BRICS ಮೇಲೆ ಯುದ್ಧ ಸಾರಿದ ಡೊನಾಲ್ಡ್ ಟ್ರಂಪ್: ಭಾರತ ಮತ್ತು ಮೋದಿ ನಿಲುವೇನು?

Date:

Advertisements
ಪ್ರಧಾನಿ ಮೋದಿಯವರು ಬೇಲಿ ಮೇಲೆ ಕೂತಿದ್ದಾರೆ. ಬ್ರಿಕ್ಸ್ ಪರವಾದ ದೃಢ ನಿಲುವನ್ನೂ ತಾಳುತ್ತಿಲ್ಲ; ಟ್ರಂಪ್ ನಮ್ಮ ಪರಮಾಪ್ತ ಸ್ನೇಹಿತ ಎನ್ನುವುದನ್ನೂ ನಿಲ್ಲಿಸುತ್ತಿಲ್ಲ. ಪಾಶ್ಚಿಮಾತ್ಯ ದೇಶಗಳ ಗುಲಾಮಗಿರಿಯಿಂದ ಮುಕ್ತರಾಗಿ ನವಭಾರತ ನಿರ್ಮಾಣದತ್ತಲೂ ಮನಸ್ಸು ಮಾಡುತ್ತಿಲ್ಲ.   

”ನಾನು ಈ ಬ್ರಿಕ್ಸ್ ಗುಂಪಿನ ಬಗ್ಗೆ ಕೇಳಿದಾಗ, ಅದರಲ್ಲೂ ಈ ಐದು ದೇಶಗಳ ಬಗ್ಗೆ… ಅವರಿಗೆ ನಾನು ಸರಿಯಾಗಿ ಇಕ್ಕಿದ್ದೇನೆ. ಅವರೆಲ್ಲ ಒಳ್ಳೆಯ ಉದ್ದೇಶಕ್ಕಾಗಿ ಒಂದುಗೂಡಿದರೂ, ಅದು ಆದಷ್ಟು ಬೇಗ ಕೊನೆಗೊಳ್ಳುತ್ತದೆ. ನಾನು ನಿಮಗೆ ಹೇಳಲಿಚ್ಛಿಸುತ್ತೇನೆ- ನೀವು ಬಹಳ ಕಾಲ ಉಳಿಯುವುದಿಲ್ಲ. ನನ್ನ ಅಂದಾಜಿನಂತೆ ನೀವು ಒಂದುಗೂಡುವುದಿಲ್ಲವೆಂದು ಭಾವಿಸುತ್ತೇನೆ. ಅಷ್ಟಕ್ಕೂ ನಿಮಗೆ ನನ್ನ ಕಂಡರೆ ಭಯವಿದೆ.”

-ಇದು ಬ್ರಿಕ್ಸ್ ದೇಶಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ಮಾತಿನ ಸಮರ. ಹೇಳಿಕೇಳಿ ಅವರು ದೈತ್ಯರಾಷ್ಟ್ರದವರು. ಅನೇಕ ಸಣ್ಣಪುಟ್ಟ ದೇಶಗಳ ಮೇಲೆ ಅಧಿಕಾರ ಚಲಾಯಿಸಿದವರು. ದಾಸ್ಯದಲ್ಲಿಟ್ಟು ದರ್ಪ-ದೌರ್ಜನ್ಯ ತೋರಿದವರು. ಅಂತಹ ದೇಶದ ಅಧ್ಯಕ್ಷರ ಮಾತು ಈಗ ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಉಂಟು ಮಾಡುತ್ತಿದೆ. ಹಾಗೆಯೇ ಆ ಹೇಳಿಕೆ ಅವರ ವಿಚಲಿತ ಮನಸ್ಥಿತಿಯನ್ನೂ ಸಾರುತ್ತಿದೆ.

