ಶನಿವಾರ ಈದಿನ.ಕಾಮ್ ವಿಡಿಯೋವೊಂದನ್ನ ಬಯಲಿಗೆಳೆದಿತ್ತು. ಅದೇನೂ ಹೊಸ ವಿಡಿಯೋ ಅಲ್ಲ. ಆದರೆ, ಇವತ್ತಿನ ಸಂದರ್ಭದಲ್ಲಿ ಅದು ಬಹಳ ಮುಖ್ಯವಾದ ವಿಡಿಯೋ ಆಗಿತ್ತು. ಅದು ಈ ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು. ಆ ವಿಡಿಯೋದಲ್ಲಿ ಬೊಮ್ಮಾಯಿ ಅವರು ವಕ್ಫ್ ಆಸ್ತಿ ಅಲ್ಲಾಹ್ನದ್ದು. ಆ ಆಸ್ತಿಯನ್ನ ಹಲವರು ಕಬಳಿಸಿದ್ದಾರೆ. ಅದನ್ನ ವಾಪಸ್ ತಕೊಬೇಕು. ಒಂದೇ ಒಂದು ಇಂಚು ಸಹಾ ಬಿಡದೇ ತಗೋಬೇಕು. ಇಲ್ಲ ಅಂದ್ರೆ, ನೀವು ತಪ್ಪಿತಸ್ಥರಾಗ್ತೀರಿ’ ಅಂತ ಮುಸ್ಲಿಂ ಮುಖಂಡರಿಗೆ ಕಿವಿಮಾತು ಹೇಳಿದ್ದರು.
ಆ ವಿಡಿಯೋವನ್ನು ಇವತ್ತಿನ ಸಂದರ್ಭಕ್ಕೆ ಅನ್ವಯ ಮಾಡಿ ಈದಿನ.ಕಾಮ್ ಹೊರತಂದ ಮೇಲೆ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಸಚಿವ ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ನಾಯಕರು ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿವಾದ, ದಾಂಧಲೆ ಎಬ್ಬಿಸ್ತಿರೋ ಬಿಜೆಪಿಯನ್ನ ಪ್ರಶ್ನೆ ಮಾಡ್ತಿದ್ದಾರೆ. ಇದೆಲ್ಲ ನಡೀವಾಗ, ಬೊಮ್ಮಾಯಿ ಅವರು ಒಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ʼನಾನು ವಕ್ಫ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೋ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆʼ ಎಂದಿದ್ದಾರೆ. ಸದ್ಯಕ್ಕೆ, ‘ವಕ್ಫ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿದ್ದು’ ಅಂತ ಅವರೇ ಹೇಳಿದ್ದಾರೆ. ಅಂದ ಮೇಲೆ, ಅದರಲ್ಲಿ ಅಪಪ್ರಚಾರ ಏನಿದೆ. ಯಾರಾದರೂ ಅವರು ಹೇಳಿದ್ದನ್ನ ತಿರುಚಿದ್ದಾರಾ? ಈದಿನ.ಕಾಮ್ ಏನಾದರೂ ತಿರುಚಿದೆಯಾ?
ಅವರು ಟ್ವೀಟ್‌ನಲ್ಲಿ ಏನ್ ಹೇಳಿದ್ದಾರೆ; “ಮಾನ್ಯ ವಕ್ಪ್ ಸಚಿವರಾದ ಜಮೀರ್ ಅವರು ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ವಕ್ಪ್ ಬೋರ್ಡ್ ಸಭೆ ಮಾಡಿಲ್ಲ. ವಕ್ಪ್ ಬೋರ್ಡ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ವಕ್ಪ್ ಆಸ್ತಿ ವಶಪಡಿಸಿಕೊಳ್ಳಬೇಕೆಂದು ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೊಟೀಸ್ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವ ವಿಷಯವೂ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ” ಎಂದಿದ್ದಾರೆ.
ಮಾನ್ಯ ವಕ್ಪ್ ಸಚಿವರಾದ @BZZameerAhmedK ಅವರು ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ.
