ಯಾರದ್ದೋ ಆಸ್ತಿಗೆ ನಕಲಿ ವ್ಯಕ್ತಿತ್ವದ ದಾಖಲೆ ಸೃಷ್ಟಿಸಿ ಅಮಾಯಕರನ್ನು ವಂಚಿಸುವ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಆರ್‌ಟಿಸಿ ಗೆ ಆಧಾರ್ ಜೋಡಿಸುವ ಅಭಿಯಾನಕ್ಕೆ ಇಂದಿನಿಂದ ಅಧಿಕೃತ ಚಾಲನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಅಮಾಯಕರ ಜಮೀನುಗಳನ್ನು ವ್ಯವಸ್ಥಿತವಾಗಿ ದೋಚುವ ಕೆಲಸವಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಸತ್ತವರ ಜಮೀನುಗಳನ್ನೂ ಸಹ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಕುರಿತು ರಾಜ್ಯದ ಮೂಲೆ ಮೂಲೆಯಿಂದ ದೂರುಗಳು ಕೇಳಿ ಬರುತ್ತಿವೆ” ಎಂದರು.
“ವಂಚನೆಗೊಳಗಾದವರು ಹಲವು ವರ್ಷಗಳಿಂದ ಕೋರ್ಟ್ ಕಚೇರಿಗೆ ಅಲೆಯುವಂತಾಗಿದೆ. ಇಂತಹ ಪ್ರಕರಣಗಳನ್ನು ತಡೆಯುವ ಹಾಗೂ ಜನಸಾಮಾನ್ಯರ ಪಾಲಿಗೆ ಅವರ ಜಮೀನಿನ ಹಕ್ಕನ್ನು ರಕ್ಷಿಸಿ ಅಧಿಕೃತಗೊಳಿಸುವ ಉದ್ದೇಶದಿಂದ ಆಧಾರ್ ಜೋಡಣೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ” ಎಂದು ವಿವರಿಸಿದರು.
“ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ದೋಚುವವರ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಹಲವು ಜನರಿಂದ ಕೇಳಿಬಂದಿತ್ತು. ಇತ್ತೀಚೆಗೆ ಹಲವು ಶಾಸಕರು, ಸಚಿವರು ಹಾಗೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಇದೇ ಕಾರಣಕ್ಕೆ ಆಧಾರ್ ಜೋಡಣೆ ಅಭಿಯಾನಕ್ಕೆ ಮೂರು ತಾಲೂಕುಗಳಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಇದೀಗ ಪ್ರಾಯೋಗ ಯಶಸ್ವಿಯಾಗಿದ್ದು ಇಂದಿನಿಂದಲೇ ರಾಜ್ಯಾದ್ಯಂತ ಆಧಾರ್ ಜೋಡನೆ ಅಭಿಯಾನವನ್ನು ವಿಸ್ತರಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಜನ ಸಾಮಾನ್ಯರು ಇದನ್ನು ಅನಾನುಕೂಲ ಎಂದು ಭಾವಿಸದೆ ಜಮೀನಿನ ಮಾಲಿಕತ್ವದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ವಂಚನೆ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ನೋಂದಣಿ ಸಮಯದಲ್ಲಿ ಆಧಾರ್ ಜೋಡಣೆಗೆ ಸಕಾರಾತ್ಮಕವಾಗಿ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಸೆ.2 ರಿಂದ ರಾಜ್ಯಾದ್ಯಂತ ಎನಿವೇರ್ ನೋಂದಣಿ
ಸೆಪ್ಟಂಬರ್ 2 ರಿಂದ “ಎನಿವೇರ್ ನೋಂದಣಿ” ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ರಾಜ್ಯದಲಿ 252 ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿ ಇದೆ. ಆದರೆ, ಈ ಪೈಕಿ 50 ಕಚೇರಿಗಳಲ್ಲಿ ಮಾತ್ರ ಸಿಬ್ಬಂದಿಗಳಿಗೆ ಹೆಚ್ಚು ಕೆಲಸದ ಒತ್ತಡ ಇದೆ. ಹೀಗಾಗಿ ಆ ಕಚೇರಿಗಳಿಗೆ ಬರುವ ಜನರಿಗೆ ಅನಾನುಕೂಲವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಕೆಲಸ ಆಗಲ್ಲ, ಕಾಯಬೇಕು, ಮಧ್ಯವರ್ತಿಗಳ ಕಾಟ ಇದೆ ಎಂಬ ದೂರುಗಳಿವೆ. ಇದೇ ಕಾರಣಕ್ಕೆ “ಎನಿವೇರ್ ನೋಂದಣಿ” ವ್ಯವಸ್ಥೆಗೆ ಚಾಲನೆ ನೀಡಲಾಯಿತು” ಎಂದರು.
ಮುಂದುವರೆದು, “ಆಸ್ತಿ ನೋಂದಣಿಗೆ ಮುಂದಾಗುವ ವ್ಯಕ್ತಿ ತನ್ನ ಜಿಲ್ಲೆ ವ್ಯಾಪ್ತಿಯ, ತನಗೆ ಅನುಕೂಲವಾಗುವ ಹಾಗೂ ಜನ ಸಂದಣಿ ಇಲ್ಲದ ಯಾವುದೇ ಉಪ ನೋಂದಣಿ ಕಚೇರಿಗೆ ತೆರಳಿ ಆನ್‌ಲೈನ್ ಮೂಲಕ ಸಮಯ ಕಾಯ್ದಿರಿಸಿ ತನ್ನ ಆಸ್ತಿ ನೋಂದಣಿ ಮಾಡಿಕೊಳ್ಳಲು “ಎನಿವೇರ್” ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಈ ಯೋಜನೆಯನ್ನು ಫೆಬ್ರವರಿಯಿಂದಲೇ ತುಮಕೂರು ಹಾಗೂ ಬೆಳಗಾವಿಯಲ್ಲಿ ಪ್ರಯೋಗಿಕವಾಗಿ ಚಾಲನೆ ನೀಡಲಾಗಿತ್ತು” ಎಂದು ಹೇಳಿದರು.