ಡೊನಾಲ್ಡ್ ಟ್ರಂಪ್ ಗೆದ್ದು ಅಮೆರಿಕದ ಅಧ್ಯಕ್ಷರಾದಾಗ- ಮೇಕ್ ಅಮೆರಿಕ ಗ್ರೇಟ್ ಎಗೈನ್(Make America Great Again) ಎಂದು ಘೋಷಿಸಿದ್ದರು. ಆದರೆ, ಅದು ಘೋಷಣೆಯಾಗಿ ಉಳಿಯಿತೇ ಹೊರತು, ಕಾರ್ಯರೂಪಕ್ಕೆ ಬರಲಿಲ್ಲ. ಬರುವ ಸೂಚನೆಗಳೂ ಕಾಣಿಸುತ್ತಿಲ್ಲ. ಇದರಿಂದ ವಿಚಲಿತರಾದ ಟ್ರಂಪ್, ಕೆಲವು ದಿನಗಳಿಂದ ಬಾಯಿಗೆ ಬಂದಂತೆ ವದರುತ್ತಿದ್ದಾರೆ. ಪ್ರಪಂಚದ ಇತರ ದೇಶಗಳ ಮೇಲೆ ಮಿತಿಮೀರಿದ ಸುಂಕ ಹೇರುತ್ತಿದ್ದಾರೆ. ಅಸಂಬದ್ಧ ಮಾತುಗಳನ್ನು ಆಡುತ್ತಿದ್ದಾರೆ. ಅಮೆರಿಕದ ಘನತೆ-ಗೌರವ ಮಣ್ಣುಗೂಡಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಇಲ್ಲಿ ಮೋದಿ, ಅಲ್ಲಿ ಟ್ರಂಪ್: ಪ್ರಶ್ನೆಗಳು-ಪ್ರತಿಭಟನೆಗಳು ಮತ್ತು ಪಲಾಯನಪ್ರವೀಣರು!

ಅಷ್ಟಕ್ಕೂ ಟ್ರಂಪ್ ಈ BRICS ದೇಶಗಳ ಮೇಲೆ ಸಮರ ಸಾರಿದ್ದು ಏಕೆ? ಇದರ ಹಿಂದಿರುವ ರಾಜಕಾರಣವೇನು? ಹುನ್ನಾರವೇನು? ಇದರಿಂದ ಅಮೆರಿಕಕ್ಕೆ ಮತ್ತು ಟ್ರಂಪ್‌ಗೆ ಏನು ಲಾಭ? ಭಾರತದ ಮೇಲೆ ಆಗುವ ಪರಿಣಾಮಗಳೇನು?

ಮೊದಲಿಗೆ ಈ BRICS ಎಂದರೇನು, ಆ ಒಕ್ಕೂಟದಲ್ಲಿರುವ ದೇಶಗಳಾವುವು ಹಾಗೂ ಆ ಒಕ್ಕೂಟದ ಉದ್ದೇಶವೇನು ತಿಳಿಯೋಣ.

BRICS– ಪ್ರಮುಖ ಐದು ರಾಷ್ಟ್ರಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಒಂದು ಒಕ್ಕೂಟ. ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ, ಶೇ. 40-50ರಷ್ಟು ಜಾಗತಿಕ ವ್ಯಾಪಾರ-ವಹಿವಾಟು ನಡೆಸುತ್ತಿರುವ ದೇಶಗಳ ಒಕ್ಕೂಟ. ಆರ್ಥಿಕಾಭಿವೃದ್ಧಿಯ ಆಧಾರದ ಮೇಲೆ ರಚಿಸಲಾದ ಒಕ್ಕೂಟ. ಪಾಶ್ಚಿಮಾತ್ಯ ದೇಶಗಳ ಬಿಗಿ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ಶಕ್ತಿ-ಸಾಮರ್ಥ್ಯ ಹೊಂದಿರುವ ದೇಶಗಳ ಒಕ್ಕೂಟ.