— Basavaraj S Bommai (@BSBommai) November 3, 2024
ನಾನು ಯಾವುದೇ ವಕ್ಪ್ ಬೋರ್ಡ್ ಸಭೆ ಮಾಡಿಲ್ಲ. ವಕ್ಪ್ ಬೋರ್ಡ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ @INCKarnataka… pic.twitter.com/P9ZtKAzmmJ
ಇದು ಹಸೀ-ಹಸೀ ಸುಳ್ಳು. ಅವರದ್ದೇ ಟ್ವೀಟ್ ನಲ್ಲಿ ಅವರೇ ಹೇಳ್ತಾರೆ, ‘ವಕ್ಫ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೋ’ ಅಂತ. ಅಂದ ಮೇಲೆ, ವಕ್ಫ್ ಆಸ್ತಿ ಬಗ್ಗೆ ಮಾತನಾಡಿದ್ದಾರೆ ಅನ್ನೋದು ಸ್ಪಷ್ಟ.. ಅಂದ ಮೇಲೆ ವಕ್ಫ್ ಬೋರ್ಡ್ ಆಸ್ತಿಯನ್ನ ಒಂದಿಂಚೂ ಬಿಡದ ಹಾಗೆ ವಾಪಸ್ ತಗೊಳಿ ಅಂದ ಮೇಲೆ, ಅದನ್ನೇ ಜಮೀರ್ ಅಹಮದ್ ಅವರೂ ಮಾಡ್ತಾ ಇದ್ದಾರೆ, ಸಿದ್ದರಾಮಯ್ಯನವರ ಸರ್ಕಾರ ಕೂಡ ಬೊಮ್ಮಾಯಿ ಹೇಳಿದ್ದನ್ನೇ ಮಾಡ್ತಿದೆ ಅಂದ ಮೇಲೆ ಇದರಲ್ಲಿ ಅಪಪ್ರಚಾರ ಏನಿದೆ?
ಇನ್ನು, ಬೊಮ್ಮಾಯಿ ಅವರು ಹೇಳ್ತಿರೋ ಮತ್ತೊಂದು ಪಾಯಿಂಟ್, ‘ನಾನು ಯಾವುದೇ ವಕ್ಫ್ ಬೋರ್ಡ್ ಸಭೆ ಮಾಡಿಲ್ಲ’ ಅಂತ.. ಹೌದು. ಯಾವುದೇ ಮುಖ್ಯಮಂತ್ರಿ ವಕ್ಫ್ ಬೋರ್ಡ್ ಸಭೆ ಮಾಡ್ತಾ ಕೂರಲ್ಲ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ವಕ್ಫ್ ಬೋರ್ಡ್ ಸಭೆ ಮಾಡಬೇಕಿಲ್ಲ. ವಕ್ಫ್ ಬೋರ್ಡ್ ಸಭೆಗಳನ್ನ ಮಾಡಬೇಕಿರೋದು ವಕ್ಫ್ ಬೋರ್ಡ್. ಅದರ ಉಸ್ತುವಾರಿ ನಡೆಸಬೇಕಿರೋದು ವಕ್ಫ್ ಸಚಿವರು. ಅವರು ಮಾಡಿಲ್ಲ ಅಂದ್ರೆ ಅದು ತಪ್ಪು. ಆ ಇಲಾಖೆಯ ಸಚಿವರಿಗೆ ಅದರಲ್ಲಿ ಏನಾಗುತ್ತಿದೆ ಅನ್ನೋದರ ಅರಿವು ಇರಲೇಬೇಕು. ಅವರ ಉಸ್ತುವಾರಿಯನ್ನ ಸಿಎಂ ಸಹಾ ಮಾಡಬೇಕು.
