- ಕೇಂದ್ರ ಕೃಷಿ ಇಲಾಖೆ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿಯಾದ ಸಚಿವರು
- ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 600 ಕೋಟಿ ರೂ.ಗೆ ಮನವಿ: ಪ್ರಿಯಾಂಕ್ ಖರ್ಗೆ
ಬರದ ಕಾರಣ 17,901 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನವದೆಹಲಿಯಲ್ಲಿ ಕೇಂದ್ರ ಕೃಷಿ ಇಲಾಖೆ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗಳನ್ನು ಬುಧವಾರ ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿ ಶೀಘ್ರದಲ್ಲಿಯೇ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದವರು.
“ಕೇಂದ್ರದ ಅಧಿಕಾರಿಗಳು ರಾಜ್ಯಕ್ಕೆ ಬಂದು ಅಧ್ಯಯನ ಕೂಡ ಮಾಡುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಕೇಂದ್ರದ ಅಧಿಕಾರಿಗಳ ತಂಡ ವರದಿ ಸಲ್ಲಿಸಬಹುದು. ಆದಷ್ಟು ಬೇಗ ಹಣ ಬಿಡುಗಡೆ ಆಗಬೇಕು ಅಂತಾ ಮನವಿ ಮಾಡಿದ್ದೇವೆ” ಎಂದರು.
“ಜೂನ್ನಲ್ಲಿ ಶೇ.56ರಷ್ಟು ಮಳೆ ಕೊರತೆ, ಜುಲೈನಲ್ಲಿ ಶೇ 29ರಷ್ಟು ಮಳೆ ಕೊರತೆ, ಆಗಸ್ಟ್ನಲ್ಲಿ ಶೇ 73 ರಷ್ಟು ಮಳೆ ಕೊರತೆ, ಸೆಪ್ಟೆಂಬರ್ನಲ್ಲಿ ಶೇ 26ರಷ್ಟು ಮಳೆ ಕೊರತೆ ಹಾಗೂ ಅಕ್ಟೋಬರ್ ತಿಂಗಳಲ್ಲಿ ಶೇ 63 ರಷ್ಟು ಮಳೆ ಕೊರತೆ ಆಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಅಗ್ನಿವೀರ’ ಯೋಜನೆ ಟೊಳ್ಳೆಂದು ಸಾರಿದೆ ಇಸ್ರೇಲ್ ಯುದ್ಧ!
216 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಬರಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಪಶು ಸಂಗೋಪನೆ ಚಟುವಟಿಕೆಗಳಿಗೆ 355 ಕೋಟಿ ರೂ. ನೀಡಲು ಮನವಿ ಮಾಡಿದ್ದೇವೆ. ಡಿಸೆಂಬರ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಒಟ್ಟು 17,901 ಕೋಟಿ ರೂ. ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ” ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ವೇಳೆ ಉಪಸ್ಥಿತರಿದ್ದು, ಸುದ್ದಿಗಾರರ ಜೊತೆ ಮಾಹಿತಿ ಹಂಚಿಕೊಂಡ ಅವರು, “ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಹಣ ಬರಬೇಕಿದೆ. ಈ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಹಣ ಕೊಡೋಕೆ ಆಗ್ತಾ ಇಲ್ಲಾ. ಅಂದಾಜು 600 ಕೋಟಿ ರೂ ಹಣ ಬರಬೇಕಿದೆ. ಇದು ಮೊನ್ನೆ ದಸರಾ ಹಬ್ಬಕ್ಕೂ ಮುಂಚೆ ಅಂದಾಜು ಮಾಡಲಾಗಿದ್ದು, ಈ ಹಣ ಬಿಡುಗಡೆ ಮಾಡಬೇಕು ಅಂತ ಮನವಿ ಮಾಡಲಾಗಿದೆ” ಎಂದು ಹೇಳಿದರು.