image 1600 30561fa7932485d78f1c923eb5e99b18

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ಒಗ್ಗೂಡಿ ಕಟ್ಟಿದ ‘BRICS‘ ಕಳೆದ 16 ವರ್ಷಗಳಿಂದ, 2009ರಿಂದ ಸಕ್ರಿಯವಾಗಿದೆ. ತನ್ನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ, ಸಮನ್ವಯ ಸಾಧಿಸುತ್ತಲೇ ದಕ್ಷಿಣ ರಾಷ್ಟ್ರಗಳ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬಂದಿದೆ. ಹಾಗೆಯೇ ನಮ್ಮದು ಅಭಿವೃದ್ಧಿಪರ ಅಜೆಂಡಾವೇ ಹೊರತು, ಯಾರ ವಿರುದ್ಧವೂ ಅಲ್ಲ ಎನ್ನುವುದನ್ನು ಬ್ರಿಕ್ಸ್ ರಾಷ್ಟ್ರಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.

ಬ್ರಿಕ್ಸ್- ಅನೌಪಚಾರಿಕ ಒಕ್ಕೂಟವಾಗಿದ್ದು, ಜಾಗತಿಕ ಆರ್ಥಿಕತೆ, ರಾಜಕೀಯ ಹಾಗೂ ಭದ್ರತೆಯ ಸವಾಲುಗಳನ್ನು ಎದುರಿಸಲು ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಸಂಬಂಧವನ್ನು ಬಲಪಡಿಸುತ್ತದೆ. ಪ್ರಮುಖವಾಗಿ, ಜಾಗತಿಕ ದಕ್ಷಿಣ ರಾಷ್ಟ್ರಗಳ(Global South Countries) ವೇದಿಕೆಯಾಗಿದೆ. ಪಾಶ್ಚಿಮಾತ್ಯ-ನಿಯಂತ್ರಿತ ಸಂಸ್ಥೆಗಳಾದ ಜಿ7, ಐಎಂಎಫ್ ಹಾಗೂ ವಿಶ್ವ ಬ್ಯಾಂಕ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. ಈಗ ಈ ಒಕ್ಕೂಟವನ್ನು ಕೊಂಚ ವಿಸ್ತರಿಸಲಾಗಿದ್ದು, ಆರು ರಾಷ್ಟ್ರ(ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಇಂಡೋನೇಷಿಯಾ)ಗಳನ್ನು ಒಳಗೊಳ್ಳಲಾಗಿದೆ. ಪ್ರಸ್ತುತ, ಬ್ರಿಕ್ಸ್‌ನಲ್ಲಿ 11 ಸದಸ್ಯ ರಾಷ್ಟ್ರಗಳಿವೆ.

ಬ್ರಿಕ್ಸ್ ಒಕ್ಕೂಟದಲ್ಲಿರುವ ದೇಶಗಳು ಅಮೆರಿಕ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿವೆ ಹಾಗೂ ವ್ಯಾಪಾರ-ವಹಿವಾಟುಗಳನ್ನು ಯಥಾರೀತಿ ಮುಂದುವರೆಸಿವೆ. ಇದು ಕಳೆದ 16 ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದನ್ನು ಜೋ ಬೈಡನ್, ಬರಾಕ್ ಒಬಾಮಾರಂತಹ ಅಧ್ಯಕ್ಷರು ಮೇಲ್ನೋಟಕ್ಕಾದರೂ ಒಪ್ಪಿಕೊಂಡು, ವ್ಯಾಪಾರ-ವಹಿವಾಟು ಮುಂದುವರೆಸಿದ್ದರು. ಆದರೆ, ಈಗಿನ ಅಧ್ಯಕ್ಷ ಟ್ರಂಪ್, ಬ್ರಿಕ್ಸ್ ದೇಶಗಳ ಮೇಲೆ ಬಹಿರಂಗವಾಗಿಯೇ ಸಮರ ಸಾರಿದ್ದಾರೆ. ಬ್ರಿಕ್ಸ್ ದೇಶಗಳ ನಡುವೆ ಬಿರುಕುಂಟುಮಾಡಲು, ಬಗ್ಗುಬಡಿಯಲು ಹವಣಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಮತ್ತು ಅಮೆರಿಕ: ಏನದು ಎಪ್‌ಸ್ಟೀನ್ ಫೈಲ್ಸ್?