‘ಬೆಂಗಳೂರಲ್ಲಿ ನಡೆದ ವಕ್ಫ್ ಬೋರ್ಡ್ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ವಕ್ಫ್ ಆಸ್ತಿ ಕಬಳಿಸಿರುವವರಿಂದ ವಕ್ಫ್ ಆಸ್ತಿ ವಶಪಡಿಸಿಕೊಳ್ಳಬೇಕು ಅಂತ ಹೇಳಿರೋದನ್ನ ತಿರುಚಿದ್ದಾರೆ’ ಅಂತ ಬೊಮ್ಮಾಯಿ ಅವರು ಹೇಳ್ತಿದ್ದಾರೆ. ಬೊಮ್ಮಾಯಿ ಅವರು ಹೇಳಿರೋದೇನು ವಕ್ಫ್ ಬೋರ್ಡ್ ಆಸ್ತಿಯನ್ನ ವಾಪಸ್ ತಕೊಬೇಕು ಅಂತ, ಜಮೀರ್ ಅವ್ರು ಹೇಳ್ತಿರೋದೇನು? ವಕ್ಫ್ ಬೋರ್ಡ್ ಆಸ್ತಿನ ರಕ್ಷಣೆ ಮಾಡ್ಕೊಬೇಕಿರೋದು ನಮ್ ಕರ್ತವ್ಯ ಅಂತ. ಇಬ್ಬರೂ ತಪ್ಪು ಹೇಳಿಲ್ಲ. ಆದ್ರೆ, ಬೊಮ್ಮಾಯಿ ಅವರು ತಾವೇ ಹೇಳಿದ್ದ ಮಾತಿಗೆ ಉಲ್ಟಾ ಹೊಡೆಯುತ್ತಿದ್ದಾರೆ? ನಾನು ಹೇಳಿಲ್ಲ ಅಂತಾನೂ, ಹೇಳಿದ್ದೀನಿ ಅಂತಲೂ ಹೇಳ್ತಾ ಇದ್ದಾರೆ. ಒಂದು ವೇಳೆ ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿ ಒಳಗೆ ಹಾಕ್ಕೊಂಡಿದ್ದಾರೆ ಅಂತ ಅನ್ವರ್ ಮಾಣಿಪ್ಪಾಡಿ ಹೇಳಿದ್ದಕ್ಕೆ ವಿರುದ್ಧವಾಗಿ ಜಮೀರ್ ಅಹಮದ್ ಅವರು, ಕಾಂಗ್ರೆಸ್‌ನವರನ್ನ ಬಿಟ್ಟುಬಿಡಿ ಅಂತೇನಾದರೂ ಹೇಳಿದ್ದಾರಾ? ಇಲ್ಲ.
ವಕ್ಫ್ ಆಸ್ತಿ ವಿಚಾರದಲ್ಲಿ ಹಿಂದೆ ಬೊಮ್ಮಾಯಿ ಅವರು ಸರಿಯಾಗಿರೋ ಮಾತನ್ನೇ ಹೇಳಿದ್ದರು. ಇವಾಗ, ಅದೇ ವಿಚಾರದ ಕೋಮು ದ್ವೇಷ, ಕೋಮು ವಿವಾದಕ್ಕೆ ತಿರುಗಿಸಬೇಕು ಅಂತ ಬೊಮ್ಮಾಯಿ ಅವರಿಗೂ, ಅವರ ಪಕ್ಷಕ್ಕೂ ಅನ್ನಿಸಿದೆ. ಅದಕ್ಕಾಗಿ, ವಕ್ಫ್ ವಿಚಾರನ ಮುಂದೆ ತಂದು ರೈತರಿಗೆ ಅನ್ಯಾಯ ಆಗೋಗ್ತಿದೆ ಅಂತ ಕತೆ ಕಟ್ತಾ ಇದ್ದಾರೆ.
ಮುಖ್ಯವಾಗಿ, ಬೊಮ್ಮಾಯಿ ಹೇಳ್ತಿರೋ ಸುಳ್ಳು ಏನಂದ್ರೆ, ‘ರೈತರಿಗೆ ನೋಟಿಸ್ ಕೊಡೋದಾಗಲೀ, ಪಹಣಿ ತಿದ್ದುಪಡಿ ಮಾಡೋದಾಗಲಿ ಯಾವುದೂ ವಿಷಯ ನಮ್ಮ ಮುಂದೆ ಪ್ರಸ್ತಾಪ ಅಗಿರಲಿಲ್ಲ. ನಾವು ರೈತರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ’ ಅಂತ.
