ಪಹಲ್ಗಾಮ್ ದಾಳಿಯ ಬಗ್ಗೆ ಅಬ್ಬರದ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ನನ್ನ ಮೈಯಲ್ಲಿ ಹರಿಯುತ್ತಿರುವುದು ರಕ್ತವಲ್ಲ. ಕುದಿಯುತ್ತಿರುವ ಸಿಂಧೂರ’ ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ವ್ಯಂಗ್ಯವಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಕ್ಯಾಮೆರಾಗಳ ಮುಂದೆ ಮಾತ್ರವೇ ನಿಮ್ಮ ಕುದಿಯುವುದೇಕೆ” ಎಂದು ಪ್ರಶ್ನಿಸಿದ್ದರೆ.
ಗುರುವಾರ, ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, “ನನ್ನ ಮನಸ್ಸು ತಂಪಾಗಿರುತ್ತದೆ. ಆದರೆ, ರಕ್ತ ಮಾತ್ರ ಕುದಿಯುತ್ತಿರುತ್ತದೆ. ಈಗ, ಅದು ರಕ್ತವಲ್ಲ, ಕುದಿಯುತ್ತಿರುವ ಸಿಂಧೂರ” ಎಂದು ಘೋಷಿಸಿದರು. ಅವರ ಹೇಳಿಕೆಯು ಭಾರೀ ಟ್ರೋಲ್‌ಗೂ ಒಳಗಾಗಿದೆ. ಭಾರತ-ಪಾಕ್ ಸಂಘರ್ಷವನ್ನು ವ್ಯಾಪಾರದ ಬೆದರಿಕೆಯ ಅಸ್ತ್ರಬಳಸಿ ನಿಲ್ಲಿಸಿದೆ, ಕದನ ವಿರಾಮಕ್ಕೆ ಒಪ್ಪಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ-ಪದೇ ಹೇಳುತ್ತಿರುದ್ದರೂ, ಅದರ ಬಗ್ಗೆ ಏನನ್ನೂ ಮಾತನಾಡದೆ, ಟ್ರಂಪ್ ಹೇಳಿಕೆಯನ್ನು ಅಲ್ಲಗಳೆಯದ, ಖಂಡಿಸದ ಮೋದಿ ಅವರ ರಕ್ತವು ಕ್ಯಾಮೆರಾ ಎದುರು ಮಾತ್ರವೇ ಕುದಿಯುತ್ತದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಇನ್ನು, ಮೋದಿ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಮೋದಿಯವರೇ, ಸುಳ್ಳು ಭಾಷಣಗಳನ್ನು ನಿಲ್ಲಿಸಿ. ಭಯೋತ್ಪಾದನೆಯ ವಿರುದ್ಧದ ಪಾಕಿಸ್ತಾನದ ಹೇಳಿಕೆಗಳನ್ನು ನೀವೇಕೆ ನಂಬಿಕೊಂಡಿದ್ದೀರಿ? ಟ್ರಂಪ್‌ಗೆ ತಲೆಬಾಗುವ ಮೂಲಕ ನೀವು ಭಾರತದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದೀರಿ. ಕದನ ವಿರಾಮಕ್ಕೆ ಒಪ್ಪಿಕೊಂಡು ಭಾರತದ ಪ್ರತಿಷ್ಠೆಯ ಜೊತೆ ರಾಜಿ ಮಾಡಿಕೊಂಡಿದ್ದೀರಿ. ಬರೀ ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತದೆ” ಎಂದು ಪ್ರಶ್ನಿಸಿದ್ದಾರೆ.
मोदी जी, खोखले भाषण देना बंद कीजिए।
— Rahul Gandhi (@RahulGandhi) May 22, 2025
सिर्फ इतना बताइए:
1. आतंकवाद पर आपने पाकिस्तान की बात पर भरोसा क्यों किया?
2. ट्रंप के सामने झुककर आपने भारत के हितों की कुर्बानी क्यों दी?
3. आपका ख़ून सिर्फ़ कैमरों के सामने ही क्यों गरम होता है?
आपने भारत के सम्मान से समझौता कर लिया! pic.twitter.com/HhjqbjDsaB
ಕದನ ವಿರಾಮ ಘೋಷಣೆ ವಿಚಾರದಲ್ಲಿ ಟ್ರಂಪ್ ನೀಡುತ್ತಿರುವ ಹೇಳಿಕೆಗಳ ಕುರಿತು ಮೋದಿ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ. “ಟ್ರಂಪ್ 11 ದಿನಗಳಲ್ಲಿ ಎಂಟು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಲ್ಲಿ ತಮ್ಮದೇ ಪಾತ್ರವಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳನ್ನು ಸಮಾನವಾಗಿ ಹೊಗಳಿದ್ದಾರೆ. ಇಬ್ಬರನ್ನೂ ಎಲ್ಲ ರೀತಿಯಲ್ಲೂ ಸಮಾನವೆಂದು ಹೇಳಿದ್ದಾರೆ. ಎರಡು ದೇಶಗಳು ಕದನ ವಿರಾಮ ಘೋಷಿಸುವಂತೆ ಮಾಡಲು ಅಮೆರಿಕ ಜೊತೆಗಿನ ವ್ಯಾಪಾರ ವಹಿವಾಟನ್ನು ಅಸ್ತ್ರವಾಗಿ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಅವರ ಹೇಳಿಕೆಗಳನ್ನು ಮೋದಿ ಒಮ್ಮೆಯೂ ತಿರಸ್ಕರಿಸಿಲ್ಲ. ಗಾಢ ಮೌನಕ್ಕೆ ಜಾರಿದ್ದಾರೆ. ಈ ಮೌನ ಯಾಕೆ” ಎಂದು ಕೇಳಿದೆ.