ಈ ಬಹಿರಂಗ ಮಾತಿನ ಸಮರಕ್ಕೆ ಕಾರಣ ಸ್ಪಷ್ಟ: ಅಮೆರಿಕದ ಏಕಾಧಿಪತ್ಯಕ್ಕೆ, ಪ್ರತಿಷ್ಠೆಗೆ, ದೊಡ್ಡಣ್ಣನ ಪಾತ್ರಕ್ಕೆ ಪೆಟ್ಟು ಬಿದ್ದಿದೆ. ಅದರಲ್ಲೂ ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಎಂದು ಹೇಳಿಕೊಂಡ ಅಧಿಕಾರಕ್ಕೆ ಬಂದ ಟ್ರಂಪ್‌ಗೆ ಮತ್ತೆ ಗ್ರೇಟ್ ಮಾಡಲಾಗದಿರುವುದು ದೊಡ್ಡ ಸವಾಲಾಗಿ, ಸೋಲಾಗಿ ಕಾಣತೊಡಗಿದೆ.

ಇದಕ್ಕೆ ಪೂರಕವಾಗಿ, ಬ್ರಿಕ್ಸ್‌ನ ಈ ವರ್ಷದ ಶೃಂಗಸಭೆ ಜುಲೈ 6 ಮತ್ತು 7ರಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಿತು. ಶೃಂಗಸಭೆಯಲ್ಲಿ ಬ್ರಿಕ್ಸ್ ದೇಶಗಳ ನಾಯಕರು, ಅಮೆರಿಕದ ಅನಿಯಂತ್ರಿತ ಸುಂಕ ನೀತಿಯನ್ನು ಹಾಗೂ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮವನ್ನು ಒಮ್ಮತದಿಂದ ಟೀಕಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್ ಬ್ರಿಕ್ಸ್​ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಅಮೆರಿಕ ವಿರೋಧಿ ನೀತಿಗಳನ್ನು ಬೆಂಬಲಿಸುವ ಯಾವುದೇ ದೇಶಕ್ಕೆ ಶೇ. 10 ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಪೂರಕವಾಗಿ, ನಾಟೋ ಮುಖ್ಯಸ್ಥ ಮಾರ್ಕ್ ರಟ್ಟೆ, ‘ಬ್ರೆಜಿಲ್, ಚೀನಾ ಮತ್ತು ಭಾರತದಂತಹ ದೇಶಗಳು ರಷ್ಯಾದೊಂದಿಗೆ ವ್ಯಾಪಾರವನ್ನು ಮುಂದುವರೆಸಿದರೆ ನಿರ್ಬಂಧಗಳ ಹೊಡೆತವನ್ನು ಎದುರಿಸಬೇಕಾಗುತ್ತದೆ’ ಎಂದು ಧಮ್ಕಿ ಹಾಕಿದರು.

ಹೀಗೆ ಎಚ್ಚರಿಕೆ, ಧಮ್ಕಿ, ಅತಿಯಾದ ಸುಂಕದ ಬೆದರಿಕೆ ಒಡ್ಡಲು ಕಾರಣವೆಂದರೆ, ಬ್ರಿಕ್ಸ್ ರಾಷ್ಟ್ರಗಳು ಒಂದಾಗಿ, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಸ್ಥಾಪಿಸಿಕೊಂಡಿರುವುದು. ಈ ಬ್ಯಾಂಕ್ ಬ್ರಿಕ್ಸ್‌ನ ಭಾಗವಾಗಿರುವ ದೇಶಗಳಿಗೆ ದೊಡ್ಡ ಮಟ್ಟದ ಸಾಲವನ್ನು ನೀಡುತ್ತದೆ. ಇಲ್ಲಿಯವರೆಗೆ ಜಾಗತಿಕ ಮಟ್ಟದಲ್ಲಿ ಸಣ್ಣಪುಟ್ಟ ದೇಶಗಳ ಹಲವಾರು ಯೋಜನೆಗಳಿಗೆ ದೊಡ್ಡಮಟ್ಟದ ಹಣಕಾಸಿನ ಸಹಾಯವನ್ನು ಅಮೆರಿಕ ಐಎಂಎಫ್(International Monetary Fund) ಮೂಲಕ ನೀಡುತ್ತಿತ್ತು. ಆದರೆ ಈಗ, ಬ್ರಿಕ್ಸ್ ದೇಶಗಳು ಒಂದಾಗಿ ಮಾಡಿಕೊಂಡಿರುವ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದಾಗಿ, ಐಎಂಎಫ್ ಸಂಸ್ಥೆಯ ಅಸ್ತಿತ್ವವನ್ನೇ ಅಪ್ರಸ್ತುತಗೊಳಿಸಲಾಗುತ್ತಿದೆ.