ಆದರೆ, ಅವರದ್ದೇ ಸರ್ಕಾರ, ಖುದ್ದು ನೋಟಿಸ್ ಜಾರಿ ಮಾಡಿರೋ ನೋಟಿಸ್‌ಗಳಿವೆ. 2022ರ ಸೆಪ್ಟೆಂಬರ್ 17ನೇ ತಾರೀಖು ಬೊಮ್ಮಾಯಿ ಅವರದ್ದೇ ಸರ್ಕಾರ, ವಿಜಯಪುರದ ಬಡಿಯ್ ಜಮಾನ್ ಲಹೊರಿ, ಬಸವರಾಜು, ಉಮಾ, ದಯಾನಂದ್ ಅವರಿಗೆ ನೋಟಿಸ್ ಕೊಟ್ಟಿದೆ. ಅದೇ ದಿನ, ರವಿ, ಶಾಂತ, ಸಂಜು, ಖಾಜಸಾಬ್, ಕೃಷ್ಣ ಅನ್ನೋರಿಗೂ ಮತ್ತೊಂದು ನೋಟಿಸ್ ಕೊಟ್ಟಿದ್ದಾರೆ. ಗೋವಿಂದ್ ಮತ್ತು ಅಶೋಕ್ ಅನ್ನೋರಿಗೂ ಪ್ರತ್ಯೇಕ ನೋಟಿಸ್‌ಗಳು ಹೋಗಿವೆ. ಅಂದ್ರೆ, ಬೊಮ್ಮಾಯಿ ಸರ್ಕಾರ ರೈತರಿಗೆ ನೋಟಿಸ್ ಕೊಟ್ಟಿರೋದು ನಿಜ.

ಇನ್ನೂ ಒಂದು ಸತ್ಯ ಏನಂದ್ರೆ, ವಿಜಯಪುರ ಮಾತ್ರವಲ್ಲದೆ, ರಾಜ್ಯಾದ್ಯಂತ ಹಲವು ರೈತರಿಗೆ ಬೊಮ್ಮಾಯಿ ಸರ್ಕಾರ ನೋಟಿಸ್ ಕೊಟ್ಟಿದೆ. ಮಾತ್ರವಲ್ಲ, ನೋಟಿಸ್ ಅನ್ನೂ ಕೊಡದೆ ರೈತರಿಂದ ಏಕಾಏಕಿ ಭೂಮಿ ವಾಪಸ್ ತಕೊಂಡಿದ್ದಾರೆ. ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದಾರೆ. ಪಹಣಿ ಕಲಂ 9 ಮತ್ತು 11ರಲ್ಲಿ ಬದಲಾವಣೆ ಮಾಡಿದ್ದಾರೆ. ಕೆಲವರಿಗೆ ನೋಟಿಸ್ ಕೊಟ್ಟು, ಕೆಲವರಿಗೆ ನೊಟೀಸ್ ಕೊಡದೆ ವಕ್ಫ್ ಆಸ್ತಿಗಳನ್ನ ವಕ್ಫ್‌ಗೆ ವಾಪಸ್ ಕೊಡಿಸಿದ್ದಾರೆ. ಇಷ್ಟೆಲ್ಲಾ ಸರ್ಕಾರಿ ದಾಖಲೆಗಳು ಇದ್ದರೂ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಸುಳ್ಳು ಹೇಳೋದಕ್ಕೆ ನಿಜಕ್ಕೂ ನಾಚಿಕೆಯಾಗಬೇಕಲ್ವಾ…

ಇನ್ನು, ವಕ್ಫ್ ಗೆಜೆಟ್ ನೋಟಿಪಿಕೇಶನ್ಅನ್ನೇ ರದ್ದು ಮಾಡಬೇಕು ಅಂತ ಕೂಡ ಬೊಮ್ಮಾಯಿ ಅವರು ಹೇಳ್ತಿದ್ದಾರೆ. 1970ರ ದಶಕದಲ್ಲಿ ಆಗಿರುವ ವಕ್ಫ್ ಗೆಜೆಟ್ ನೋಟಿಪಿಕೇಶನ್ಅನ್ನ ರದ್ದು ಮಾಡಬೇಕು ಅಂತ ಟ್ವೀಟ್ ಮಾಡಿದ್ದಾರೆ. ಆದ್ರೆ, ಅದೇ ಗೆಜೆಟ್ ನೋಟಿಫಿಕೇಷನ್ ಆಧಾರದ ಮೇಲೆಯೇ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಅನ್ವರ್ ಮಾಣಿಕ್ ಪಾಡಿ ಅವರು ವಕ್ಫ್ ಆಸ್ತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಅದೇ ಗೆಜೆಟ್ ನೋಟಿಫಿಕೇಷನ್ ಆಧಾರದ ಮೇಲೆಯೇ ಬೊಮ್ಮಾಯಿ ಅವರು ಬೇರೆ ನಾಯಕರು ವಕ್ಫ್ ಆಸ್ತಿಯನ್ನ ನುಂಗಿದ್ದಾರೆ ಅಂತ ಆರೋಪಿಸಿದ್ದಾರೆ.
