ಬಿಜೆಪಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆಯಂತಹ ಕೇಂದ್ರೀಯ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ತಮ್ಮ 63 ನೇ ಹುಟ್ಟುಹಬ್ಬದ ಮುನ್ನಾದಿನದಂದು ಶಿವಸೇನಾ (ಯುಬಿಟಿ) ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ಉದ್ಧವ್ ಠಾಕ್ರೆ, “ಇಡಿ, ಸಿಬಿಐ, ಐಟಿ ಇಲಾಖೆಗಳು ಎನ್‌ಡಿಎಯ ನಿಜವಾದ ಶಕ್ತಿಯಾಗಿವೆ. ಕಳೆದ ವಾರ, ‘ಎನ್‌ಡಿಎ’ ಹೆಸರಿನ ‘ಅಮೀಬಾ’ ಜೀವಂತವಾಗಿದೆ ಎಂದು ನಮಗೆ ತಿಳಿಯಿತು. ದೇಶವನ್ನು ಪ್ರೀತಿಸುವ ಜನರು ‘ಇಂಡಿಯಾ’ ಒಕ್ಕೂಟವನ್ನು ರಚಿಸಿದ್ದಾರೆ. ತಮ್ಮ ಬಳಿ 36 ಪಕ್ಷಗಳಿವೆ ಎಂದು ಎನ್‌ಡಿಎ ಹೇಳುತ್ತಿದೆ. ಆದರೆ ಅವರಿಗೆ ನಿಜವಾಗಿಯೂ 36 ಪಕ್ಷಗಳ ಅಗತ್ಯವಿಲ್ಲ. ಎನ್‌ಡಿಎ ಈಗ ಮೂರು ಪ್ರಬಲ ಪಕ್ಷಗಳನ್ನು ಹೊಂದಿದ್ದು, ಅವುಗಳು ಇಡಿ, ಸಿಬಿಐ ಮತ್ತು ಐಟಿ ಮಾತ್ರ“ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರದ ಪರಿಸ್ಥಿತಿ, ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನ, ಏಕನಾಥ್ ಶಿಂಧೆ ಅವರ ಬಂಡಾಯ ಸೇರಿದಂತೆ ಹಲವಾರು ವಿಷಯಗಳ ಕುರಿತು ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಬಿಆರ್‌ಎಸ್ ಅವಿಶ್ವಾಸ ನಿರ್ಣಯ ಮಂಡನೆ
ಶಿವಸೇನೆ ಹೆಸರು ಮತ್ತು ಚಿಹ್ನೆಯ ಬಗ್ಗೆ ಮಾತನಾಡಿದ ಉದ್ಧವ್, “ನನ್ನ ಗುರುತು ಏನೆಂದರೆ, ನಾನು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರ ಮಗ. ಬಾಳಾಸಾಹೇಬರ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗಬಲ್ಲೆ ಎಂಬ ವಿಶ್ವಾಸವನ್ನು ನನಗೆ ಜನ ನೀಡಿದ್ದಾರೆ” ಎಂದು ಹೇಳಿದರು.
“ನಾನು ಬಿಜೆಪಿಗೆ ವಂಚಿಸಿದ್ದೇನೆ ಎಂದು ಹೇಳುತ್ತಾರೆ. ಆದರೆ ಈಗ ಎನ್‌ಸಿಪಿ ಏಕೆ ಇಬ್ಬಾಗವಾಯಿತು. ನೀವು ಈಗಾಗಲೇ ಶಿವಸೇನೆಯನ್ನು ಒಡೆಯುವ ಮೂಲಕ ಸರ್ಕಾರವನ್ನು ರಚಿಸಿದ್ದೀರಿ” ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ದೇಶದ ಇತಿಹಾಸಕ್ಕೆ 2024ರ ವರ್ಷ ಬಹಳ ಮುಖ್ಯ ಎಂದು ನಾನು ಹೇಳುತ್ತೇನೆ. ಮತ್ತೊಮ್ಮೆ ಈ ಸರ್ಕಾರ ಬಂದರೆ, ಪ್ರಜಾಪ್ರಭುತ್ವ ಜೀವಂತವಾಗಿದೆಯೇ ಮತ್ತು ಮತ್ತೆ ಚುನಾವಣೆಗಳು ನಡೆಯುತ್ತವೆಯೇ ಎಂದು ನನಗೆ ಅನುಮಾನವಿದೆ. ನಾವು ಸಂವಿಧಾನವನ್ನು ಅನುಸರಿಸುತ್ತೇವೆ. ಸರ್ಕಾರಕ್ಕೆ ಹಾಗೂ ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆಯಿಲ್ಲ” ಎಂದು ಹೇಳಿದ್ದಾರೆ.