ಸಾಲದು ಎಂದು ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಮುಂದುವರೆದ ಭಾಗವಾಗಿ, ಬ್ರಿಕ್ಸ್ ರಾಷ್ಟ್ರಗಳು ಇನ್ನುಮುಂದೆ ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟುಗಳನ್ನು ‘ಬ್ರಿಕ್ಸ್ ಪೇ’ ಮೂಲಕ ನಡೆಸಲು ಯೋಚಿಸುತ್ತಿವೆ. ಅಂದರೆ, ಇಲ್ಲಿಯವರೆಗೆ ಯಾವುದೇ ದೇಶದ ಆಮದು-ರಫ್ತು ವ್ಯವಹಾರಗಳು ಅಮೆರಿಕದ ಡಾಲರ್ ಮಧ್ಯಸ್ಥಿಕೆಯ ಮೂಲಕ ನಡೆಯುತ್ತಿತ್ತು. ಇನ್ನುಮುಂದೆ ಬ್ರಿಕ್ಸ್ ಪೇ ಮೂಲಕ ನಡೆಯಲಿದೆ. ಅಂದರೆ, ಭಾರತ-ಚೀನಾ ವ್ಯವಹಾರ ಮಾಡಿದರೆ, ಭಾರತ ರೂಪಾಯಿ ನೀಡಿದರೆ, ಚೀನಾ ಯೆನ್ ನೀಡಲಿದೆ. ನೇರಾನೇರ ವ್ಯವಹಾರವಾಗಿದ್ದು ಮಧ್ಯವರ್ತಿಯಂತಿದ್ದ ಡಾಲರ್ ನಗಣ್ಯವಾಗಲಿದೆ.

ಅಂದರೆ ಈ ಬ್ರಿಕ್ಸ್ ಒಕ್ಕೂಟದಲ್ಲಿರುವ ದೇಶಗಳು ಪಾಶ್ಚಿಮಾತ್ಯ ದೇಶಗಳ ಪ್ರಭಾವದಿಂದ ಬಿಡಿಸಿಕೊಂಡು, ಸಂಕೋಲೆಗಳನ್ನು ಕಳಚಿಕೊಂಡು ಸ್ವತಂತ್ರವಾಗಿ ಸ್ವಶಕ್ತಿಯಿಂದ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿವೆ. ಅಮೆರಿಕದ ಐಎಂಎಫ್ ಸಹಾಯವನ್ನು, ಡಾಲರ್‍‌ನ ಮಧ್ಯಸ್ಥಿಕೆಯನ್ನು ಮತ್ತು ದೊಡ್ಡಣ್ಣನ ಆದೇಶವನ್ನು ನಿರ್ಲಕ್ಷಿಸುತ್ತಿಲ್ಲ; ನಾಜೂಕಾಗಿ ಹಿಂದಕ್ಕೆ ಸರಿಸುತ್ತಿವೆ.