ಒಂದ್ ಕಡೆ, ವಕ್ಫ್ ಆಸ್ತಿ ಕಬಳಿಸಿರುವ ನಾಯಕರಿಂದ ಭೂಮಿಯನ್ನ ವಾಪಸ್ ಪಡೀಬೇಕು ಅಂತ, ಇನ್ನೊಂದ್ ಕಡೆ, ಸಚಿವ ಜಮೀರ್ ಅಹ್ಮದ್ ಅವರು ರೈತರಗೆ ನೋಟಿಸ್ ಕೊಡೋದಕ್ಕೂ ಮುಂಚೆ ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ವಕ್ಫ್ ಆಸ್ತಿ ಒತ್ತುವರಿ ಮಾಡಿದ್ದಾರೆ. ಅದನ್ನ ವಾಪಸ್ ತಕೊಳಿ ಅಂತ ಬೊಮ್ಮಾಯಿ ಹೇಳ್ತಿದ್ದಾರೆ. ಇದೇ ಸಮಯದಲ್ಲಿ, ಗೆಜೆಟ್ ನೋಟಿಫಿಕೇಷನ್ನೇ ರದ್ದು ಮಾಡಬೇಕು ಅಂತನೂ ಹೇಳ್ತಾರೆ.
ಅಂದ್ರೆ, ಅವರ ಮಾತು, ಅವರ ನಡೆಗಳ ಬಗ್ಗೆ ಅವರಿಗೇ ಕ್ಲಾರಿಟಿ ಇಲ್ಲ. ಬೊಮ್ಮಾಯಿ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅವರು ಜವಾಬ್ದಾರಿಯಿಂದ ಮಾತನಾಡಬೇಕು. ನಿನ್ನೆ ಈದಿನ.ಕಾಮ್ ಯಾವ ವಿಡಿಯೋವನ್ನು ಜನರ ಮುಂದೆ ಇಟ್ಟಿತ್ತು. ಆ ವಿಡಿಯೋ ಮತ್ತು ಸ್ಟೋರಿ ವಿಚಾರದಲ್ಲಿ ನಾವು ಬದ್ದರಾಗಿದ್ದೀವಿ. ನಾವು ಆ ಹೇಳಿಕೆಗಳನ್ನು ಬೊಮ್ಮಾಯಿ ಅವರೇ ಹೇಳಿದ್ದಾರೆ ಅಂತ ಹೇಳಿದ್ದೀವಿ, ಅದನ್ನ ತಮ್ಮದೇ ಟ್ವೀಟ್‌ನಲ್ಲಿ ಬೊಮ್ಮಾಯಿ ವರು ಒಪ್ಪಿಕೊಂಡಿದ್ದಾರೆ. ಒಪ್ಕೊಂಡ್ ಮೇಲೆ, ಅದನ್ನ ತಿರುಚೋ ಕೆಲಸ ಮಾಡದೇ ಜವಾಬ್ದಾರಿಯಿಂದ ವರ್ತಿಸಿ ಅಂತ ನಾವು ಬೊಮ್ಮಾಯಿ ಅವರಿಗೆ ಕೇಳ್ತಾ ಇದ್ದೀವಿ.
ಈ ವರದಿ ಓದಿದ್ದೀರಾ?: ರೈತ ವಿರೋಧಿ ಯಾರು- ಬಿಜೆಪಿಯೇ ಅಥವಾ ವಕ್ಫ್ ಮಂಡಳಿಯೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಇಲ್ಲಿ ನಾವು ಹೇಳುವ ಮುಖ್ಯ ಸಂಗತಿ; ವಕ್ಫ್ ಆಸ್ತಿ ಅನ್ನೋದು ಮುಸ್ಲಿಂ ಶ್ರೀಮಂತರು ಸಮುದಾಯದ ಏಳಿಗೆಗಾಗಿ ಅಲ್ಲಾಹ್‌ನ ಹೆಸರಿನಲ್ಲಿ ಕೊಟ್ಟ ದಾನ. ಅದನ್ನೇ ಬೊಮ್ಮಾಯಿಯವರೂ ಸದರಿ ಕಾರ್ಯಕ್ರಮದಲ್ಲಿ ಹೇಳಿದ್ದರು. ಅದನ್ನೇ ನಾವೂ ತೋರಿಸಿದ್ವಿ. ಅದನ್ನೇ ಜಮೀರ್ ಅಹಮದ್ ಅವರೂ ಹೇಳಿದ್ದರು.
