ಶಿಗ್ಗಾಂವಿ ಉಪ ಚುನಾವಣೆಗೆ ವೈಯಕ್ತಿಕ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ಬೇಡ ಅಂತ ಹೇಳಿದ್ದೇನೆ. ಮುಂದಿನ ವಿಚಾರ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಜೊತೆಗೆ ಚರ್ಚೆಯಾಗಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಇಷ್ಟು ವರ್ಷ ಅಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಅಲ್ಲಿನ ಜನರು ನನ್ನ ಮಗನ ಹೆಸರು ಹೇಳಿರಬಹುದು. ಆದರೆ, ನನಗೆ ಮಗನನ್ನು ಚುನಾವಣೆಗೆ ನಿಲ್ಲಿಸಲು ಮನಸ್ಸಿಲ್ಲ” ಎಂದರು.
“ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬುಲಾವ್ ಮೇರೆಗೆ ದೆಹಲಿಗೆ ಬಂದಿದ್ದೇನೆ. ಅವರು, ಮಹಾರಾಷ್ಟ್ರ ಜಾರ್ಖಂಡ್ ಸಂಸದೀಯ ಮಂಡಳಿ ಸಭೆ ನಡೆಸಿ ಬಳಿಕ ನಮ್ಮಗೆ ಸಮಯ ನೀಡಲಿದ್ದಾರೆ. ಅವರನ್ನು ಭೇಟಿಯಾಗಿ ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದೇನೆ” ಎಂದು ಹೇಳಿದರು.
“ಶಿಗ್ಗಾಂವಿ, ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಮಾಡಲಿದ್ದೇವೆ. ಇದೇ ಕಾರಣಕ್ಕೆ ಚರ್ಚಿಸಲು ಜೆ ಪಿ ನಡ್ಡಾ ಅವರು ಕರೆದಿದ್ದಾರೆ” ಎಂದರು.
ಶಿಗ್ಗಾವಿಯಲ್ಲಿ ಸ್ಥಳೀಯ ಮುಖಂಡರು ಭರತ್ ಬೊಮ್ಮಾಯಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಲ್ಲಿನ ಜನರು ಮತ್ತು ನಾಯಕರ ನಡುವೆ ಏನು ಮಾತುಕತೆಯಾಗಿದೆ ಎಂಬುದು ಗೊತ್ತಿಲ್ಲ” ಎಂದು ಹೇಳಿದರು.