trump vs brics
ಡೊನಾಲ್ಡ್‌ ಟ್ರಂಪ್

ಇದರಿಂದ ಅಲ್ಲಾಡಿಹೋಗಿರುವ ಅಮೆರಿಕ, ಚೀನಾ ಮೇಲೆ ಇಲ್ಲಿಯವರೆಗೆ ಕಂಡು ಕೇಳರಿಯದ ಸುಂಕ ವಿಧಿಸಿದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಚೀನಾ ಅಭಿವೃದ್ಧಿಯತ್ತ ಗಮನ ಹರಿಸಿದೆ, ನಾಗಾಲೋಟದಲ್ಲಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಅಮೆರಿಕ ಚಾಟ್ ಜಿಪಿಟಿಗೆ ಬದಲಾಗಿ ಡೀಪ್ ಸೀಕ್ ಮಾಡಿ ಬೆಚ್ಚಿ ಬೀಳಿಸಿದೆ. ಸೇನಾ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಈಗಲೂ ಮುಂದಿರುವ ರಷ್ಯಾ, ಉಕ್ರೇನ್‌ನೊಂದಿಗಿನ ಯುದ್ಧ ನಿಲ್ಲಿಸದೆ, ಟ್ರಂಪ್ ಮಾತಿಗೆ ಮಣೆ ಹಾಕದೆ ಸೆಟೆದು ನಿಂತಿದೆ. ಇನ್ನು ಟ್ರಂಪ್‌ನ 50% ಸುಂಕದ ಬೆದರಿಕೆಗೆ ಬಗ್ಗದ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ, ‘ಯಾವುದೇ ಗ್ರಿಂಗೋ ನನಗೆ ಆದೇಶ ಕೊಡಲು ಸಾಧ್ಯವಿಲ್ಲ’ (ಲ್ಯಾಟಿನ್ ಅಮೆರಿಕಾದಲ್ಲಿ ಗ್ರಿಂಗೋ ಎಂದರೆ ಇಂಗ್ಲಿಷ್ ಮಾತನಾಡುವ ಪರದೇಸಿ- ಬಿಳಿ ಮನುಷ್ಯ ಎಂದು ಅರ್ಥ ಕೊಡುವ ಅವಹೇಳನಕಾರಿ ಪದ. ಬ್ರೆಜಿಲ್ ಮೇಲೆ, ಟ್ರಂಪ್ 50% ಸುಂಕ ಘೋಷಿಸಿದ ಮೇಲೆ ಬಂದ ಪ್ರತಿಕ್ರಿಯೆ) ಎಂದಿರುವುದು ಟ್ರಂಪ್‌ಗೆ ಸಹಿಸಿಕೊಳ್ಳಲಾರದ ಸಂಕಟವಾಗಿದೆ. ಕೆರಳಲು ಕಾರಣ ಕೊಟ್ಟಿದೆ.

ಇದನ್ನು ಓದಿದ್ದೀರಾ?: ಟ್ರಂಪ್ ಸುಳ್ಳುಗಾರ ಎನ್ನಲು ಮೋದಿ ಹೆದರುವುದೇಕೆ? ಸತ್ಯ ಬಯಲಾಗುವ ಭಯವೇ?

ಹಾಗಾಗಿಯೇ ಟ್ರಂಪ್ ಕೊನೆಪಕ್ಷ ಭಾರತವಾದರೂ ಬ್ರಿಕ್ಸ್ ಒಕ್ಕೂಟದಿಂದ ಹೊರಬರಲಿ ಅಥವಾ ಅಲ್ಲಿದ್ದುಕೊಂಡೇ ಬ್ರಿಕ್ಸ್ ಬಿರುಕುಬಿಡುವಂತೆ ಮಾಡಲಿ ಎಂದು ನಾನಾ ನಮೂನೆಯ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

