. ಅದಕ್ಕಾಗಿ 163 ಕೋಟಿ ರೂಪಾಯಿ ವ್ಯರ್ಥ ಖರ್ಚು ಮಾಡಿದ್ದಾರೆ” ಎಂದು ಕೆಎಸ್ ಈಶ್ವರಪ್ಪ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.
ಇದನ್ನು ಓದಿದ್ದೀರಾ? ‘ಜೋಡು ಕರೆ’ಯನ್ನು ಉದ್ಘಾಟಿಸಿ ‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
‘ಮೂರು ತಿಂಗಳ ಹಿಂದೆ ಹಿಂದುಳಿದ ವರ್ಗಗಳ ದಲಿತ ಮಠಾಧೀಶರು ಜಾತಿಗಣತಿ ಬಹಿರಂಗ ಮಾಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಹೋಗಿದ್ದರು ಅಂದು ಸಿಎಂ ಸಿದ್ದರಾಮಯ್ಯ ನವೆಂಬರ್ ತಿಂಗಳಲ್ಲಿ ಬಹಿರಂಗ ಮಾಡುವುದಾಗಿ ತಿಳಿಸಿದ್ದರು. ಆದರೆ ಇನ್ನೂ ಬಹಿರಂಗ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿಗಣತಿ ಬಗ್ಗೆ ಆಸಕ್ತಿ ಇಲ್ಲ’ ಎಂದು ಕೆ ಎಸ್ ಈಶ್ವರಪ್ಪ ಆರೋಪಿಸಿದರು.
ಪ್ರತಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಮುಖಂಡ, “ಉತ್ತರ ಕರ್ನಾಟಕಕ್ಕೆ ಸ್ಥಾನ ನೀಡಬೇಕಿತ್ತು ಎನ್ನುವ ನೋವಿದೆ. ಅವರು ಹಿರಿಯರು. ಅವರನ್ನು ನಮ್ಮ ಹಿರಿಯ ನಾಯಕರು ಕರೆಸಿ ಮಾತನಾಡುತ್ತಾರೆ. ದೇಶದಲ್ಲಿ ಬಿಜೆಪಿ ಇರುವುದು ಒಂದೇ. ಆದರೆ, ಎಷ್ಟು ಕಾಂಗ್ರೆಸ್ ಇವೆ” ಎಂದು ಈಶ್ವರಪ್ಪ ಪ್ರಶ್ನಿಸಿದರು.