- ‘ಬಿಜೆಪಿ ಸರ್ಕಾರ ಇದ್ದಾಗ ಸಿಎಂ ಹುದ್ದೆಗೆ 2,500 ಕೋಟಿ ರೂ. ನಿಗದಿ ಮಾಡಿತ್ತು’
- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಅವರ ಘನತೆಗೆ ತಕ್ಕುದಾಗಿಲ್ಲ: ಪಾಟೀಲ್
ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ನಿಗದಿಯಾಗಿತ್ತು. ಈಗ ವಿಪಕ್ಷ ನಾಯಕನ ಸ್ಥಾನಕ್ಕೂ ಬಿಜೆಪಿ ನೂರಾರು ಕೋಟಿ ಕೊಡಬೇಕಾದ ಪರಿಸ್ಥಿತಿ ಇರಬಹುದೇನೋ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಲೇವಡಿ ಮಾಡಿದರು.
ವಿಜಯಪುರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ನಮ್ಮ ಸರ್ಕಾರ ರಚನೆಯಾಗಿ ತಿಂಗಳಾದರೂ ಬಿಜೆಪಿ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಸಾಧ್ಯವಾಗಿಲ್ಲ” ಎಂದರು.
“ನಮ್ಮ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಅವರ ಘನತೆಗೆ ತಕ್ಕುದಾಗಿಲ್ಲ. ಕೇಂದ್ರ ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಅವರು ಬಡವರ ಹಸಿವು ನೀಗುವ ಯೋಜನೆ ಬಗ್ಗೆ ಹೀಗೆಲ್ಲ ಹಗುರವಾಗಿ ಮಾತನಾಡಬಾರದು. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಇವೆಲ್ಲವೂ ಇರುವುದು ಬಡವರ ಒಳಿತಿಗಾಗಿಯೇ ವಿನಾ ಶ್ರೀಮಂತರಿಗಲ್ಲ” ಎಂದು ತಿರುಗೇಟು ನೀಡಿದರು.
ವಿಜಯಪುರವನ್ನು ತಯಾರಿಕಾ ವಲಯದ ಕೈಗಾರಿಕೆಗಳ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲೇ ಈ ಬಗ್ಗೆ ಹೇಳಿದ್ದಾರೆ. ಜತೆಗೆ ಇಲ್ಲಿ ವೈನ್ ಪಾರ್ಕ್ ಮತ್ತು ಫುಡ್ ಪಾರ್ಕ್ ಎರಡೂ ಮಂಜೂರಾಗಿದೆ. ಆದರೆ ಇವುಗಳಲ್ಲಿ ಶೀತಲಗೃಹ ಸೇರಿದಂತೆ ಒಂದೇ ರೀತಿಯ ಸೌಲಭ್ಯಗಳಿರುತ್ತವೆ. ಇವುಗಳನ್ನು ಸಮನ್ವಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ” ಎಂದು ತಿಳಿಸಿದರು,
70 ಕೋಟಿ ರೂ. ಅನುದಾನ
“ವಿಜಯಪುರ ವಿಮಾನ ನಿಲ್ದಾಣದ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅಗತ್ಯವಿರುವ 70 ಕೋಟಿ ರೂ. ಹಣವನ್ನು ಸದ್ಯದಲ್ಲೇ ಒದಗಿಸಲಾಗುವುದು. ಜತೆಗೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಈ ವರ್ಷವೇ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ನಿಯಮಗಳ ಪ್ರಕಾರ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಟೆಂಡರ್ ಕರೆಯಬೇಕಿತ್ತು. ಆದರೆ, ಹಿಂದಿನ ಬಿಜೆಪಿ ಸರಕಾರವು ಇದನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಲೋಪವೆಸಗಿದೆ. ಇದನ್ನು ನಾನು ಬೆಳೆಸಲು ಹೋಗುವುದಿಲ್ಲ” ಎಂದರು.
ಹಿಂದಿನ ಸರ್ಕಾರ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿ ನೀರಾವರಿ, ಲೋಕೋಪಯೋಗಿ ಮುಂತಾದ ಇಲಾಖೆಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಟೆಂಡರ್ ಕರೆದಿದ್ದೇ ಇದಕ್ಕೆ ಸಿದ್ದರಾಮಯ್ಯನವರು ವಿತ್ತೀಯ ಕೊರತೆಯ ಬಜೆಟ್ ಮಂಡಿಸಬೇಕಾಗಿ ಬಂದಿದೆ. ಆದರೂ ರಾಜ್ಯದ ಬೊಕ್ಕಸವನ್ನು ತುಂಬಿಸಲು ಹಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಕೊಡಲಾಗಿದೆ. ಈ ಯೋಜನೆಗಳಿಗೆ ಪ್ರಸ್ತುತ ಆರ್ಥಿಕ ವರ್ಷದ ಬಾಕಿ ಅವಧಿಗೆ 36 ಸಾವಿರ ಕೋಟಿ ರೂ. ಅಗತ್ಯವಿದೆ” ಎಂದರು.