ಆ ನಿಟ್ಟಿನಲ್ಲಿ ಭಾರತವನ್ನು ಬೆದರಿಸಲು, ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25ರಷ್ಟು ಸುಂಕವನ್ನು ಘೋಷಿಸಿದೆ. ‘ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ. ಅವರ ಸುಂಕಗಳು ಬಹಳ ಹೆಚ್ಚಿವೆ. ಇದು ವಿಶ್ವದಲ್ಲೇ ಅತ್ಯಧಿಕವಾಗಿವೆ’ ಎಂದು ಟ್ರಂಪ್ ದೂರಿದ್ದಾರೆ. ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವುದಕ್ಕಾಗಿ ಭಾರತವು ಹೆಚ್ಚುವರಿ ದಂಡವನ್ನು ಪಾವತಿಸಬೇಕಿದೆ ಎಂದು ಧಮ್ಕಿ ಹಾಕಿದ್ದಾರೆ. ‘ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುದು ನನಗೆ ಮುಖ್ಯವಲ್ಲ. ರಷ್ಯಾ ಮತ್ತು ಭಾರತ ಏನು ಮಾಡಲಿವೆ ಎಂಬುದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡೂ ರಾಷ್ಟ್ರಗಳದು ಡೆಡ್ ಎಕಾನಮಿ’ ಎಂದು ಟ್ರಂಪ್ ಗೇಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ರಷ್ಯಾ ಮತ್ತು ಯುಎಸ್ಎ ಒಟ್ಟಿಗೆ ಯಾವುದೇ ವ್ಯವಹಾರವನ್ನು ಮಾಡುವುದಿಲ್ಲವೆಂದು ಹೇಳಿಕೊಂಡಿವೆ ಎಂದು ಸುಳ್ಳು ಹೇಳಿದ್ದಾರೆ.

ಮುಂದುವರೆದು, ಭಾರತದ ಕಂಪನಿಗಳು ಇರಾನ್ ಮೇಲೆ ಅಮೆರಿಕ ವಿಧಿಸಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆ ವಹಿವಾಟು ನಡೆಸುತ್ತಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಆರೋಪಿಸಿದೆ. ವಿಶ್ವದಾದ್ಯಂತ 20 ಕಂಪನಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕ ಕ್ರಮ ಕೈಗೊಳ್ಳುವ ಭಾಗವಾಗಿ ಇರಾನ್‌ ಜತೆಗೆ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವ ಆರೋಪದಡಿ ಭಾರತದ ಆರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.

ಇಷ್ಟೇ ಅಲ್ಲ, ಭಾರತದ ಪ್ರಧಾನಿ ಮೋದಿ ಮುಖಕ್ಕೆ ಮಸಿ ಬಳಿಯಲು, ‘ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು 29 ಬಾರಿ ಹೇಳಿದ್ದಾರೆ. ಮುಂದುವರೆದು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಅವರನ್ನು ಅಮೆರಿಕಕ್ಕೆ ಕರೆಸಿಕೊಂಡು ಬಿರಿಯಾನಿ ಊಟ ಹಾಕಿಸಿದ್ದಾರೆ. ಸಾಲದು ಎಂದು, ‘ಪಾಕಿಸ್ತಾನ ಮತ್ತು ಅಮೆರಿಕ ಒಟ್ಟಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿವೆ. ಪಾಕಿಸ್ತಾನದಲ್ಲಿ ಆಯಿಲ್ ಸಿಕ್ಕಿದೆ, ಅಲ್ಲಿ ಆಯಿಲ್ ಕಂಪನಿ ತೆರೆಯುತ್ತಿದ್ದೇವೆ. ಮುಂದೊಂದು ದಿನ ಪಾಕಿಸ್ತಾನ, ಭಾರತಕ್ಕೆ ಆಯಿಲ್ ಮಾರುವಂತಾದರೂ ಆಶ್ಚರ್ಯವಿಲ್ಲ’ ಎಂದಿದ್ದಾರೆ.

