ಎನ್ಡಿಎ ಸರ್ಕಾರದ ಪ್ರಧಾನಿ ಮೋದಿ ಸಂಪುಟದಲ್ಲಿ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಮೊದಲ ಬಾರಿಗೆ ಆಗಮಿಸಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿಕೊಂಡರು.
ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಸಂಸದ ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ ಸ್ವಾಗತಿಸಿದರು. ಇದೇ ವೇಳೆ ಬೃಹತ್ ಸೇಬು ಮತ್ತು ಮೂಸಂಬಿ ಹಾರ ಹಾಕಿ ಸ್ವಾಗತ ಕೋರಲಾಯಿತು.
ಬಳಿಕ ಮಾತನಾಡಿದ ಕುಮಾರಸ್ವಾಮಿ, “ಪ್ರಧಾನಿ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕೇಂದ್ರ ಸಚಿವನಾದ ಬಳಿಕ ನನ್ನ ಕರ್ಮ ಭೂಮಿಗೆ ಬಂದಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
“ವಿಶೇಷವಾಗಿ ರಾಮನಗರ, ಮಂಡ್ಯ ಜಿಲ್ಲೆಯ ಜನರಿಗೆ ಅಭಿನಂದನೆ ಸಲ್ಲಿಸುವೆ. ಜೆಡಿಎಸ್ ಮುಗಿಸಿದ್ದೇವೆ ಎಂದು ಮಾತನಾಡುವವರಿಗೆ ಉತ್ತರ ಕೊಡಲ್ಲ. ದುರಹಂಕಾರದಲ್ಲಿ ಮಾತನಾಡಿದ್ದವರಿಗೆ ಜನರೇ ಉತ್ತರ ಕೊಟ್ಟಿದ್ದಾರೆ. ನನಗೆ ಬೇಕಾಗಿದ್ದು ರಾಜಕೀಯ ಅಲ್ಲ, ರಾಜ್ಯದ ಜನರ ಸಮಸ್ಯೆಗೆ ಪರಿಹಾರ. ಅದನ್ನು ಮಾಡುವೆ” ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ನನಗೆ ಎರಡು ದೊಡ್ಡ ಖಾತೆ ಕೊಟ್ಟಿದ್ದಾರೆ. ನಾಲ್ಕು ದಿನ ದೆಹಲಿಯಲ್ಲಿ ಕೆಲಸ ಮಾಡುವೆ. ಎರಡು ದಿನ ಕರ್ನಾಟಕದಲ್ಲಿ ಇರುತ್ತೇನೆ. ನಮ್ಮ ಸ್ವಯಂಕೃತ ಅಪರಾಧದಿಂದ ಎರಡು ಕ್ಷೇತ್ರಗಳಲ್ಲಿ ಸೋತಿದ್ದೇವೆ. ಈ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆಸಿ ಮತ್ತೆ ಪಕ್ಷ ಕಟ್ಟುತ್ತೇವೆ” ಎಂದು ತಿಳಿಸಿದರು.
