- ಲಂಚ ಕೇಳುವವರ ವಿರುದ್ಧ ದೂರು ನೀಡಲು ದೂರವಾಣಿ ಆರಂಭಿಸುತ್ತೇವೆ
- ಲಂಚ ಕೇಳಿದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ: ಡಿಕೆ ಶಿವಕುಮಾರ್ ಸಲಹೆ
ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹಾಕಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಕನಕಪುರದಲ್ಲಿ ನಡೆದ ಜನಸಂಪರ್ಕ ಸಭೆ ನಡೆಸಿ ಮಾತನಾಡಿದ ಅವರು, “ಕಂದಾಯ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ” ಎಂದರು.
“ಜನರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನಮ್ಮ ತಾಲ್ಲೂಕಿನಲ್ಲಿ ಉತ್ತಮವಾದ ಆಡಳಿತ ನಡೆಯಬೇಕು. ಈ ಹಿಂದಿನ ತಹಶೀಲ್ದಾರ್ ಇದ್ದಾಗ ಒಂದಷ್ಟು ತೊಂದರೆಗಳು ಇದ್ದವು. ಕನಕಪುರ- ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ” ಎಂದು ಹೇಳಿದರು.
“ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ, ಸ್ವಲ್ಪ ತಡವಾಗಬಹುದು ಆದರೆ ಆದಷ್ಟು ಬೇಗ ಜನರ ಸೇವೆಗೆ ಸಿಗಲಿದೆ. ತಾಯಿ- ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಆರೋಗ್ಯದ ವಿಚಾರದಲ್ಲಿ ಜನರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಬೇಗ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲಾಗುವುದು” ಎಂದು ತಿಳಿಸಿದರು.
ಕನಕಪುರದ ಅಂಬೇಡ್ಕರ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಿ, ಮಾತನಾಡಿದೆ.
ನನ್ನ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಇಂದು ಜನಸಂಪರ್ಕ ಸಭೆ ಆಯೋಜಿಸಿದ್ದು, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವುದು ಈ ಸಭೆಯ ಉದ್ದೇಶವಾಗಿದೆ. ಇದಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆಯ… pic.twitter.com/NB7SwBFPU6
— DK Shivakumar (@DKShivakumar) December 2, 2023
ಜಮೀನು ಮಾರಾಟ ಬೇಡ
“ಮುಂದಿನ ದಿನಗಳಲ್ಲಿ ನಿಮ್ಮ ಜಮೀನುಗಳಿಗೆ ಒಳ್ಳೆಯ ಬೆಲೆ ಬರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭೂಮಿಗಳನ್ನು ಮಾರಾಟ ಮಾಡಿಕೊಳ್ಳಬೇಡಿ. ಕನಕಪುರ, ಸಾತನೂರು, ಕೋಡಿಹಳ್ಳಿ, ದೊಡ್ಡ ಆಲಹಳ್ಳಿ ಇಲ್ಲೆಲ್ಲಾ ಮೊದಲು ಭೂಮಿಯ ಬೆಲೆ ಎಷ್ಟಿತ್ತು ಈಗ ಎಷ್ಟಿದೆ ಎಂದು ನೀವೆ ಅಂದಾಜು ಮಾಡಿ. ನಾನು ಏನೇನು ಮಾಡಲು ಸಾಧ್ಯ ಆ ಕೆಲಸವನ್ನು ಮಾಡಿದ್ದೇನೆ. ಇದಕ್ಕೆ ಎಷ್ಟೊಂದು ವಿವಾದ ಮಾಡಿದರು. ನಾನು ನಿಮ್ಮ ಗೌರವ ಉಳಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇನೆ” ಎಂದರು.
1500ಕ್ಕೂ ಹೆಚ್ಚು ಅರ್ಜಿ ವಿಲೇವಾರಿ
ಡಿ ಕೆ ಶಿವಕುಮಾರ್ ಅವರು ಬೆಳಗಿನಿಂದ ಸಂಜೆವರೆಗೂ ಇಡೀ ದಿನ ಕನಕಪುರದ ಅಂಬೇಡ್ಕರ್ ಭವನದಲ್ಲಿ ಕುಳಿತು ಸುಮಾರು 1500 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದರು.
ಶ್ರೀರಕ್ಷಾ ಎಂಬ ಯುವತಿ, ಕೆಲಸ ಮತ್ತು ವಿದ್ಯಾಭ್ಯಾಸ ನಿಮಿತ್ತ ಬಹಳಷ್ಟು ಮಂದಿ ನಿತ್ಯ ಬೆಂಗಳೂರಿಗೆ ಓಡಾಡುತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಅಡಿ ಬರುವ ದುಡ್ಡು, ಮೆಟ್ರೋ ರೈಲಿಗೆ ಖರ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಂದ ಹಾರೋಹಳ್ಳಿವರೆಗೆ ಇರುವ ಬಿಎಂಟಿಸಿ ಬಸ್ ಸೌಲಭ್ಯವನ್ನು ಕನಕಪುರದವರೆಗೆ ವಿಸ್ತರಿಸಿ. ಬೆಳಗ್ಗೆ ಮತ್ತು ಸಂಜೆ 20 ಬಸ್ ಗಳ ಸಂಚಾರ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು. ಡಿಸಿಎಂ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.
ಟಿ ಬೇಕುಪ್ಪೆಯ ಹೊನ್ನೇಗೌಡ, ಸಂಬೇಗೌಡನ ದೊಡ್ಡಿಯ ಮರೀಗೌಡ ತಾವು ಅಂಗವಿಕಲರಾಗಿದ್ದು, ತ್ರಿಚಕ್ರ ವಾಹನ ಕೊಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಡಿಸಿಎಂ ಅವರು ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕನಕಪುರದ 25 ಮಂದಿ ಪೌರಾಕಾರ್ಮಿಕರು ತಮಗೊಂದು ಮನೆ ಬೇಕೆಂದು ಮನವಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದರು. ಮತ್ತೊಂದು ಸುತ್ತು ಸಮಾಲೋಚನೆ ನಡೆಸಿ ಮನೆ ಸ್ವರೂಪ ತೀರ್ಮಾನಿಸುವ ಭರವಸೆ ನೀಡಿದರು.