463340 donald trump 4

ಅಮೆರಿಕ ಭಾರತದ ಮಿತ್ರ, ಮೋದಿ ನನ್ನ ಸ್ನೇಹಿತ ಎಂದು ಹೇಳಿಕೊಳ್ಳುತ್ತಲೇ ಟ್ರಂಪ್, ಭಾರತಕ್ಕೆ ಮುಜುಗರ ಉಂಟು ಮಾಡುವ ಮಾತು ಮತ್ತು ಕೃತ್ಯಗಳಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಭಾರತ ಎಂದೆಂದಿಗೂ ಅಮೆರಿಕದ ಅಡಿಯಾಳಾಗಿರಬೇಕು, ಹೇಳಿದಂತೆ ಕೇಳಬೇಕು ಎಂದು ಎಲ್ಲಾ ರೀತಿಯ ಅಸ್ತ್ರಗಳನ್ನು ಟ್ರಂಪ್ ಬಳಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಭಾರತದ ಮೇಲೆ 25% ತೆರಿಗೆ ಹೇರಿಕೆ: ಇಷ್ಟು ವರ್ಷಗಳ ಮೋದಿ-ಟ್ರಂಪ್‌ ಸ್ನೇಹಕ್ಕೆ ಬೆಲೆ ಏನು?

ಒಟ್ಟಿನಲ್ಲಿ, ಪ್ರಪಂಚದ ದೊಡ್ಡಣ್ಣ ಎಂಬ ದೊಡ್ಡಸ್ಥಿಕೆಯಿಂದ ಮೆರೆಯುತ್ತಿದ್ದ ಅಮೆರಿಕದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ದೇಶಗಳ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಡಿತ ಕಳೆದುಕೊಳ್ಳುತ್ತಿದೆ. ಇದರಿಂದ ವಿಚಲಿತರಾಗಿರುವ ಟ್ರಂಪ್, ಹುಚ್ಚರಂತಾಡುತ್ತಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ, ಭಾರತದ ಪ್ರಧಾನಿ ಮೋದಿಯವರು ಬೇಲಿ ಮೇಲೆ ಕೂತಿದ್ದಾರೆ. ಬ್ರಿಕ್ಸ್ ಪರವಾದ ದೃಢ ನಿಲುವನ್ನೂ ತಾಳುತ್ತಿಲ್ಲ; ಟ್ರಂಪ್ ನಮ್ಮ ಪರಮಾಪ್ತ ಸ್ನೇಹಿತ ಎನ್ನುವುದನ್ನೂ ನಿಲ್ಲಿಸುತ್ತಿಲ್ಲ. ಪಾಶ್ಚಿಮಾತ್ಯ ದೇಶಗಳ ಗುಲಾಮಗಿರಿಯಿಂದ ಮುಕ್ತರಾಗಿ ನವಭಾರತ ನಿರ್ಮಾಣದತ್ತಲೂ ಮನಸ್ಸು ಮಾಡುತ್ತಿಲ್ಲ.    

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. What i do not understood is in fact how you are no longer actually a lot more neatly-appreciated than you may be right now. You’re so intelligent. You realize therefore significantly in terms of this topic, produced me personally believe it from so many various angles. Its like men and women are not involved until it is something to do with Woman gaga! Your individual stuffs great. All the time care for it up!

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಕೆಲಸಕ್ಕಾಗಿ ಮಗುವನ್ನು ಕಾಡಿಗೆ ಎಸೆದ ಪೋಷಕರು; ಬಂಡೆ ಕೆಳಗೆ ಬದುಕುಳಿದ ಶಿಶು

ಕಾಡಿನ ತಂಪಾದ ನೆಲದಲ್ಲಿ, ತೆರೆದ ಆಕಾಶದ ಕೆಳಗೆ ಆ ಮಗು ಕೂಗುತ್ತಿತ್ತು....

ಬಜೆಟ್‌ ಇಲ್ಲದೆ ಅಮೆರಿಕ ಅತಂತ್ರ; ಸರ್ಕಾರಿ ಚಟುವಟಿಕೆಗಳು ‘ಶಟ್‌ಡೌನ್‌’

ಟ್ರಂಪ್ ಸರ್ಕಾರ ಮಂಡಿಸಿದ ತಾತ್ಕಾಲಿಕ ಬಜೆಟ್‌ಗೆ ಅಮೆರಿಕ ಸೆನೆಟ್‌ನಲ್ಲಿ ಅನುಮೋದನೆ ದೊರೆತಿಲ್ಲ....

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

Download Eedina App Android / iOS

X