ಅದರ ಒತ್ತುವರಿ ಆಗಿದೆ. ಒತ್ತುವರಿ ಆಗಿದ್ದನ್ನು ವಶಪಡಿಸಿಕೊಳ್ಳಿ ಅಂತ ಬೊಮ್ಮಾಯಿಯವರೂ ಹೇಳಿದ್ರು, ಜಮೀರ್ ಅಹಮದ್ ಅವರೂ ಹೇಳಿದ್ರು. ಇದು ಕಾನೂನಿನ ಪ್ರಕಾರ ಅವರಿಬ್ಬರದ್ದೂ ಕರ್ತವ್ಯ.
ಇನ್ನು ರೈತರು ಉಳುಮೆ ಮಾಡುತ್ತಿರುವ ಜಮೀನಿನ ವಿಚಾರ. ಸರ್ವೆ ನಂಬರ್ ತಪ್ಪಾಗಿರೋದನ್ನ ಸರ್ಕಾರ ವಾಪಸ್ ತಗೊಂಡಿದೆ. ರೈತರಿಗೆ ಲ್ಯಾಂಡ್ ಟ್ರಿಬ್ಯುನಲ್ ವಿಚಾರದಲ್ಲಿ ಹೋಗಿರೋ ಲ್ಯಾಂಡ್‌ದು ಕಾಂಗ್ರೆಸ್ ಸರ್ಕಾರ ಮುಟ್ಟಿಲ್ಲ. ಯಾರಾದರೂ ಅಕ್ರಮ ಮಾಡಿದ್ದಾರೆ ಅಂದರೆ, ಅದಕ್ಕೆ ನೋಟೀಸ್ ಕೊಡ್ತಾ ಇದೆ. ನೋಟೀಸ್ ಕೊಟ್ಟಿರೋದು ಬಹುತೇಕ ಮುಸ್ಲಿಮರಿಗೇ.
ಆದರೆ, ಬಿಜೆಪಿ ಸರ್ಕಾರದಲ್ಲಿ ನೋಟೀಸ್ ಸಹಾ ಕೊಡದೇ ಪಹಣೀಲಿ ವಕ್ಫ್ ಅಂತ ತಿದ್ದಲಾಗಿದೆ. ಈಗ ಉಪಚುನಾವಣೆ ಇದೆ ಅಂತ ಕೋಮು ಗಲಭೆ ಎಬ್ಬಿಸೋಕೆ ಬಿಜೆಪಿ ಸುಳ್ಳು ಹೇಳ್ತಿದೆ. ಅದೃಷ್ಟವಶಾತ್ ಹಳೆಯ ವಿಡಿಯೋವನ್ನ ಈದಿನ.ಕಾಮ್ ಹುಡುಕಿದ್ದಕ್ಕೆ ಬೊಮ್ಮಾಯಿ ಸಿಕ್ಕಾಕಿಕೊಂಡಿದ್ದಾರೆ.
ಇಷ್ಟೇ ವಿಷಯ. ಬೊಮ್ಮಾಯಿಯವರೇ ನೀವು ಹಿಂದೆ ತಪ್ಪು ಮಾತಾಡಿರಲಿಲ್ಲ. ಈಗಲೂ ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿ ಹೊಡೆದುಕೊಂಡಿದ್ದರೆ, ಜಮೀರ್ ಅಹಮದ್ ಅವರ ಜೊತೆಗೆ ಕೈ ಜೋಡಿಸಿ, ಅದನ್ನು ಬಿಡಿಸಿಕೊಡಿ. ಅದನ್ನು ಬಿಟ್ಟು ಸುಳ್ಳು ಹೇಳಿ ಸಿಕ್ಕಾಕೋಬೇಡಿ ಅಂತ ನಮ್ಮ ಮನವಿ.