ತಮ್ಮ ಪೋಷಕರು ಮತ್ತು ಚಿಕ್ಕಪ್ಪನ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದು ಹೇಳಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು, “ಇಂದಿನ ರಾಜಕಾರಣಿಗಳ ಪಾದ ಮುಟ್ಟಿ ನಮಸ್ಕರಿಸಬೇಡಿ, ಅವರು ಅದಕ್ಕೆ ಅರ್ಹರಲ್ಲ” ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಬೀಡ್‌ನಲ್ಲಿ ನಡೆದ ಎನ್‌ಸಿಪಿ ಯುವ ಘಟಕದ ರ್‍ಯಾಲಿಯಲ್ಲಿ ಅಜಿತ್ ಪವಾರ್ ಕಾರ್ಯಕರ್ತರಿಗೆ ಈ ಸಲಹೆ ನೀಡಿದ್ದಾರೆ. ಹಾಗೆಯೇ ತಮ್ಮ ಭೇಟಿ ವೇಳೆ ಹೂಮಾಲೆ, ಸ್ಮರಣಿಕೆ ಮತ್ತು ಶಾಲುಗಳನ್ನು ನೀಡಿದ ಕಾರಣಕ್ಕೆ ಕಾರ್ಯಕರ್ತರನ್ನು ಗದರಿಸಿದರು.
ಇದನ್ನು ಓದಿದ್ದೀರಾ? ತಮ್ಮ ಬಣದ ನಾಯಕರ ಜೊತೆ ಶರದ್ ಪವಾರ್ ಭೇಟಿಯಾದ ಅಜಿತ್ ಪವಾರ್
“ನನಗೆ ಏನನ್ನೂ ಕೊಡಬೇಡಿ. ನಾನು ಪ್ರೀತಿ ಮತ್ತು ಗೌರವವನ್ನು ಮಾತ್ರ ಬಯಸುತ್ತೇನೆ. ನನ್ನ ಪಾದಗಳಿಗೆ ಬೀಳಬೇಡಿ. ಇಂದಿನ ರಾಜಕಾರಣಿಗಳು ಅವರ ಪಾದ ಮುಟ್ಟಲು ಯೋಗ್ಯರಲ್ಲ” ಎಂದು ತಿಳಿಸಿದರು.
“ನನ್ನ ಪೋಷಕರು ಮತ್ತು ಚಿಕ್ಕಪ್ಪನ ಆಶೀರ್ವಾದದಿಂದ, ನಾನು ಚೆನ್ನಾಗಿದ್ದೇನೆ. ನನಗೆ ಬೇಕಾಗಿರುವುದು ನಿಮ್ಮ ಪ್ರೀತಿ ಮತ್ತು ಪರಸ್ಪರ ಗೌರವ ಮಾತ್ರ” ಎಂದೂ ಹೇಳಿದರು.
1999ರಲ್ಲಿ ಅಜಿತ್ ಪವಾರ್ ಚಿಕ್ಕಪ್ಪ ಶರದ್ ಪವಾರ್ ಅವರು ಸ್ಥಾಪಿಸಿದ ಎನ್‌ಸಿಪಿ ಪಕ್ಷವು ಒಂದು ವರ್ಷದ ಹಿಂದೆ ಇಬ್ಭಾಗವಾಗಿದೆ. ಅಜಿತ್ ಪವಾರ್ ಎನ್‌ಸಿಪಿಯಿಂದ ಹೊರ ನಡೆದು ಪ್ರತ್ಯೇಕ ಪಕ್ಷ ಸ್ಥಾಪಿಸಿದರು. 2023ರ ಜುಲೈನಲ್ಲಿ ಬಿಜೆಪಿ-ಶಿವಸೇನೆ (ಶಿಂದೆ ಬಣ) ಮೈತ್ರಿಕೂಟ ಸೇರಿ ಉಪಮುಖ್ಯಮಂತ್ರಿಯಾದರು.
ಇದನ್ನು ಓದಿದ್ದೀರಾ? ದಣಿವೂ ಇಲ್ಲ, ನಿವೃತ್ತಿಯೂ ಆಗಿಲ್ಲ: ಅಜಿತ್ ಪವಾರ್‌ಗೆ ಶರದ್ ಪವಾರ್ ತಿರುಗೇಟು
ಶಾಸಕಾಂಗ ಬಲದ ಆಧಾರದ ಮೇಲೆ ಅಜಿತ್ ಪವಾರ್ ನೇತೃತ್ವದ ಪಕ್ಷ ಎನ್‌ಸಿಪಿ ಹೆಸರು ಮತ್ತು ಗಡಿಯಾರದ ಚಿಹ್ನೆಯನ್ನು ಪಡೆದುಕೊಂಡಿತು. 2024ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ, ಶಿವಸೇನೆ, ಬಿಜೆಪಿ ಜೊತೆಯಾಗಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ 57 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದಿದೆ. ಶರದ್ ಪವಾರ್ ಅವರ ಎನ್‌ಸಿಪಿ ಕೇವಲ 10 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಅದಕ್ಕೂ ಮುನ್ನ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಸ್ಥಾನವನ್ನೂ ಅಜಿತ್ ಪವಾರ್ ಪಕ್ಷ ಪಡೆದಿಲ್ಲ.
